ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ವಿಪತ್ತು ಸೃಷ್ಟಿಸಿದ ಅಂಪನ್‌: ಬಂಗಾಳ ಕಂಪನ

ಉತ್ತರ, ದಕ್ಷಿಣ 24 ಪರಗಣ ಜಿಲ್ಲೆಗಳು ನಾಶ l ಕೋಲ್ಕತ್ತದಲ್ಲೂ ಭಾರಿ ಹಾನಿ
Last Updated 22 ಮೇ 2020, 1:39 IST
ಅಕ್ಷರ ಗಾತ್ರ

ಕೋಲ್ಕತ್ತ/ಭುವನೇಶ್ವರ/ ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ದೊಡ್ಡ ವಿಪತ್ತು ಸೃಷ್ಟಿಸಿರುವ ಅಂಪನ್ ಚಂಡಮಾರುತ ರಾಜ್ಯದಲ್ಲಿ 72 ಜನರ ಬಲಿ ಪಡೆದಿದೆ.

ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳು ಸಂಪೂರ್ಣ ನಾಶವಾಗಿವೆ ಎಂದು ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಗುರುವಾರ ಹೇಳಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ಸರ್ಕಾರವು ತಲಾ ₹2.5 ಲಕ್ಷ ಪರಿಹಾರ ಘೋಷಿಸಿದೆ.

ರಾಜಧಾನಿ ಕೋಲ್ಕತ್ತದಲ್ಲಿ ಭಾರಿ ಹಾನಿ ಸಂಭವಿಸಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನೂರಾರು ಕಾರುಗಳು ಗಾಳಿ ಹೊಡೆತಕ್ಕೆ ಸಿಲುಕಿ ನಜ್ಜುಗುಜ್ಜಾಗಿವೆ. 125 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದರಿಂದ ಮರಗಳು ಬುಡಮೇಲಾಗಿವೆ. ವಿದ್ಯುತ್ ಕಂಬಗಳು ಉರುಳಿದ್ದು, ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳು ಮತ್ತು ಕೋಲ್ಕತ್ತದ ಬಹುತೇಕ ಭಾಗಗಳಲ್ಲಿ ಬುಧವಾರ ಸಂಜೆಯಿಂದ ವಿದ್ಯುತ್ ಸಂಪರ್ಕ ಇಲ್ಲ.

ಮೊಬೈಲ್ ಹಾಗೂ ದೂರವಾಣಿ ಸಂಪರ್ಕವೂ ವ್ಯತ್ಯಯಗೊಂಡಿದೆ. ಮಣ್ಣಿನ ಮನೆಗಳು ನೆಲಸಮಗೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಬರ್ದ್ವಾನ್,ಪೂರ್ವ ಮಿಡ್ನಾಪುರ,ಹೌರಾ ಜಿಲ್ಲೆಗಳೂ ಬಿರುಗಾಳಿ ಹೊಡೆತಕ್ಕೆ ಸಿಲುಕಿದ್ದು,ಭತ್ತದ ಪೈರು ಸಂಪೂರ್ಣ ಹಾನಿಗೊಂಡಿದೆ.

‘ಇದು ನಾಶಗೊಂಡ ಪಟ್ಟಣದಂತೆ ತೋರುತ್ತಿದೆ. ನಿನ್ನೆ ಯುದ್ಧವೊಂದು ಘಟಿಸಿದೆ ಎಂದು ಭಾಸವಾಗುತ್ತಿದೆ. ಇದು ನನ್ನ ಕೋಲ್ಕತ್ತ ಎಂದು ನಂಬಲಿಕ್ಕೇ ಆಗುತ್ತಿಲ್ಲ’ ಎಂದು ದಕ್ಷಿಣ ಕೋಲ್ಕತ್ತ ನಿವಾಸಿ ಸುಧೀರ್ ಚಕ್ರವರ್ತಿ ಹೇಳಿದ್ದಾರೆ.

ಸಹಜ ಸ್ಥಿತಿಯತ್ತ ಒಡಿಶಾ:ಒಡಿಶಾದಲ್ಲಿ 44.8 ಲಕ್ಷ ಜನರು ಚಂಡಮಾರುತದಿಂದ ಬಾಧಿತರಾಗಿದ್ದಾರೆ.ಕರಾವಳಿ ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಒಡಿಶಾದಲ್ಲಿ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶಗಳಲ್ಲಿ ಮುಂದಿನ 24ರಿಂದ 48 ಗಂಟೆಗಳ ಅವಧಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಬರಲಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

ಕೆಲಸ ಹೋಯ್ತು, ಮನೆಯೂ ಇಲ್ಲ: ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ಬೆಂಗಳೂರಿನಿಂದ ದಕ್ಷಿಣ 24 ಪರಗಣ ಜಿಲ್ಲೆಯ ತನ್ನೂರಿಗೆ ವಾಪಸಾಗಿದ್ದ ವಲಸೆ ಕಾರ್ಮಿಕ ಜಮಾಲ್ ಮಂಡಲ್ ಅವರಿಗೆ ಮತ್ತೊಂದು ಹೊಡೆತ ಕಾದಿತ್ತು. ಮನೆಯ ಸದಸ್ಯರನ್ನು ಭೇಟಿಯಾದ ಖುಷಿಯನ್ನು ಚಂಡಮಾರುತ ಕಿತ್ತುಕೊಂಡಿತು. ಮಂಡಲ್ ಅವರ ಮಣ್ಣಿನ ಮನೆಯನ್ನು ಬಿರುಗಾಳಿ ನೆಲಸಮ ಮಾಡಿತ್ತು. ಹೀಗಾಗಿ ಅವರು ತನ್ನ ನಾಲ್ವರು ಮಕ್ಕಳು ಹಾಗೂ ಪತ್ನಿಯ ಜೊತೆ ಪರಿಹಾರ ಕೇಂದ್ರದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಒಬ್ಬರ ಕತೆಯಲ್ಲ. ಕೆಲಸ ಕಳೆದುಕೊಂಡು ತವರಿಗೆ ವಾಪಸಾಗಿದ್ದ ದಕ್ಷಿಣ 24 ಪರಗಣ ಜಿಲ್ಲೆಯ ನೂರಾರು ಕಾರ್ಮಿಕರ ಮನೆಗಳು ಚಂಡಮಾರುತದ ರೌದ್ರಾವತಾರಕ್ಕೆ ನೆಲಕಚ್ಚಿವೆ. ಇವರೆಲ್ಲ ಈಗ ಪರಿಹಾರ ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ.

ಇಂದು ಮೋದಿ ಸಮೀಕ್ಷೆ: ಚಂಡಮಾರುತದಿಂದ ತೊಂದರೆಗೆ ಈಡಾಗಿರುವ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ಜತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಾತುಕತೆ ನಡೆಸಿ, ಕೇಂದ್ರದಿಂದ ಅಗತ್ಯ ಸಹಕಾರದ ಭರವಸೆ ನೀಡಿದರು. ಚಂಡಮಾರುತ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಡೆಸಲಿದ್ದಾರೆ.

ಬಾಂಗ್ಲಾದಲ್ಲಿ 10 ಸಾವು(ಢಾಕಾ ವರದಿ): ಬಾಂಗ್ಲಾದೇಶಕ್ಕೆ ಬುಧವಾರ ಸಂಜೆ ಅಪ್ಪಳಿಸಿದ ಆಂಪನ್ ಚಂಡಮಾರುತದಿಂದ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದಾರೆ. ಕರಾವಳಿಯ ನೂರಾರು ಗ್ರಾಮಗಳು, ಮನೆಗಳು ಹಾನಿಗೊಂಡಿವೆ.

***

ಚಂಡಮಾರುತ ಪೀಡಿತರ ನೆರವಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಸರ್ಕಾರ ಮಾಡಲಿದೆ. ಒಡಿಶಾ ಹಾಗೂ ಬಂಗಾಳದ ಜತೆ ಇಡೀ ದೇಶ ನಿಲ್ಲುತ್ತದೆ.
-ನರೇಂದ್ರ ಮೋದಿ ಪ್ರಧಾನಿ

**

ಆಂಪನ್ ಚಂಡಮಾರುತದ ಪ್ರಭಾವ ಕೊರೊನಾ ವೈರಸ್‌ಗಿಂತ ಅಧಿಕ. ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ರಾಜ್ಯ ವಿಪತ್ತು ಎದುರಿಸುತ್ತಿದೆ.
-ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT