ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಎತ್ತಂಗಡಿ ಪರಿಹಾರವಲ್ಲ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

‘ಕಡಿಮೆ ದಾಖಲಾತಿ: ಮೇಷ್ಟ್ರು ಎತ್ತಂಗಡಿ’ (ಪ್ರ.ವಾ., ಜೂನ್‌ 6) ಸುದ್ದಿ ಓದಿ ಆಘಾತವಾಯಿತು. ಸರ್ಕಾರಿ ಶಾಲೆಗಳ ಈ ಸ್ಥಿತಿಗೆ ಹೊಣೆಗಾರರು ಯಾರು? ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗದಿದ್ದರೆ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರೇ ಜವಾಬ್ದಾರರು’ ಎಂದು ಹೇಳುವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಈ ಸ್ಥಿತಿಗೆ ಒಟ್ಟಾರೆಯಾಗಿ ಶಿಕ್ಷಣ ಇಲಾಖೆಯ ಹೊಣೆ ಎಷ್ಟು ಎಂಬುದರ ಬಗ್ಗೆಯೂ ಯೋಚನೆ ಮಾಡಬೇಕು. ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುವಾಗ ಇದ್ದಬಿದ್ದಲ್ಲೆಲ್ಲ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದೇಕೆ?

ದಾಖಲಾತಿ ಹೆಚ್ಚಿಸಲು ಪ್ರತಿವರ್ಷ ಶಿಕ್ಷಕರಿಂದ ‘ಅಕ್ಷರ ಬಂಡಿ’ ಕಟ್ಟಿಸಲಾಗುತ್ತದೆ. ಅಕ್ಷರ ಬಂಡಿ ಹೊಡೆದುಕೊಂಡು ಮನೆಮನೆಗೆ ಹೋಗಿ, ‘ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ’ ಎಂದರೆ ಪಾಲಕರು ಒಪ್ಪುತ್ತಾರೆಯೇ? ಸರ್ಕಾರಿ ಶಾಲೆಗಳ ಶಿಕ್ಷಕರು ಮೇ ತಿಂಗಳ ಕೊನೆಯಲ್ಲಿ ಅಕ್ಷರ ಬಂಡಿ ಹೊಡೆಯುತ್ತಾರೆ. ಖಾಸಗಿ ಶಾಲೆಯವರು ಮೇ ಮೊದಲನೆಯ ವಾರದಲ್ಲಿಯೇ ‘ಅಕ್ಷರ ತೇರು’ ಎಳೆದು ಸರಿಯಾದ ಜಾಗದಲ್ಲಿ ತಂದು ನಿಲ್ಲಿಸಿ ನಿರಾಳರಾಗಿರುತ್ತಾರೆ. ಪಾಲಕರ ತಲೆಯಲ್ಲಿ ಖಾಸಗಿ ಶಾಲೆಗಳ ಗುಂಗು ಹೊಕ್ಕಿರುವಾಗ ಅದರಿಂದ ಹೊರಬರಲು ಸಾಧ್ಯವೇ?

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವು ಮೂಗುದಾರ ಹಾಕಲೇಬೇಕು. ಹಾಗಾದಾಗ ಸರ್ಕಾರಿ ಶಾಲೆಯಲ್ಲಿ ತನ್ನಷ್ಟಕ್ಕೆ ತಾನೇ ದಾಖಲಾತಿ ಹೆಚ್ಚಾಗುತ್ತದೆ. ಅದು ಬಿಟ್ಟು ಶಿಕ್ಷಕರನ್ನು ಎತ್ತಂಗಡಿ ಮಾಡುವುದು ವ್ಯರ್ಥದ ಕಸರತ್ತು.

‘ಸರ್ಕಾರಿ ಶಾಲೆ ಉಳಿಸಿ’ ಅಂದರೆ ಯಾರು ಉಳಿಸುವುದು? ಯಾರ ಮಕ್ಕಳು ಸರ್ಕಾರಿ ಶಾಲೆಗೆ ಬರಬೇಕು? ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೊಬ್ಬಿರಿಯಬಹುದು ಅಷ್ಟೇ. ಅದರಿಂದ ಪ್ರಯೋಜನವೇನೂ ಆಗದು.

– ಮಲ್ಲಮ್ಮ ಯಾಟಗಲ್, ಅಥಣಿ

ಇಲಾಖೆಯೂ ಹೊಣೆಯಲ್ಲವೇ?

‘ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಕರೇ ಶ್ರಮಪಡಬೇಕು’ ಎಂಬ ಶಾಲಿನಿ ರಜನೀಶ್‌ ಮಾತು ಸರಿಯಾದುದೇ. ಆದರೆ ಅವರ ಮುಂದೆ ನಾವೂ ಕೆಲವು ಪ್ರಶ್ನೆಗಳನ್ನಿಡಬೇಕಾಗಿದೆ.

ದಾಖಲಾತಿ ಇಳಿಕೆಯಾಗಿರುವುದರಲ್ಲಿ ಶಿಕ್ಷಣ ಇಲಾಖೆಯ ಹೊಣೆ ಏನೂ ಇಲ್ಲವೇ? ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಇಲಾಖೆ ಯಾಕೆ ಅನುಮತಿ ನೀಡುತ್ತಿದೆ? ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಎಷ್ಟರಮಟ್ಟಿಗೆ ನಿಯಮಗಳನ್ನು ಪಾಲಿಸುತ್ತಿವೆ? ಮಾನ್ಯತೆಯೇ ಇಲ್ಲದ ಶಾಲೆಗಳನ್ನು ನಿಯಂತ್ರಿಸಲು ಇಲಾಖೆ ಕೈಗೊಂಡ ಕ್ರಮಗಳಾವುವು?

ಕನಿಷ್ಠ ಸೌಲಭ್ಯಗಳೂ ಇಲ್ಲದ ಎಷ್ಟೋ ಖಾಸಗಿಶಾಲೆಗಳು ರಾಜ್ಯದ ರಾಜಧಾನಿಯಲ್ಲಿಯೇ ಇವೆ. ಅವುಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಇಲಾಖೆಯ ಕಾರ್ಯವೈಖರಿಯಲ್ಲಿಯೇ ಹಲವು ಲೋಪಗಳನ್ನಿಟ್ಟುಕೊಂಡು, ದಾಖಲಾತಿಯ ಇಳಿಕೆಗೆ ಶಿಕ್ಷಕರನ್ನಷ್ಟೇ ಹೊಣೆ ಮಾಡುವುದು ಸರಿಯಲ್ಲ.

ಇಲಾಖೆಯ ಅಧಿಕಾರಿಗಳು, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದರೆ ಸಾಕು, ಶಿಕ್ಷಕರ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಖಂಡಿತವಾಗಿ ಹೆಚ್ಚಿಸಬಹುದು. ಖಾಸಗೀಕರಣಕ್ಕೆ ತುಸುವಾದರೂ ಕಡಿವಾಣ ಹಾಕಿದ್ದಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.

– ಅಂಬುಜಾಕ್ಷಿ ಎನ್.ಪಿ., ಬೆಂಗಳೂರು

ಅಪಾಯಕಾರಿ ಒಡಂಬಡಿಕೆ!

ಕಲಿಕಾ ಗುಣಮಟ್ಟ ಹೆಚ್ಚಿಸುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿವಿಧ ಖಾಸಗಿ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಕೆಲವು ತಿಂಗಳ ಹಿಂದೆ ಪ್ರಕಟಿಸಲಾಗಿತ್ತು. ಅದರ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಬೇರೆಬೇರೆ ಸೌಲಭ್ಯಗಳನ್ನು ನೀಡುವುದು ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ 140ಕ್ಕೂ ಹೆಚ್ಚು ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸಲು ‘ಸರ್ಕಾರಿ ಶಾಲೆಗಳ ಸಬಲೀಕರಣ’ ಎನ್ನುವ ಕಾರ್ಯಕ್ರಮದಡಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ಐವತ್ತಕ್ಕೂ ಹೆಚ್ಚಿನ ಖಾಸಗಿ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು ಪಾಲ್ಗೊಳ್ಳುತ್ತಿವೆ.

ಇದು ಒಂದು ದುರಂತವೇ ಸರಿ. ಪ್ರಜಾಪ್ರಭುತ್ವ ಜೀವಂತವಾಗಿರಬೇಕಾದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಗೊಳ್ಳಬೇಕು, ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು ಎನ್ನುವುದು ಸಂವಿಧಾನದ ಆಶಯ. ಇದನ್ನು ಕಡೆಗಣಿಸಿ ಶಿಕ್ಷಣ ಇಲಾಖೆಯು ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾಕೆ ಸಾಧ್ಯವಿಲ್ಲ?

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಿಷನ್ 95 ಯೋಜನೆಯನ್ನು ರೂಪಿಸಲಾಗಿದೆ. ಶಾಲೆಗಳಲ್ಲಿ ಮೂಲಸೌಲಭ್ಯ ಉತ್ತಮಪಡಿಸಲು ಶಾಲಾಭಿವೃದ್ಧಿ ಸಮಿತಿಗಳಿವೆ, ಶಾಲಾ ಪೋಷಣೆ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ಯೋಜನೆ, ಸಬ್ಜೆಕ್ಟ್ ಶಿಕ್ಷಕರ ಫೋರಂ, ಮಾದರಿ ಶಾಲೆ ಯೋಜನೆ, ಆದರ್ಶ ವಿದ್ಯಾಲಯ ಯೋಜನೆ... ಇವುಗಳ ಕರ್ತವ್ಯ, ಜವಾಬ್ದಾರಿಗಳೇನು?

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿ ಡಿಡಿಪಿಐ, ಬಿಇಒಗಳು, ವಲಯ ಸಂಪನ್ಮೂಲ ಸಂಯೋಜಕರು ಕಾರ್ಯನಿರ್ವಹಿಸುತ್ತಾರೆ. ಶಾಲೆಗಳಲ್ಲಿ ಕಲಿಕೆ ಮತ್ತು ಸೌಲಭ್ಯಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್), ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳಿವೆ. ಅವುಗಳ ಗುಣಮಟ್ಟ ಕುಸಿದಿದೆಯೇ? ಹೌದಾದರೆ ಅದಕ್ಕೆ ಯಾರು ಹೊಣೆ?

ಸೌಕರ್ಯ ಕಲ್ಪಿಸುತ್ತೇವೆ, ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತೇವೆ ಎಂದು ಮುಂದೆ ಬರುವ ಸಂಸ್ಥೆಗಳು, ಕ್ರಮೇಣ ಶಾಲೆಯನ್ನೂ ಲಾಭದಾಯಕ ಉದ್ಯಮವನ್ನಾಗಿಸುತ್ತವೆ. ‘ಬಂಡವಾಳವಿಲ್ಲದೆ ಶಿಕ್ಷಣವನ್ನು ಕೊಡುವುದಾದರೂ ಹೇಗೆ?’ ಎನ್ನುವ ತರ್ಕವನ್ನು ಮುಂದಿಟ್ಟು, ‘ಹಣ ಕೊಟ್ಟರೆ ಮಾತ್ರ ಶಿಕ್ಷಣ’ ಎನ್ನುವ ನೀತಿಯನ್ನು ಜಾರಿಗೊಳಿಸುತ್ತವೆ. ಕ್ರಮೇಣ ಸರ್ಕಾರಿ ಶಾಲೆಗಳು ಈ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳುತ್ತವೆ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದ ಶಿಕ್ಷಣ ಇಲಾಖೆ, ಈ ರೀತಿ ‘ತೀವ್ರವಾದ ಖಾಸಗೀಕರಣ’ಕ್ಕೆ ಮುಂದಾಗಿರುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮರಣಮೃದಂಗದಂತಿದೆ.

– ಬಿ. ಶ್ರೀಪಾದ ಭಟ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT