ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ನೆರವು: ಕಠಿಣ ಕ್ರಮ

ಕಾಶ್ಮೀರ ಭೇಟಿ ವೇಳೆ ಭದ್ರತಾ ಪಡೆಗಳಿಗೆ ಗೃಹ ಸಚಿವ ಅಮಿತ್‌ ಶಾ ಸೂಚನೆ
Last Updated 27 ಜೂನ್ 2019, 19:45 IST
ಅಕ್ಷರ ಗಾತ್ರ

ಶ್ರೀನಗರ(ಪಿಟಿಐ): ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳಿಗೆ ಗೃಹ ಸಚಿವ ಅಮಿತ್‌ ಶಾ ಸೂಚಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ 2 ದಿನಗಳ ಪ್ರವಾಸದಲ್ಲಿರುವ ಶಾ, ಗುರುವಾರ ರಾಜ್ಯದ ಭದ್ರತಾ ವ್ಯವಸ್ಥೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಭೆಯಲ್ಲಿ ಈ ಸೂಚನೆ ನೀಡಿದ ಶಾ, ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸೂಚಿಸಿದರು. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧವೂ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲುಸೂಚಿಸಿದ್ದಾರೆ ಎಂದು ಸುದ್ದಿಗಾರರಿಗೆ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ತಿಳಿಸಿದರು.

ಭಯೋತ್ಪಾದನೆ ಮತ್ತು ಉಗ್ರರನ್ನು ಹತ್ತಿಕ್ಕುವಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಯತ್ನ ಶ್ಲಾಘಿಸಿದ ಶಾ, ಪೊಲೀಸರ ಬಲಿದಾನವನ್ನು ಅವರವರ ಹುಟ್ಟೂರಿನಲ್ಲಿ ಪ್ರತಿ ವರ್ಷವೂ ಸೂಕ್ತವಾಗಿ ನೆನೆಯಬೇಕು. ಪ್ರಮುಖ ಸ್ಥಳಗಳಿಗೆ ಮೃತ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಹೆಸರು ಇಟ್ಟು ಗೌರವಿಸಬೇಕು ಎಂದು ಸರ್ಕಾರಕ್ಕೆ ಸಭೆಯಲ್ಲಿಸೂಚಿಸಿದರು.

ಜುಲೈ 1ರಿಂದ ಆರಂಭವಾಗುವ ಅಮರನಾಥ ಯಾತ್ರೆಯ ಭದ್ರತೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಎಲ್ಲ ಹಂತಗಳಲ್ಲಿ ಹಿರಿಯ ಅಧಿಕಾರಿಗಳೇ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಭದ್ರತಾ ಪಡೆಗಳು ಭದ್ರತೆಗಾಗಿನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕುಎಂದು ಸೂಚಿಸಿದರು. ಸಭೆಯಲ್ಲಿ2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಘೋಷಿಸಿದ್ದ ₹80 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ಬಳಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ
ಪರಿಶೀಲನೆಯನ್ನೂ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾದ ಸತ್ಯಪಾಲ್‌ ಮಲಿಕ್‌, ಅವರ ಸಲಹೆಗಾರ ಕೆ.ವಿಜಯ್‌ ಕುಮಾರ್‌, ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ, ಉತ್ತರ ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ರಣ್‌ಬೀರ್‌ ಸಿಂಗ್‌, ಪೊಲೀಸ್‌ ಮಹಾನಿರ್ದೇಶಕ ದಿಲ್ಭಾಗ್‌ ಸಿಂಗ್‌, ಹಲವು ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಇದ್ದರು.

ಚುನಾಯಿತ ಪ್ರತಿನಿಧಿಗಳ ಭೇಟಿ

ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಶಾ,ಕಳೆದ ವರ್ಷ ಪಂಚಾಯತ್‌ ಚುನಾವಣೆಯಲ್ಲಿ ಗೆದ್ದವರನ್ನು ಭೇಟಿಯಾದರು.

ಹುತಾತ್ಮ ಪೊಲೀಸ್‌ ಅಧಿಕಾರಿ ಕುಟುಂಬಕ್ಕೆ ಶಾ ಸಾಂತ್ವನ

ಜೂನ್‌ 12ರಂದು ಅನಂತ್‌ನಾಗ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಪೊಲೀಸ್‌ ಇನ್‌ಸ್ಪೆಕ್ಟರ್‌ ಇರ್ಷಾದ್‌ ಅಹಮ್ಮದ್‌ ಖಾನ್‌ ಮನೆಗೆ ಅಮಿತ್‌ ಶಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 37 ವರ್ಷದ ಖಾನ್‌ ಉಗ್ರರ ದಾಳಿ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ಏರ್‌ಆಂಬುಲೆನ್ಸ್‌ ಮುಖಾಂತರ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಪತ್ನಿಗೆ ಸರ್ಕಾರಿ ಕೆಲಸದ ನೇಮಕಾತಿ ಪತ್ರ ನೀಡಿದ ಶಾ, ಕುಟುಂಬಕ್ಕೆ ಸರ್ಕಾರ ಆಸರೆಯಾಗಲಿದೆ ಎಂದು ಭರವಸೆ ನೀಡಿದರು. ‘ದೇಶದ ಭದ್ರತೆಗಾಗಿ ಖಾನ್‌ ಅವರು ನೀಡಿದ ಬಲಿದಾನ ಹಲವು ಜೀವಗಳನ್ನು ಉಳಿಸಿದೆ. ಅವರ ಧೈರ್ಯದ ಬಗ್ಗೆ ಇಡೀ ರಾಷ್ಟ್ರಕ್ಕೇ ಹೆಮ್ಮೆಯಿದೆ’ ಎಂದು ಶಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT