ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ತಿರುಗೇಟು ನೀಡಲು ಗಡಿಯಲ್ಲಿ ಸೇನೆ, ಭದ್ರತಾಪಡೆ ಸನ್ನದ್ಧ

ಪಾಕಿಸ್ತಾನದಿಂದ ವಾಯುಗಡಿ ಉಲ್ಲಂಗನೆ; ಶೆಲ್ ದಾಳಿ
Last Updated 27 ಫೆಬ್ರುವರಿ 2019, 11:15 IST
ಅಕ್ಷರ ಗಾತ್ರ

ಜಮ್ಮು : ವಾಯುಗಡಿ ಉಲ್ಲಂಘಿಸಿರುವ ಪಾಕಿಸ್ತಾನಕ್ಕೆ ಯಾವುದೇ ಕ್ಷಣದಲ್ಲಿ ತಿರುಗೇಟು ನೀಡಲು ಸಾಧ್ಯವಾಗುವಂತೆ ಭಾರತೀಯ ಸೇನೆ ಹಾಗೂ ಗಡಿಭದ್ರತಾ ಪಡೆಯನ್ನು (ಬಿಎಸ್‌ಎಫ್) ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ಅಂತರರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿಯಿಡೀ ಭಾರತೀಯ ನಾಗರಿಕರನ್ನು ಗುರಿಯಾಗಿಸಿ ಪಾಕಿಸ್ತಾನದ ಪಡೆಗಳು ಭಾರಿ ಪ್ರಮಾಣದ ಶೆಲ್ ದಾಳಿ ನಡೆಸಿದವು. ಆದರೆ ಬುಧವಾರ ಬೆಳಗ್ಗೆಯಿಂದ ಯಾವುದೇ ದಾಳಿ ನಡೆದಿಲ್ಲ.

ಸ್ವರಕ್ಷಣೆಗಾಗಿ ಭಾರತದಲ್ಲಿ ದಾಳಿ ನಡೆಸಲು ತಮ್ಮ ವಿಮಾನಗಳು ಎಲ್‌ಒಸಿ ದಾಟಿವೆ ಎಂದು ಪಾಕಿಸ್ತಾನ ಬುಧವಾರ ಹೇಳಿದೆ. ಪಾಕಿಸ್ತಾನದ ಯುದ್ಧವಿಮಾನಗಳು ಜಮ್ಮು, ನೌಷೆರಾ ಹಾಗೂ ಪೂಂಛ್‌ನಲ್ಲಿ ವಾಯುಗಡಿ ಉಲ್ಲಂಘಿಸಿದ್ದು, ಅವುಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಕಡೆಯಿಂದ ಮಂಗಳವಾರ ರಾತ್ರಿ ಎದುರಾದ ಶೆಲ್‌ ದಾಳಿಗೆ ಪ್ರತಿಯಾಗಿ ಆ ದೇಶದ ಐದು ಠಾಣೆಗಳನ್ನುಭಾರತೀಯ ಸೇನೆ ನಾಶಪಡಿಸಿದೆ ಎಂದು ರಕ್ಷಣಾ ಇಲಾಖೆ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಹತಾಶೆಗೊಂಡಿರುವ ಪಾಕಿಸ್ತಾನದ ಸೇನೆಯು ಮಂಗಳವಾರ ಸಂಜೆ 6.30ರಿಂದಲೇ ಶೆಲ್‌ ದಾಳಿ ಆರಂಭಿಸಿತು. ಗ್ರಾಮಸ್ಥರನ್ನು ಮಾನವ ಗುರಾಣಿಯಂತೆ ಬಳಸಿಕೊಂಡು, ಅಲ್ಲಿಂದಲೇ ಮಾರ್ಟರ್‌ ಮತ್ತು ಕ್ಷಿಪಣಿಗಳನ್ನೂ ಉಡಾವಣೆ ಮಾಡಿತು. ಆದರೆ ಜನವಸತಿಯಿಂದ ದೂರವಿರುವ ಪಾಕಿಸ್ತಾನದ ಸೇನೆಯ ಠಾಣೆಗಳನ್ನಷ್ಟೇ ಗುರಿಯಾಗಿಸಿ ಭಾರತದ ಸೇನೆ ಪ್ರತಿದಾಳಿ ನಡೆಸಿತು’ ಎಂದು ಅವರು ಹೇಳಿದ್ದಾರೆ. ಗುಂಡಿನ ಚಕಮಕಿ ವೇಳೆ ಐವರು ಯೋಧರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆ ಬಂದ್, ಜನರ ವಲಸೆ

ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಉದ್ವಿಗ್ನ ಸ್ಥಿತಿಯಿಂದಾಗಿ ಗಡಿನಿಯಂತ್ರಣ ರೇಖೆಯ (ಎಲ್ಒಸಿ)ರಜೌರಿ ಹಾಗೂ ಪೂಂಛ್ ಜಿಲ್ಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಎಲ್ಲ ಶಾಲಾಕಾಲೇಜುಗಳನ್ನು ಮುಚ್ಚಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿರುವ ಎಲ್ಲ ಗ್ರಾಮಗಳ ಜನರಿಗೆ ಮನೆ ಬಿಟ್ಟು ಹೊರಬರದಂತೆ ಸೂಚನೆ ನೀಡಲಾಗಿದೆ. ಗಡಿ ಭಾಗದ ಜನರಲ್ಲಿ ಆತಂಕ ಮನೆಮಾಡಿದ್ದು, ಅವರು ತಮ್ಮ ಮನೆಗಳನ್ನು ತೊರೆದು, ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT