‘ವಿಪಕ್ಷಗಳಿಂದ ದೇಶಕ್ಕೆ ದ್ರೋಹ’– ದಾಳಿ ಸಾಕ್ಷ್ಯ ಕೇಳಿದ್ದಕ್ಕೆ ಪ್ರಧಾನಿ ಆಕ್ರೋಶ

ಶುಕ್ರವಾರ, ಮಾರ್ಚ್ 22, 2019
24 °C
ಬಿಹಾರ: ‘ಸಂಕಲ್ಪ ಯಾತ್ರೆ’ಯಲ್ಲಿ ಪ್ರಧಾನಿ ಆರೋಪ

‘ವಿಪಕ್ಷಗಳಿಂದ ದೇಶಕ್ಕೆ ದ್ರೋಹ’– ದಾಳಿ ಸಾಕ್ಷ್ಯ ಕೇಳಿದ್ದಕ್ಕೆ ಪ್ರಧಾನಿ ಆಕ್ರೋಶ

Published:
Updated:
Prajavani

ಪಟ್ನಾ: ‘ವೈಮಾನಿಕ ದಾಳಿಯ ಸಾಕ್ಷ್ಯಗಳನ್ನು ಕೇಳುವ ಮೂಲಕ ವಿರೋಧಪಕ್ಷಗಳು ದೇಶಕ್ಕೆ ದ್ರೋಹ ಬಗೆಯುತ್ತಿವೆ. ಇಂತಹ ಹೇಳಿಕೆಗಳಿಂದ ಸೇನಾಪಡೆಗಳ ಸ್ಥೈರ್ಯ ಕುಗ್ಗುತ್ತಿದೆ. ಆದರೆ ಪಾಕಿಸ್ತಾನಕ್ಕೆ ಖುಷಿಯಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

ಎನ್‌ಡಿಎ ಮೈತ್ರಿಕೂಟವು ಇಲ್ಲಿ ಆಯೋಜಿಸಿದ್ದ ‘ಸಂಕಲ್ಪ ಯಾತ್ರೆ’ಯಲ್ಲಿ ಅವರು ಮಾತನಾಡಿದರು.

‘ಒಂದೆಡೆ ಸೈನಿಕರು ಉಗ್ರರ ವಿರುದ್ಧ ಹೋರಾಡುತ್ತಿದ್ದರು. ಆಗ ದೇಶವು ಒಗ್ಗಟ್ಟಿನಿಂದ ನಿಲ್ಲಬೇಕಿತ್ತು. ಆದರೆ ಈ 21 ವಿರೋಧ ಪಕ್ಷಗಳು ದೆಹಲಿಯಲ್ಲಿ ಗುಂಪುಗೂಡಿ, ನಮ್ಮ ಕ್ರಮಗಳನ್ನು ಖಂಡಿಸುತ್ತಿದ್ದವು. ಸೇನಾಪಡೆಗಳ ಕಾರ್ಯಾಚರಣೆಯ ಸಾಕ್ಷ್ಯ ಕೇಳುತ್ತಿದ್ದವು. ಈ ಹಿಂದೆ ನಿರ್ದಿಷ್ಟ ದಾಳಿ ನಡೆಸಿದಾಗಲೂ ಈ ಪಕ್ಷಗಳು ಹೀಗೆಯೇ ಸಾಕ್ಷ್ಯ ಕೇಳಿದ್ದವು’ ಎಂದು ಮೋದಿ ಹರಿಹಾಯ್ದರು.

‘ನಾನು ಬಡತನವನ್ನು ನಿರ್ಮೂಲನೆ ಮಾಡಲು ಹೋರಾಡುತ್ತಿದ್ದೇನೆ. ಆದರೆ ವಿಪಕ್ಷಗಳು ನನ್ನನ್ನೇ ನಿರ್ಮೂಲನೆ ಮಾಡಲು ಬಯಸುತ್ತಿವೆ. ನಾನು ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಡುತ್ತಿದ್ದೇನೆ. ಆದರೆ ಇವರು ನನ್ನನ್ನೇ ನಿರ್ಮೂಲನೆ ಮಾಡಲು ಒಂದಾಗಿದ್ದಾರೆ’ ಎಂದು ಮೋದಿ ಆರೋಪಿಸಿದರು.

‘ಬಡವರ ಹೆಸರಿನಲ್ಲಿ ತಮ್ಮ ರಾಜಕೀಯದ ವ್ಯಾಪಾರ ನಡೆಸುತ್ತಿರುವವರು ತಮ್ಮ ಲಾಭವನ್ನು ಬಿಟ್ಟು ಬೇರೇನೂ ಯೋಚಿಸುತ್ತಿಲ್ಲ. ಹೀಗಾಗಿಯೇ ಅವರಿಗೆ ಕಾವಲುಗಾರ ಎಂದರೆ ಸಮಸ್ಯೆ. ಆದರೆ ಕಾವಲುಗಾರ ಎಚ್ಚರವಾಗಿದ್ದಾನೆ ಮತ್ತು ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ’ ಎಂದು ಅವರು ಹೇಳಿದರು.

‘ಸೌದಿ ಅರೇಬಿಯಾದ ಯುವರಾಜನ ಜತೆ ಮಾತನಾಡಿದ ನಂತರ ಹಜ್‌ ಯಾತ್ರೆಯಲ್ಲಿ ಭಾರತೀಯರ ಕೋಟಾ ಹೆಚ್ಚಾಗಿದೆ. ಬೇರೆ-ಬೇರೆ ಕಾರಣಗಳಿಗೆ ಸೌದಿಯಲ್ಲಿ ಬಂಧನದಲ್ಲಿರುವ 850 ಭಾರತೀಯರನ್ನು ಬಿಡುಗಡೆ ಮಾಡಲು ಅವರು ಒಪ್ಪಿಕೊಂಡಿದ್ದಾರೆ. ಜಾಗತಿಕವಾಗಿ ಭಾರತದ ಸ್ಥಾನ ಬದಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ತನ್ನ ಲಾಭವನ್ನಷ್ಟೇ ಯೋಚಿಸುತ್ತಿತ್ತು ಎಂಬುದನ್ನೂ ಇದು ಸೂಚಿಸುತ್ತದೆ’ ಎಂದು ಅವರು ಆರೋಪಿಸಿದರು.

* ನಾನು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಹೋರಾಡುತ್ತಿದ್ದೇನೆ. ಆದರೆ ವಿರೋಧ ಪಕ್ಷಗಳು ಗುಂಪುಗೂಡಿ ನನ್ನನ್ನೇ ಮುಗಿಸಲು ಸಂಚು ಹೂಡುತ್ತಿವೆ

-ನರೇಂದ್ರ ಮೋದಿ, ಪ್ರಧಾನಿ

* ಕಾವಲುಗಾರ ಜಾಗೃತನಾಗಿ ಇದ್ದಿದ್ದರೆ ಪಠಾಣ್‌ಕೋಟ್ ವಾಯುನೆಲೆ ಮೇಲೆ, ಗುರುದಾಸಪುರದಲ್ಲಿ, ಉರಿ ಸೇನಾನೆಲೆ ಮೇಲೆ ಮತ್ತು ಪುಲ್ವಾಮಾದಲ್ಲಿ ದಾಳಿ ನಡೆಯುತ್ತಿರಲಿಲ್ಲ

-ಮನೀಷ್ ತಿವಾರಿ, ಕಾಂಗ್ರೆಸ್ ವಕ್ತಾರ

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 2

  Sad
 • 0

  Frustrated
 • 6

  Angry

Comments:

0 comments

Write the first review for this !