ಸೋಮವಾರ, ಫೆಬ್ರವರಿ 24, 2020
19 °C

ಪೊಲೀಸರ ವಿರುದ್ಧ ಮಾತನಾಡಿದರೆ ನಾಲಗೆ ಕತ್ತರಿಸುವೆ:ಆಂಧ್ರ ಇನ್ಸ್‌ಪೆಕ್ಟರ್ ಬೆದರಿಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಆಂಧ್ರ ಪ್ರದೇಶ: ‘ಪೋಲಿಸರ ನೈತಿಕತೆಗೆ ನೋವುಂಟು ಮಾಡುವ ಸಂಸದರು, ಮಾಜಿ ಸಂಸದರು ಹಾಗೂ ಶಾಸಕರ ನಾಲಿಗೆ ಕತ್ತರಿಸುವುದಾಗಿ’ ಪೊಲೀಸ್‌ ಇನ್ಸ್‌ಪೆಕ್ಟರ್ ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆ ಹಾಕಿದ್ದಾರೆ.

‘ನಾವು ಇಲ್ಲಿಯವರೆಗೆ ಸಂಯಮದಿಂದ ಗಮನಿಸುತ್ತಿದ್ದೇವೆ. ಇನ್ನು ಮುಂದೆ, ಯಾರಾದರೂ ಹದ್ದು ಮೀರಿ ಪೊಲೀಸರ ವಿರುದ್ಧ ಮಾತನಾಡಿದರೆ ನಾವು ಸಹಿಸುವುದಿಲ್ಲ. ಅವರ ನಾಲಿಗೆಯನ್ನು ಕತ್ತರಿಸುತ್ತೇವೆ. ಜಾಗರೂಕರಾಗಿರಿ' ಎಂದು ಅನಂತಪುರಂ ಜಿಲ್ಲೆಯ ಕದಿರಿಯ ಇನ್ಸ್‌ಪೆಕ್ಟರ್ ಮಾಧವ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಟಿಡಿಪಿ ಸಂಸದ ಜೆ.ಸಿ. ದಿವಾಕರ್‌ ರೆಡ್ಡಿ, ‘ಇನ್ಸ್‌ಪೆಕ್ಟರ್‌ಗೆ ಧೈರ್ಯವಿದ್ದರೆ ನನ್ನ ನಾಲಿಗೆಯನ್ನು ಕತ್ತರಿಸಲಿ’ ಎಂದು ಸವಾಲು ಹಾಕಿದ್ದಾರೆ. ಜತೆಗೆ, ಇನ್ಸ್‌ಪೆಕ್ಟರ್‌ ವಿರುದ್ಧ ದೂರು ನೀಡಿದ್ದಾರೆ.

ಇತ್ತೀಚೆಗೆ ತಡಿಪತ್ರಿ ಬಳಿ ಹಳ್ಳಿಯೊಂದರಲ್ಲಿ ಗುಂಪು ಘರ್ಷಣೆ ನಡೆದಿತ್ತು. ಈ ಕುರಿತು ಮಾತನಾಡಿದ್ದ ದಿವಾಕರ್‌ ರೆಡ್ಡಿ, ‘ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಪೊಲೀಸರು ‘ನಪುಂಸಕ’ರಂತೆ ಪಲಾಯನ ಮಾಡಿದ್ದರು’ ಎಂದು ದೂರಿದ್ದರು.

‘ಘರ್ಷಣೆ ತಡೆಯುವುದನ್ನು ಬಿಟ್ಟು ಪೊಲೀಸರು ಪಲಾಯನ ಮಾಡಿದರು. ನಾನು ಕೂಡ ರಕ್ಷಣೆಗಾಗಿ ಓಡಿ ಹೋದೆ. ಆ ವಿಷಯದಲ್ಲಿ, ನಾನೂ ಸಹ ನಪುಂಸಕನಂತೆ ವರ್ತಿಸಿದ್ದೆ’ ಎಂದು ರೆಡ್ಡಿ ಹೇಳಿದ್ದಾರೆ.

ನನಗೆ ಬೆದರಿಕೆಯೊಡ್ಡಿದ ಇನ್‌ಪೆಕ್ಟರ್‌ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಸಂಸದ ತಿಳಿಸಿದ್ದಾರೆ.

‘ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದೇವೆ. ಜಿಲ್ಲೆಯ ಎಸ್‌ಪಿ ವಿರುದ್ಧ ಕೇಳಿ ಬಂದಿರುವ ದೂರುಗಳನ್ನು ನಾವು ಉಲ್ಲೇಖಿಸಿದ್ದೇವೆ. ಅವರಿಂದ ಕಾನೂನುಬದ್ಧ ಅಭಿಪ್ರಾಯವನ್ನು ಪಡೆಯುತ್ತೇವೆ' ಎಂದು ತಡಿಪತ್ರಿ ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ (ಎಸ್‌ಡಿಪಿಒ)  ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು