ಪಶ್ಚಿಮ ಬಂಗಾಳದಲ್ಲಿ ಕುಸಿದ ಮತ್ತೊಂದು ಸೇತುವೆ

7

ಪಶ್ಚಿಮ ಬಂಗಾಳದಲ್ಲಿ ಕುಸಿದ ಮತ್ತೊಂದು ಸೇತುವೆ

Published:
Updated:

ಸಿಲಿಗುರಿ (ಪಶ್ಚಿಮಬಂಗಾಳ): ದಕ್ಷಿಣ ಕೋಲ್ಕತ್ತದಲ್ಲಿ ಮೇಲ್ಸೇತುವೆ ಮುರಿದು ಬಿದ್ದು ಮೂವರು ಮೃತಪಟ್ಟ ಮೂರೇ ದಿನಗಳಲ್ಲಿ ಮತ್ತೊಂದು ಹಳೆಯ ಸೇತುವೆ ಸಿಲಿಗುರಿ ಸಮೀಪ ಶುಕ್ರವಾರ ಮುರಿದು ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ, ಆದರೆ, ಟ್ರಕ್‌ ಚಾಲಕ ಗಾಯಗೊಂಡಿದ್ದಾರೆ.

ಉತ್ತರ ಬಂಗಾಳದ ದೊಡ್ಡ ನಗರ ಸಿಲಿಗುರಿಯಿಂದ 22 ಕಿಲೋ ಮೀಟರ್‌ ದೂರದ ಫನ್ಸಿದೇವಾ ಮತ್ತು ಮಾಗಂಜ್ ಪ್ರದೇಶದ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತಿತ್ತು. ಬೆಳಿಗ್ಗೆ 9.30ರ ಸುಮಾರಿಗೆ ಟ್ರಕ್‌ ಸಂಚರಿಸುತ್ತಿದ್ದಾಗ ಸೇತುವೆ ಮಧ್ಯಕ್ಕೆ ಮುರಿದು ಬಿದ್ದಿದೆ.

‘ಈ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಆದರೆ, ಈಶಾನ್ಯ ರಾಜ್ಯಗಳಿಗೆ ಹೋಗುವ ಟ್ರಕ್‌ಗಳು ಇದೇ ಸೇತುವೆ ಮೂಲಕವೇ ಸಂಚರಿಸುತ್ತಿದ್ದವು. ಹೀಗಾಗಿ ಸೇತುವೆ ಕುಸಿದಿದೆ’ ಎಂದು ಉತ್ತರ ಬಂಗಾಳದ ಅಭಿವೃದ್ಧಿ ಸಚಿವ ರವೀಂದ್ರನಾಥ್‌ ಘೋಷ್‌ ತಿಳಿಸಿದ್ದಾರೆ.

‘ಹಲವು ವರ್ಷಗಳ ಹಿಂದೆಯೇ ಈ ಸೇತುವೆ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಪತ್ರಗಳು ನಮ್ಮ ಬಳಿ ಇಲ್ಲ. ಲೋಕೋಪಯೋಗಿ ಇಲಾಖೆ ವರದಿ ಸಿದ್ಧಪಡಿಸಿದ ನಂತರ ದುರಸ್ತಿ ಕೆಲಸ ಕೈಗೆತ್ತಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಸಿಪಿಎಂ ಆಡಳಿತವಿರುವ ಸಿಲಿಗುರಿಯ ಮಹಾಕುಮಾ ಪರಿಷದ್‌ (ಉಪ ವಿಭಾಗೀಯ ಸ್ಥಳೀಯಾಡಳಿತ) ಈ ಸೇತುವೆಯ ನಿರ್ವಹಣೆ ನೋಡಿಕೊಳ್ಳುತ್ತಿತ್ತು. ಘಟನೆ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವರದಿ ಸಲ್ಲಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಗೌತಮ್‌ ದೇವ್‌ ತಿಳಿಸಿದ್ದಾರೆ.

‘ಕೋಲ್ಕತ್ತಾ ಹಾಗೂ ಸುತ್ತಮುತ್ತಲ ನಗರಗಳಲ್ಲಿರುವ 20 ಸೇತುವೆಗಳು ಶಿಥಿಲಾವಸ್ಥೆ ತಲುಪಿವೆ. ದೇಶದಾದ್ಯಂತ ಸೇತುವೆಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸುವ ಅಗತ್ಯವಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರವಷ್ಟೇ ಹೇಳಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !