ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ–ಗ್ರಾಮೀಣ: ಹೆಚ್ಚಿದ ಕುತೂಹಲ

ನವದೆಹಲಿಯಲ್ಲಿ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ ಆಕಾಂಕ್ಷಿಗಳ ಚಡಪಡಿಕೆ
Last Updated 15 ಏಪ್ರಿಲ್ 2018, 5:46 IST
ಅಕ್ಷರ ಗಾತ್ರ

ಬಳ್ಳಾರಿ: ಕಾಂಗ್ರೆಸ್‌ ಟಿಕೆಟ್‌ಗಾಗಿ ಕೆಲವು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಜಿಲ್ಲೆಯ ಆಕಾಂಕ್ಷಿಗಳಲ್ಲಿ ಚಡಪಡಿಕೆ ಆರಂಭವಾಗಿದೆ.ಅದರಲ್ಲೂ ಬಳ್ಳಾರಿ ಗ್ರಾಮೀಣ ಕ್ಷೇತ್ರ ಕುತೂಹಲದ ಕಣವಾಗಿದೆ. ಕ್ಷೇತ್ರದ ಶಾಸಕ ಎನ್‌.ವೈ.ಗೋಪಾಲಕೃಷ್ಣ ಹಾಗೂ ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ.ನಾಗೇಂದ್ರ ಅವರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ ಎನ್ನಲಾಗಿದೆ.

‘ಕೂಡ್ಲಿಗಿ ತೊರೆಯಲಾರೆ’ ಎಂದು ನಾಗೇಂದ್ರ ಅವರು ಅಲ್ಲಿನ ಬೆಂಬಲಿಗರ ಮುಂದೆ ಹೇಳಿದ್ದರೂ, ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ‘ಬಿಜೆಪಿಯ ಸಖ್ಯ ತೊರೆದ ಬಳಿಕ ನಾಗೇಂದ್ರ ಕೂಡ್ಲಿಗಿಯಿಂದ ದೂರವಾಗಿ ಗ್ರಾಮೀಣದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ. ಒಂದು ಕಾಲದ ಅವರ ಮಿತ್ರರಾದ ಶ್ರೀರಾಮಲು ಅವರೂ ಅದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವುದರಿಂದ ಹಣಾಹಣಿ ಜೋರಾಗಿರುತ್ತದೆ’ ಎಂಬ ಅಭಿಪ್ರಾಯವೂ ದಟ್ಟವಾಗಿತ್ತು.

ಆದರೆ ರಾಮುಲು ಅವರು ಮೊಳಕಾಲ್ಮೂರಿನಲ್ಲಿ ಸ್ಪರ್ಧಿಸುವುದು ಖಚಿತವಾಗಿರುವುದರಿಂದ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸುಲಭವಾಗಿ ಗೆಲ್ಲಬಲ್ಲ ಪ್ರಬಲ ಅಭ್ಯರ್ಥಿಗಾಗಿ ಆಯ್ಕೆ ಕಸರತ್ತು ನಡೆಸುತ್ತಿದೆ.

‘ಗ್ರಾಮೀಣ ಕ್ಷೇತ್ರ ಸಾಕು. ಮುಂದಿನ ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವೆ’ ಎಂದು ಆಪ್ತರ ಮುಂದೆ ಹೇಳಿಕೊಂಡಿದ್ದ ಗೋಪಾಲಕೃಷ್ಣ ಅಲ್ಲಿ ಶ್ರೀರಾಮುಲು ಸ್ಪರ್ಧಿಸುವುದರಿಂದ, ಅಲ್ಲಿಗೆ ತೆರಳದೇ ಗ್ರಾಮೀಣದಲ್ಲೇ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಅವರೂ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್‌ ಎಂಬುದು ಯಕ್ಷಪ್ರಶ್ನೆಯಂತಾಗಿದೆ. ಇಬ್ಬರಿಗೂ ಅವರವರ ಕ್ಷೇತ್ರದಲ್ಲಿ ಟಿಕೆಟ್‌ ದೊರಬಹುದು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಕೂಡ್ಲಿಗಿಯಲ್ಲಿ ಹಿಂದಿನ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಸ್‌.ವೆಂಕಟೇಶ್‌, ಲೋಕೇಶ್‌ ನಾಯ್ಕ್‌ ಮತ್ತು ನಾಗಮಣಿ ಅವರೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರ: ‘ಅನಿಲ್‌ ಲಾಡ್‌ ಅವರ ಹೆಸರೊಂದೇ ಶಿಫಾರಸಾಗಿದೆ. ಬೇರೆ ಯಾರೂ ಆಯ್ಕೆಯಾಗಲು ಸಾಧ್ಯವಿಲ್ಲ’ ಎಂದು ಅವರ ಆಪ್ತರು ಹೇಳುತ್ತಾರೆ. ಆದರೆ ಮಾಜಿ ಶಾಸಕ ದಿವಾಕರಬಾಬು ತಮ್ಮ ಪುತ್ರ ಹನುಮಕಿಶೋರ್‌ಗೆ ಟಿಕೆಟ್‌ ದೊರಕಿಸುವ ಯತ್ನದಲ್ಲಿದ್ದು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ನಾ.ರಾ.ಸೂರ್ಯಾನಾರಾಯಣ ರೆಡ್ಡಿ ಕೂಡ ಆಕಾಂಕ್ಷಿಗಳಾಗಿದ್ದರೆ ಎಂಬ ಮಾತೂ ಕೇಳಿಬಂದಿದೆ. ಆದರೆ ಇದುವರೆಗೂ ಇವರು ಬಹಿರಂಗವಾಗಿ ಆ ಬಗ್ಗೆ ಮಾತನಾಡಿಲ್ಲ.

ಹೂವಿನ ಹಡಗಲಿ: ಅನುಪಮಾ ಶೆಣೈ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ತಂದ, ಅದೇ ಕಾರಣಕ್ಕೆ ಉಸ್ತುವಾರಿ ಸಚಿವ ಸ್ಥಾನ ಕಳೆದುಕೊಂಡ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರೂ ದೆಹಲಿಯಲ್ಲೇ ಇದ್ದಾರೆ. ಪಕ್ಷದ ಮತ್ತು ವೈಯಕ್ತಿಕ ವರ್ಚಸ್ಸಿಗೆ ಭಂಗ ತಂದುಕೊಂಡ ಕಾರಣಕ್ಕೆ ಅವರಿಗೆ ಗೆಲುವು ಕಷ್ಟಕರ ಎಂಬ ಅಭಿಪ್ರಾಯವೂ ದಟ್ಟವಾಗಿದೆ. ಆದರೂ ಅವರು ತಮಗೇ ಟಿಕೆಟ್‌ ಎಂಬ ಭರವಸೆಯಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ಸಿರುಗುಪ್ಪ: ಹಾಲಿ ಶಾಸಕ ಬಿ.ಎಂ.ನಾಗರಾಜ ಅವರ ನಿರುತ್ಸಾಗದ ನಡುವೆ ತೆಕ್ಕಲಕೋಟೆಯ ಎಚ್‌.ಎಂ.ಮಲ್ಲಿಕಾರ್ಜುನ ಅವರಿಗೆ ಟಿಕೆಟ್‌ ದೊರಕಬಹುದೇ ಎಂಬ ಚರ್ಚೆಯೂ ಕ್ಷೇತ್ರದಲ್ಲಿ ನಡೆದಿದೆ. ಹೊಸಪೇಟೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಆನಂದ್‌ಸಿಂಗ್‌ ನಿರಂತರ ಪ್ರಚಾರ ನಡೆಸಿದ್ದಾರೆ. ಸಂಡೂರಿನಲ್ಲೂ ಶಾಸಕ ಈ.ತುಕಾರಾಂ ಅವರೊಬ್ಬರೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವುದರಿಂದ, ತಮ್ಮ ಪಾಡಿಗೆ ಪ್ರಚಾರ ನಡೆಸುತ್ತಿದ್ದಾರೆ.

ಕಂಪ್ಲಿ: ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಎಸ್‌.ಎಲ್‌.ಸ್ವಾಮಿ ಅವರ ಪತ್ನಿ ಸರಸ್ವತಿ ಹಾಗೂ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜೆ.ಎನ್‌.ಗಣೇಶ್‌ ನಡುವೆ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆದಿದೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ 12 ಮಂದಿ ಪೈಕಿ ಭರತ್‌ ಮಗದೂರು, ರಾಜೂನಾಯ್ಕ್ ಸೇರಿದಂತೆ ನಾಲ್ವರೂ ದೆಹಲಿಯಲ್ಲೇ ಇದ್ದಾರೆ.

ಎಚ್‌.ಬಿ.ಹಳ್ಳಿ: ಹೆಚ್ಚಿದ ಒತ್ತಡ

ಬಳ್ಳಾರಿ: ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಶಾಸಕ ಎಸ್‌.ಭೀಮಾನಾಯ್ಕ ಇಲ್ಲಿ ಟಿಕೆಟ್‌ ಆಕಾಂಕ್ಷಿ. ಆದರೆ ‘ಅವರಿಗೆ ಟಿಕೆಟ್‌ ನೀಡಬಾರದು’ ಎಂಬ ಆಗ್ರಹವೂ ಅಲ್ಲಿ ಬಲವಾಗಿದೆ. ಆ ಆಗ್ರಹವನ್ನು ಗಂಭೀರವಾಗಿ ಪರಿಗಣಿಸದ ಭೀಮಾನಾಯ್ಕ ಅವರು ಕುಟುಂಬ ಸಮೇತರಾಗಿ ನಿರಂತರವಾಗಿ ಕ್ಷೇತ್ರ ಪ್ರಚಾರದಲ್ಲಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಮಾದಿಗರಿಗೆ ಅವಕಾಶ ಕಲ್ಪಿಸಬೇಕು ಎಂಬುದು ಆಗ್ರಹಿಸುತ್ತಿರುವವರ ಪ್ರತಿಪಾದನೆ. ಬಲ್ಲಹುಣಿಸೆ ರಾಮಣ್ಣ, ಹೆಗ್ಡಾಳ್‌ ರಾಮಣ್ಣ, ಎಲ್‌.ಮಾರೆಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಾನಯ್ಯ ಈ ಸಮುದಾಯದ ಆಕಾಂಕ್ಷಿಗಳು. ಬಲ್ಲಹುಣಿಸೆ ರಾಮಣ್ಣ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT