ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್‌ ವಿರೋಧಿ ಗಲಭೆ | ಪ್ರಕರಣದ ಮರು ತನಿಖೆಗೆ ಒಪ್ಪಿಗೆ, ಕಮಲನಾಥ್‌ಗೆ ಸಂಕಷ್ಟ?

Last Updated 9 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ವಿರುದ್ಧ ಆರೋಪ ಇರುವ 1984ರ ಸಿಖ್‌ ವಿರೋಧಿ ಗಲಭೆಯ ಒಂದು ಪ್ರಕರಣದ ಮರು ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಈ ನಿರ್ಧಾರವು ಕಮಲನಾಥ್‌ ಅವರಿಗೆ ಸಂಕಷ್ಟ ತಂದೊಡ್ಡಬಹುದು ಎನ್ನಲಾಗಿದೆ.

ಸಿಖ್‌ ವಿರೋಧಿ ಗಲಭೆ ಪ್ರಕರಣಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರವೇ ರಚಿಸಿತ್ತು. 220ಕ್ಕೂ ಹೆಚ್ಚು ಪ್ರಕರಣಗಳನ್ನು ಈ ತಂಡವು ತನಿಖೆ ನಡೆಸುತ್ತಿದೆ. ಅದೇ ತಂಡವು ಕಮಲನಾಥ್‌ ವಿರುದ್ಧದ ಪ್ರಕರಣದ ತನಿಖೆಯನ್ನೂ
ಕೈಗೆತ್ತಿಕೊಳ್ಳಲಿದೆ.

ಪ್ರಕರಣದ ಮರು ತನಿಖೆಯ ಆದೇಶವನ್ನು ಆ. 19 ರಂದೇ ಸಚಿವಾಲಯ ನೀಡಿತ್ತು. ಕಮಲನಾಥ್‌ ಅವರ ಸೋದರಳಿಯ ರತುಲ್‌ ಪುರಿ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಈಗಾಗಲೇ ಬಂಧಿಸಿದೆ.

ಕಮಲನಾಥ್‌ ಅವರಲ್ಲದೆ, ಕಾಂಗ್ರೆಸ್‌ ಮುಖಂಡರಾದ ಸಜ್ಜನ್‌ ಕುಮಾರ್‌ ಮತ್ತು ಜಗದೀಶ್‌ ಟೈಟ್ಲರ್‌ ಮೇಲೆಯೂ ಸಿಖ್‌ ವಿರೋಧಿ ಗಲಭೆಗೆ ಜನರನ್ನು ಪ್ರಚೋದಿಸಿದ ಆರೋಪವಿದೆ. ಇಂದಿರಾ ಗಾಂಧಿ ಹತ್ಯೆಯ ಬಳಿಕ ಸಿಖ್‌ ವಿರೋಧಿ ಗಲಭೆ ನಡೆದಿತ್ತು. ಸಿಖ್‌ ಸಮುದಾಯದ ಭದ್ರತಾ ಸಿಬ್ಬಂದಿಯೇ ಇಂದಿರಾ ಅವರನ್ನು ಹತ್ಯೆ ಮಾಡಿದ್ದರು.

ಗಲಭೆಗಳ ಬಗ್ಗೆ ನಾನಾವತಿ ಆಯೋಗವು ವಿಚಾರಣೆ ನಡೆಸಿತ್ತು. ಈ ಆಯೋಗದ ಮುಂದೆ ಹಾಜರಾಗಿದ್ದ ಕಮಲನಾಥ್‌ ಅವರು ತಾವು ಈ ಗಲಭೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಜನರನ್ನು ಸಮಾಧಾನ ಮಾಡುವುದಕ್ಕೆ ಆ ಸ್ಥಳಕ್ಕೆ ಹೋಗಿದ್ದೆ. ಗಲಭೆಗೆ ಕುಮ್ಮಕ್ಕು ನೀಡಿಲ್ಲ ಎಂದು ಹೇಳಿದ್ದರು. ಅವರ ವಿರುದ್ಧ ನಿಖರವಾದ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದ ಆಯೋಗವು ಅವರನ್ನು ದೋಷಮುಕ್ತಗೊಳಿಸಿತ್ತು.

ರಾಜೀನಾಮೆಗೆ ಆಗ್ರಹ

ಕಮಲನಾಥ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಕೇಂದ್ರ ಸಚಿವೆ ಹಾಗೂ ಅಕಾಲಿ ದಳ ನಾಯಕಿ ಹರ್‌ಸಿಮ್ರತ್‌ ಕೌರ್‌ ಆಗ್ರಹಿಸಿದ್ದಾರೆ. ಗಲಭೆಗೆ ಕಮಲನಾಥ್‌ ಕುಮ್ಮಕ್ಕು ನೀಡಿದ್ದರು ಎಂಬ ಬಗ್ಗೆ ಸಾಕ್ಷ್ಯ ಹೇಳಲು ಜನರು ಸಿದ್ಧರಿದ್ದಾರೆ. ಆದರೆ, ಈ ಸಾಕ್ಷಿಗಳಿಗೆ ಭದ್ರತೆ ಒದಗಿಸಬೇಕು ಎಂದು ಅವರು ಹೇಳಿದ್ದಾರೆ. 1984ರ ಗಲಭೆಗಳ ಬಗ್ಗೆ ಮಾಹಿತಿ ಇರುವ ಜನರು ನಿರ್ಭೀತರಾಗಿ ಸಾಕ್ಷ್ಯ ನುಡಿಯಲು ಮುಂದೆ ಬರಬೇಕು ಎಂದೂ ಅವರು ಕರೆ ಕೊಟ್ಟಿದ್ದಾರೆ.

ಸಿಖ್‌ ಗಲಭೆಗಳಿಗೆ ಸಂಬಂಧಿಸಿ 88 ಜನರು ತಪ್ಪಿತಸ್ಥರು ಎಂಬ ತೀರ್ಪನ್ನು ದೆಹಲಿ ಹೈಕೋರ್ಟ್‌ ಕಳೆದ ವರ್ಷ ಎತ್ತಿ ಹಿಡಿದಿತ್ತು. 220 ಪ್ರಕರಣಗಳ ಮರುತನಿಖೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ ಎರಡು ವರ್ಷಗಳ ಬಳಿಕ ಹೈಕೋರ್ಟ್‌ ಈ ತೀರ್ಪು ನೀಡಿತ್ತು.

ಕಮಲನಾಥ್‌ ವಿರುದ್ಧ ತನಿಖೆ ನಡೆಸಬೇಕು ಎಂಬುದು ಬಿಜೆಪಿ ಮತ್ತು ಅಕಾಲಿದಳದ ಬಹುಕಾಲದ ಬೇಡಿಕೆಯಾಗಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಪಕ್ಷವು ಕಮಲನಾಥ್‌ ಅವರನ್ನು ಆಯ್ಕೆ ಮಾಡಿದಾಗ ಸಿಖ್‌ ಗಲಭೆ ವಿಚಾರವು ಮತ್ತೆ ಮುನ್ನೆಲೆಗೆ ಬಂದಿತ್ತು. ಅವರ ಪ್ರಮಾಣ ವಚನ ಸಂದರ್ಭದಲ್ಲಿ ಸಿಖ್‌ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು.

* ಪ್ರಕರಣದ ಮರುತನಿಖೆ ಸಿಖ್ಖರಿಗೆ ಸಿಕ್ಕ ಜಯ. ನಮ್ಮ ನಿರಂತರ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ತಮ್ಮ ಅಪರಾಧಗಳಿಗೆ ಕಮಲನಾಥ್‌ ಬೆಲೆ ತೆರಲೇಬೇಕು

-ಹರ್‌ಸಿಮ್ರತ್‌ ಕೌರ್‌, ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT