ಆ್ಯಪಲ್‌ ಸಿಬ್ಬಂದಿಗೆ ಗುಂಡಿಟ್ಟ ಕಾನ್‌ಸ್ಟೆಬಲ್‌ಗೆ ಶೌರ್ಯ ಪ್ರಶಸ್ತಿ ನೀಡಿ!

7
ಉತ್ತರ ಪ್ರದೇಶ ಪೊಲೀಸರ ಆಗ್ರಹ

ಆ್ಯಪಲ್‌ ಸಿಬ್ಬಂದಿಗೆ ಗುಂಡಿಟ್ಟ ಕಾನ್‌ಸ್ಟೆಬಲ್‌ಗೆ ಶೌರ್ಯ ಪ್ರಶಸ್ತಿ ನೀಡಿ!

Published:
Updated:

ಲಖನೌ: ಆ್ಯಪಲ್‌ ಕಂಪನಿ ಉದ್ಯೋಗಿಯನ್ನು ಗುಂಡಿಟ್ಟು ಸಾಯಿಸಿದ ಕಾನ್‌ಸ್ಟೆಬಲ್‌ಗಳಿಗೆ ಶೌರ್ಯ ಪ್ರಶಸ್ತಿ ನೀಡಬೇಕು ಎಂದು ಉತ್ತರ ಪ್ರದೇಶ ಪೊಲೀಸರು ಆಗ್ರಹಿಸಿದ್ದಾರೆ. ಅಲ್ಲದೆ, ಈ ಕಾನ್‌ಸ್ಟೆಬಲ್‌ ವಿರುದ್ಧ ಕ್ರಮ ಕೈಗೊಂಡಿದ್ದನ್ನು ವಿರೋಧಿಸಿ ಶುಕ್ರವಾರ ಕರಾಳ ದಿನ ಆಚರಿಸಲು ಅವರು ನಿರ್ಧರಿಸಿದ್ದಾರೆ. 

ತಪಾಸಣೆಗೆ ಮುಂದಾದಾಗ ಕಾರನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಆ್ಯಪಲ್‌ ಕಂಪನಿಯ ವಿವೇಕ್‌ ತಿವಾರಿ ಎಂಬುವರ ಕಳೆದ ವಾರ ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರಶಾಂತ್‌ ಚೌಧರಿ ಎಂಬುವರು ಗುಂಡು ಹಾರಿಸಿದ್ದರು. ಎದೆಗೇ ಗುಂಡು ತಗುಲಿದ್ದರಿಂದ ತಿವಾರಿ ಸಾವನ್ನಪ್ಪಿದ್ದರು. ಇದಕ್ಕಾಗಿ ಪ್ರಶಾಂತ್‌ ಚೌಧರಿ ಮತ್ತು ಅವರ ಜೊತೆಗಿದ್ದ ಕಾನ್‌ಸ್ಟೆಬಲ್‌ ಅನ್ನು ಬಂಧಿಸಲಾಗಿದೆಯಲ್ಲದೆ, ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.  

‘ತಿವಾರಿ ಮೇಲೆ ಗುಂಡು ಹಾರಿಸದೇ ಇದ್ದರೆ ಕಾನ್‌ಸ್ಟೆಬಲ್‌ಗಳೇ ಕಾರಿಗೆ ಸಿಲುಕಿ ಸಾಯುವ ಪರಿಸ್ಥಿತಿ ಇತ್ತು. ಪ್ರಾಣರಕ್ಷಣೆಗಾಗಿ ಅವರು ಈ ಕ್ರಮ ಕೈಗೊಂಡಿದ್ದು, ಅವರಿಗೆ ಪ್ರಶಸ್ತಿ ನೀಡಬೇಕು’ ಎಂದು ರಾಜ್ಯ ಪೊಲೀಸ್‌ ಸಂಘಟನೆಯ ನಾಯಕ ಹೇಳಿದ್ದಾರೆ. 

‘ರಾಜ್ಯ ಪೊಲೀಸರು ಶನಿವಾರ ಮತ್ತೆ ಸಭೆ ನಡೆಸುತ್ತಿದ್ದೇವೆ. 300ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು ಭಾಗವಹಿಸಲಿದ್ದಾರೆ. ಎಲ್ಲರೂ ಕಪ್ಪುಪಟ್ಟಿ ಧರಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. 

ತರಬೇತಿ ಕೊರತೆಯೇ ಕೊಲೆಗೆ ಕಾರಣ

‘ಪೊಲೀಸರಿಗೆ ತರಬೇತಿ ಕೊರತೆ ಇದ್ದುದೇ ಆ್ಯಪಲ್‌ ಕಂಪನಿ ನೌಕರನ ಸಾವಿಗೆ ಕಾರಣ’ ಎಂದು ಉತ್ತರಪ್ರದೇಶ ಪೊಲೀಸ್‌ ವರಿಷ್ಠ ಒ.ಪಿ. ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. 

‘ಗುಂಡು ಹಾರಿಸುವುದು ನಮ್ಮ ಉದ್ದೇಶವಲ್ಲ. ಈ ನಿಟ್ಟಿನಲ್ಲಿ ಯಾರನ್ನೂ ಉತ್ತೇಜಿಸುವುದೂ ಇಲ್ಲ. ಬದಲಾಗಿ ರಾಜ್ಯದ ಪೊಲೀಸರು ಜನಸ್ನೇಹಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ. 

‘ತಿವಾರಿಯನ್ನು ಹತ್ಯೆ ಮಾಡಿದ ಇಬ್ಬರು ಕಾನ್‌ಸ್ಟೆಬಲ್‌ಗಳು ರಾಜ್ಯ ಪೊಲೀಸ್‌ ವ್ಯವಸ್ಥೆಯ ರಾಯಭಾರಿಗಳಲ್ಲ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !