ಬುಧವಾರ, ಜೂನ್ 23, 2021
30 °C

ಕೋಲ್ಕತ್ತದಲ್ಲಿ ಪ್ರತಿಧ್ವನಿಸಿದ ‘ಗೋಲಿ ಮಾರೊ’ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಗೋಲಿ ಮಾರೊ’ (ಗುಂಡಿಕ್ಕಿ) ಎಂಬ ಘೋಷಣೆ ಕೋಲ್ಕತ್ತದಲ್ಲಿಯೂ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತರ ಒಂದು ಗುಂಪು ಭಾನುವಾರ ಈ ಘೋಷಣೆ ಕೂಗಿದೆ ಎಂದು ಹೇಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ‍್ಯಾಲಿಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಗುಂಪಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಗಳ ಗುಂಪು ಎದುರಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ‘ಗೋಲಿ ಮಾರೊ’ ಘೋಷಣೆ ಕೂಗಿದರು.

ಕೇಂದ್ರ ಕೋಲ್ಕತ್ತದ ಮೆಟ್ರೊ ನಿಲ್ದಾಣದ ಸಮೀಪ ಮಧ್ಯಾಹ್ನ ಎರಡು ಗಂಟೆಗೆ ಇದು ನಡೆದಿದೆ. ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆಯೇ ಅಲ್ಲಿ ಪ್ರಕ್ಷುಬ್ಧ ಸ್ಥಿತಿ ಸೃಷ್ಟಿಯಾಯಿತು. ಎರಡೂ ಗುಂಪುಗಳು ಪರಸ್ಪರರತ್ತ ನುಗ್ಗಲು ಕೂಡ ಯತ್ನಿಸಿದವು. ಆದರೆ, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. 

ತಮ್ಮ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ ಎಂಬುದನ್ನು ಬಿಜೆಪಿ ಮುಖಂಡರು ಅಲ್ಲಗಳೆದಿದ್ದಾರೆ. ಎಡರಂಗ ಮತ್ತು ಕಾಂಗ್ರೆಸ್‌ ಪಕ್ಷವು ಬಿಜೆಪಿ ಮೆರವಣಿಗೆಯೊಳಗೆ ಸೇರಿಸಿದ್ದ ಜನರ ಗುಂಪು ಈ ಘೋಷಣೆ ಕೂಗಿದೆ ಎಂದು ಅವರು ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಜೆಪಿಯ ರ‍್ಯಾಲಿಗಳಲ್ಲಿ ‘ಗೋಲಿ ಮಾರೊ’ ಘೋಷಣೆ ಕೇಳಿ ಬಂದಿತ್ತು.

ಚುನಾವಣೆಗೆ ಸಜ್ಜಾದ ಶಾ
ಎಲ್ಲ ವಲಸಿಗರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವವರೆಗೆ ಕೇಂದ್ರ ಸರ್ಕಾರ ವಿರಮಿಸುವುದಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ. ಆದರೆ, ತೃಣಮೂಲ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಸಿಎಎಯನ್ನು ವಿರೋಧಿಸುತ್ತಿವೆ. ಈ ಕಾಯ್ದೆಯ ವಿಚಾರದಲ್ಲಿ ವಲಸಿಗರು ಮತ್ತು ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುತ್ತಿವೆ ಎಂದು ಆ‍ಪಾದಿಸಿದ್ದಾರೆ. 

2019ರ ಲೋಕಸಭಾ ಚುನಾವಣೆ ಬಳಿಕ ಇದೇ ಮೊದಲಿಗೆ ಕೋಲ್ಕತ್ತದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾ ಮಾತನಾಡಿದರು.

‘ಇನ್ನು ಇಲ್ಲ ಅನ್ಯಾಯ’ ಎಂಬ ಅಭಿಯಾನಕ್ಕೂ ಅವರು ಚಾಲನೆ ಕೊಟ್ಟರು. ವಿಧಾನಸಭೆಗೆ 2021ರಲ್ಲಿ ನಡೆಯಲಿರುವ ಚುನಾವಣೆಯ ಬಿಜೆಪಿಯ ಪ್ರಚಾರವನ್ನು ಈ ಮೂಲಕ ಆರಂಭಿಸಿದರು.

**

‘ಇನ್ನು ಇಲ್ಲ ಅನ್ಯಾಯ’ ಘೋಷಣೆ ಮೂಲಕ ನಾವು ಇಲ್ಲಿನ ಸರ್ಕಾರ ಬದಲಿಸುತ್ತೇವೆ. ನರೇಂದ್ರ ಮೋದಿಯವರಿಗೆ ಐದು ವರ್ಷ ಕೊಟ್ಟರೆ ಬಂಗಾಳವು ಸುವರ್ಣ ಬಂಗಾಳವಾಗಲಿದೆ.
–ಅಮಿತ್‌ ಶಾ, ಕೇಂದ್ರ ಗೃಹ ಸಚಿವ

**

ಬಂಗಾಳದಲ್ಲಿ ಬೋಧಿಸುವ ಬದಲಿಗೆ, ದೆಹಲಿಯ ಗಲಭೆಯಲ್ಲಿ 50ಕ್ಕೂ ಹೆಚ್ಚು ಅಮಾಯಕರ ಜೀವ ಹಾನಿಗೆ ಅಮಿತ್‌ ಶಾ ಅವರು ವಿವರಣೆ ಕೊಡಲಿ ಮತ್ತು ಕ್ಷಮೆ ಕೇಳಲಿ.
–ಅಭಿಷೇಕ್‌ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ ಮುಖಂಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು