ಸುರಸಂಗೀತದ ಸಾಮ್ರಾಜ್ಞಿ; ಅನ್ನಪೂರ್ಣಾದೇವಿ ಇನ್ನಿಲ್ಲ

7

ಸುರಸಂಗೀತದ ಸಾಮ್ರಾಜ್ಞಿ; ಅನ್ನಪೂರ್ಣಾದೇವಿ ಇನ್ನಿಲ್ಲ

ಡಿ. ಉಮಾಪತಿ
Published:
Updated:
Deccan Herald

ಮುಂಬೈ: ಖ್ಯಾತ ಸಿತಾರ್ ವಾದಕಿ ಅನ್ನಪೂರ್ಣಾದೇವಿ (91) ಅವರು ಇಲ್ಲಿನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ನಿಧನರಾದರು. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. 

ಪ್ರಚಾರದ ಮುಂಬೆಳಕನ್ನು ಧಿಕ್ಕರಿಸಿ ಜೀವಿಸಿದ ಆಕೆಯನ್ನು ಸುರಸಂಗೀತದ ಅರಸಿ ಎಂದವರುಂಟು. ಆಕೆಯ ಸುರಬಹಾರ್ ಸಾರ್ವಜನಿಕವಾಗಿ ಝೇಂಕರಿಸಿ ಅರ್ಧ ಶತಮಾನ ಮೀರಿತ್ತು. ಸಂಗೀತ ಕಛೇರಿಗಳು ಮತ್ತು ರೆಕಾರ್ಡಿಂಗ್‌ಗಳಿಗೆ ಆಕೆ ಇಕ್ಕಿದ ಕದ ಕಡೆಗೂ ತೆರೆಯಲಿಲ್ಲ. ಅನ್ನಪೂರ್ಣಾದೇವಿ ಹಿಂದುಸ್ತಾನಿ ಸಂಗೀತದ ಮೇರು ಸಾಧಕರಲ್ಲಿ ಒಬ್ಬರೆನಿಸಿದ್ದ ಮಯಹರ ಘರಾಣಾದ ಜನಕ ಬಾಬಾ ಅಲ್ಲಾವುದ್ದೀನ್ ಖಾನ್ ಅವರ ಮಗಳು. ಸಿತಾರ್ ಮಾಂತ್ರಿಕ ಪಂಡಿತರವಿಶಂಕರರ ಮೊದಲ ಪತ್ನಿ. ವಿವಾಹದ ನಂತರ ರವಿ
ಶಂಕರ್ ಮತ್ತು ಅನ್ನಪೂರ್ಣ ದೇಶದ ನಾನಾ ಭಾಗಗಳಲ್ಲಿ ಒಟ್ಟಿಗೆ ನಡೆಸಿದ ಕಛೇರಿಗಳು ಸಂಗೀತ ಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದವು. 1956ರ ನಂತರ ಸಾರ್ವಜನಿಕ ಸಂಗೀತ ಕಛೇರಿಯಲ್ಲಿ ಆಕೆ ಕಾಣಿಸಿಕೊಳ್ಳಲಿಲ್ಲ.

ಮಧ್ಯಪ್ರದೇಶದ ಮಯಹಾರದ ಮಹಾರಾಜ ಬ್ರಜನಾಥ್ ಸಿಂಗ್ ಆಸ್ಥಾನದಲ್ಲಿದ್ದರು ಅಲ್ಲಾವುದ್ದೀನ್ ಖಾನ್. 1926ರಲ್ಲಿ ಹುಟ್ಟಿದ ಖಾನ್ ಪುತ್ರಿ ರೋಶನಾರಾಗೆ ಮಹಾರಾಜ ನೀಡಿದ್ದ ಹೆಸರು ಅನ್ನಪೂರ್ಣಾದೇವಿ.

ರವಿಶಂಕರ್, ಅನ್ನಪೂರ್ಣ, ಆಕೆಯ ಅಣ್ಣ ಅಲಿ ಅಕ್ಬರ್ ಖಾನ್ ಮೂವರೂ ಖಾನ್ ಶಿಷ್ಯಂದಿರಾಗಿದ್ದರು. ವಿಶ್ವವಿಖ್ಯಾತ ನೃತ್ಯ ಕಲಾವಿದ ಉದಯಶಂಕರ್ ಅವರು ರವಿಶಂಕರ್ ಅಣ್ಣ. ಉದಯಶಂಕರ್ ಬಯಕೆಯಂತೆ ಅನ್ನಪೂರ್ಣ- ರವಿಶಂಕರ್ 1942ರಲ್ಲಿ ವಿವಾಹವಾದರು. ಅಲ್ಲಾವುದ್ದೀನ್ ಖಾನ್ ಮನೆಯಲ್ಲಿ ನಿತ್ಯ ಸರಸ್ವತಿಯ ಪೂಜೆ ಮತ್ತು ನಮಾಜು ಎರಡೂ ಜರುಗುತ್ತಿದ್ದವು.

ವೈವಾಹಿಕ ಬದುಕಿನಲ್ಲಿ ಉಂಟಾದ ಉತ್ಪಾತಗಳು ಈ ನಾದದೇವಿಯನ್ನು ಏಕಾಂಗಿ ಬದುಕಿಗೆ ದೂಡಿದವು. ತಂದೆ ಅಲ್ಲಾವುದ್ದೀನ್ ಖಾನ್ ಮತ್ತು ಒಬ್ಬನೇ ಮಗ ಶುಭೇಂದ್ರ ಶಂಕರನ ಸಾವುಗಳು, ರವಿಶಂಕರ್ ಜೊತೆಗಿನ ತಳಮಳದ ದಾಂಪತ್ಯ ಆಕೆಯನ್ನು ಕಾಯಂ ತತ್ತರಕ್ಕೆ ತಳ್ಳಿದವು..

ಪತ್ನಿ ಪ್ರಖರ ಪ್ರತಿಭೆ ರವಿಶಂಕರ್‌ಗೆ ಹೊಟ್ಟೆಕಿಚ್ಚು ಹೊತ್ತಿಸಿತ್ತು. ತಾನು ಸ್ವತಃ ಸೂರ್ಯ. ತನ್ನ ವಿನಾ ಬಾನಿನಲ್ಲಿ ಇನ್ಯಾರೂ ಬೆಳಗಬಾರದು ಎಂಬ ಮಹತ್ವಾಕಾಂಕ್ಷಿ. ಸಾರ್ವಜನಿಕ ಕಛೇರಿ ನಡೆಸುವುದಿಲ್ಲ ಎಂಬ ವಚನವನ್ನು ಆಕೆಯಿಂದ ಪಡೆದುಬಿಟ್ಟರು ಎನ್ನುತ್ತದೆ ಅನ್ನಪೂರ್ಣಾದೇವಿ ಆತ್ಮಕತೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದಲ್ಲಿ 1972ರಲ್ಲಿ ತೆರೆ ಕಂಡ ಅಮಿತಾಬ್-ಜಯಾ ಬಾಧುರಿ ಅಭಿನಯದ ‘ಅಭಿಮಾನ್’ ಹಿಂದಿ ಚಲನಚಿತ್ರಕ್ಕೆ ಅನ್ನಪೂರ್ಣ-ರವಿಶಂಕರ್ ಬದುಕೇ ಸ್ಫೂರ್ತಿ.

‘ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಪ್ರೀತಿ ಸಾಧ್ಯ. . .ಒಂದು ಪ್ರೀತಿ ಮತ್ತೊಂದಕ್ಕೆ ಪೂರಕ. ಪರಿಪೂರ್ಣತೆಯ ಶೋಧ. ಅನ್ನಪೂರ್ಣ ಹೃದಯವಂತಿಕೆಯ ಕಲಾವಿದೆ. ಆದರೆ ಪ್ರೀತಿಯ ವಿಷಯಗಳಲ್ಲಿ ಮನಸ್ಸು ಮುಚ್ಚಿಕೊಂಡರು’ ಎಂಬುದು ರವಿಶಂಕರ್ ದೂರು. 'ವಿಭಿನ್ನ ದೇಶಗಳಲ್ಲಿ ವಿಭಿನ್ನ ಸ್ತ್ರೀಯರ ಜೊತೆ ಪ್ರೀತಿ ಸಾಧ್ಯವಿತ್ತು. ಪ್ರತಿ ಬಂದರಿನಲ್ಲೂ ಹೊಸ ಹುಡುಗಿ. ಕೆಲವು ಸಲ ಒಬ್ಬಳಿಗಿಂತ ಹೆಚ್ಚು ಮಂದಿ! ಎಂದು ತಮ್ಮ ಆತ್ಮಚರಿತ್ರೆ ‘ರಾಗ ಮಾಲಾ’ದಲ್ಲಿ ಬರೆದುಕೊಂಡಿದ್ದಾರೆ. ವಿಷಮಿಸುತ್ತಲೇ ಸಾಗಿದ ವೈವಾಹಿಕ ಬೆಸುಗೆ 1962ರ ಹೊತ್ತಿಗೆ ವಿಚ್ಛೇದನದಲ್ಲಿ ಕೊನೆಗೊಂಡಿತು. ‘ರವಿಶಂಕರ್, ಪನ್ನಾಲಾಲ್ ಘೋಷ್ ಮತ್ತು ನನ್ನನ್ನು ಒಂದು ತಕ್ಕಡಿಯಲ್ಲೂ, ಅನ್ನಪೂರ್ಣೆಯನ್ನು ಇನ್ನೊಂದು ತಕ್ಕಡಿಯಲ್ಲೂ ಇರಿಸಿ ತೂಗಿ. ಆಗಲೂ ಅನ್ನಪೂರ್ಣೆಯ ಭಾರವೇ ಅಧಿಕ’ ಎನ್ನುತ್ತಿದ್ದರು ಆಕೆಯ ಅಣ್ಣ ಉಸ್ತಾದ್ ಅಲಿ ಅಕ್ಬರ್ ಖಾನ್ ಹರಿಪ್ರಸಾದ ಚೌರಾಸಿಯಾ ಹೇಳಿದ್ದರು- ‘ನನ್ನ ಪಾಲಿಗೆ ಆಕೆ ದೇವರ ವರ. ಜ್ಞಾನಸಾಗರವನ್ನೇ ತೆರೆದಿಟ್ಟರು- ನಾನು ಗ್ರಹಿಸಿದ್ದು ಕೇವಲ ಬೊಗಸೆಯಷ್ಟು. ನನ್ನ ಗುರು ಮಾ ನನ್ನ ಪಾಲಿಗೆ ದುರ್ಗೆಯೂ ಹೌದು, ಸರಸ್ವತಿಯೂ ಹೌದು. ಆಕೆಯದು ಅಸೀಮ ಜ್ಞಾನಸಂಪತ್ತು. ವಿದ್ಯೆಯನ್ನು ನಿಸ್ವಾರ್ಥದಿಂದ ಧಾರೆ ಎರೆಯುತ್ತಾರೆ. ಸರಸ್ವತಿ ತಾಯಿಯ ನಿಜ ಅವತಾರ. ಶಿಷ್ಯರು ತಪ್ಪು ಮಾಡಿದಾಗ ದುರ್ಗೆಯಾಗುತ್ತಾರೆ. ಆದರೆ ಅಮ್ಮನೆಂದರೆ ಅಮ್ಮನೇ. ಆಕೆಯ ಕೋಪ ಕೂಡ ಪ್ರೇಮವೇ’.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !