ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದೊಂದಿಗೆ ಜೇಟ್ಲಿ ನಂಟು 

Last Updated 24 ಆಗಸ್ಟ್ 2019, 8:43 IST
ಅಕ್ಷರ ಗಾತ್ರ

ಬೆಂಗಳೂರು: ಅರುಣ್‌ ಜೇಟ್ಲಿ ಅವರಿಗೆ ಕರ್ನಾಟಕ ಮತ್ತು ಬೆಂಗಳೂರಿನ ನಂಟು ಬಹಳ ಹಿಂದಿನಿಂದಲೂ ಇದೆ. ವಕೀಲರಾಗಿ ಉತ್ತಮ ಹೆಸರು ಮಾಡಿದ್ದ ಜೇಟ್ಲಿ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ರಾಮಾ ಜೋಯಿಸ್‌ ಅವರ ಜತೆ ಉತ್ತಮ ಒಡನಾಟ ಹೊಂದಿದ್ದರು. ಬಿಜೆಪಿ ಸದಸ್ಯರಾಗುವುದಕ್ಕೂ ಮೊದಲಿಂದಲೂ ಕರ್ನಾಟಕ್ಕೆ ಬಂದು ಹೋಗುತ್ತಿದ್ದರು.

ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿಯೂ ಆಗಿದ್ದರು. 2004ರಲ್ಲಿ ನಡೆದ ಕರ್ನಾಟಕವಿಧಾನಸಭೆ ಚುನಾವಣೆಗೆ ಅರುಣ್‌ ಜೇಟ್ಲಿ ಅವರನ್ನು ರಾಜ್ಯ ಉಸ್ತುವಾರಿಯನ್ನಾಗಿ ಪಕ್ಷ ನೇಮಿಸಿತ್ತು. ಇದಕ್ಕೂ ಮೊದಲು ಪಕ್ಷದ ಸಂಘಟನೆಗಾಗಿ ರಾಜ್ಯಕ್ಕೆ ಬಂದು ಹೋಗಿದ್ದರು. ರಾಷ್ಟ್ರಮಟ್ಟದ ಪ್ರಮುಖ ಘಟನೆಗಳಾದಾಗ ಅಯೋದ್ಯೆ ವಿವಾದದ ಕಾನೂನಾತ್ಮಕ ವಿಷಯ, ಆರ್ಟಿಕಲ್‌ 370ಎ ಕುರಿತೂ ಸಾಕಷ್ಟು ಉಪನ್ಯಾಸ ನೀಡಿದ್ದಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ಕಾರ್ಯಕಾರಿ ಸಮಿತಿ, ಶಾಸಕಾಂಗ ಸಮಿತಿ, ಬಾರ್‌ ಅಸೋಷಿಯೇಷನ್‌, ಬೆಂಗಳೂರು ವಕೀಲರ ಸಂಘದಲ್ಲಿಯೂ ಹಲವು ಉಪನ್ಯಾಸಗಳನ್ನು ನೀಡಿದ್ದಾರೆ. ಹೀಗಾಗಿ ರಾಜ್ಯಕ್ಕೇನು ಅವರು ಹೊಸಬರಾಗಿರಲಿಲ್ಲ. ಕಾನೂನು ವಿಷಯದ ಜತೆಗೆ ‘ಕಾರ್ಪೋರೇಟ್‌ ಅಫೇರ್ಸ್‌’ ಬಗ್ಗೆ ಅವರಿಗೆ ವಿಶೇಷ ಜ್ಞಾನವಿತ್ತು. ಆದ್ದರಿಂದ ಅವರು ಹಣಕಾಸು ಸಚಿವರೂ ಆದರು. ಆರ್ಥಿಕತೆ ಬಗ್ಗೆ ವಿಶೇಷ ಜ್ಞಾನ ಹೊಂದಿದವರಾಗಿದ್ದರು.

2002ರಲ್ಲಿ ಬಿಜೆಪಿಯ ಕರ್ನಾಟಕ ರಾಜ್ಯ ಉಸ್ತುವಾರಿಯಾಗಿ ನೇಮಕವಾದರು. ಅಲ್ಲಿಂದ ರಾಜ್ಯಕ್ಕೆ ಬಂದುಹೋಗುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದರು. 2004ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಅರುಣ್‌ ಜೇಟ್ಲಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ 79 ಸ್ಥಾನಗಳಿಸಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಆಗ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಆ ವೇಳೆಯಲ್ಲಿ ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗುವ ಮೂಲಕ ಸರ್ಕಾರ ರಚಿಸಿಕೊಂಡರು.

ಪಕ್ಷ ಸಂಘಟನೆ ಮತ್ತು ಪಕ್ಷದ ಸಿದ್ಧಾಂತಗಳ ಬಗ್ಗೆ ಅವರ ಮಾರ್ಗದರ್ಶನ ಅಮೂಲ್ಯವಾಗಿತ್ತು. ಪಕ್ಷದ ವಿಚಾರಗಳಲ್ಲಿ ಸಾಂಸ್ಕೃತಿಕ ರಾಷ್ಟ್ರವಾದ ಎಂದರೇನು? ಪಕ್ಷದ ಸಿದ್ಧಾಂತಗಳೇನು? ಹಿಂದುತ್ವಕ್ಕೆ ಏಕೆ ವಿಶಾಲಭಾವನೆ ಇದೆ, ಯಾಕೆ ಹಿಂದುತ್ವದಆಧಾರದ ಮೇಲೆ ಅಭಿವೃದ್ಧಿ ರಾಜಕಾರಣ ಮಾಡಲು ಹೊರಟಿದ್ದೇವೆ? ಅದು ಯಾವ ಕಾರಣಕ್ಕೆ ಯಶಸ್ವಿಯಾಗುತ್ತದೆ? ಎಂಬ ವಿಷಯಗಳಿಗೆ ರಾಜ್ಯದಲ್ಲಿ ಹೊಸ ಆಯಾಮ ಕೊಟ್ಟ ವ್ಯಕ್ತಿ ಅರುಣ್‌ ಜೇಟ್ಲಿ.

ಶಾಸಕರು ಮತ್ತು ಸಂಸದರಿಗೂ ವೈಚಾರಿಕತೆ ಏನು ಸಂಬಂಧ ಎಂಬ ಪ್ರಶ್ನೆಗೆ ಅರುಣ್‌ ಜೇಟ್ಲಿ ಅವರು, ವೈಚಾರಿಕತೆ ಆಧಾರದ ಮೇಲೆ ಸಾಂಸ್ಕೃತಿಕ ರಾಷ್ಟ್ರವಾದ ಎಂಬುದು ದೀನ ದಯಾಳು ಉಪಾಧ್ಯಾಯ ಅವರು ಹಾಕಿಕೊಟ್ಟ ‘ಅಂತ್ಯೋದಯ’ ಪರಿಕಲ್ಪನೆಯಲ್ಲಿ ಕಟ್ಟಕಡೆಯ ವ್ಯಕ್ತಿಯ ಸೇವೆ ಮಾಡುವುದೇ ನಮ್ಮಧ್ಯೇಯ. ಹಾಗಾಗಿ, ಇದು ಶಾಸಕರು, ಸಂಸದರು, ಗ್ರಾಮ ಪಂಚಾಯ್ತಿ ಸದಸ್ಯರು ಸೇರಿದಂತೆ ಆಯ್ಕೆಯಾದ ಪ್ರತಿನಿಧಿಗಳು ಸಮಾಜದ ಸೇವೆ ಮಾಡಬೇಕು ಎಂಬುದೇ ಅಂತ್ಯೋದಯ ಎಂದು ಅರುಣ್‌ ಜೇಟ್ಲಿ ಅವರು ಸ್ಪಷ್ಟವಾಗಿ ಹೇಳುತ್ತಿದ್ದರು.

ಅರುಣ್‌ ಜೇಟ್ಲಿ ಅವರು ಚಡ್ಡಿ ಹಾಕಿ, ಲಾಠಿ ಹಿಡಿದು, ತಿಲಕ ಹಚ್ಚಿಕೊಂಡು ತೊಡಗಿಸಿಕೊಳ್ಳುವಷ್ಟರ ಮಟ್ಟಿಗೆ ಆರ್‌ಎಸ್‌ಎಸ್‌ನ ಕಟ್ಟಾಳು ಆಗಿರಲಿಲ್ಲ. ಆದರೆ, ಹಿಂದುತ್ವ ವಿಚಾರದ ಪ್ರತಿಪಾದಕರಾಗಿದ್ದರು. ಶ್ರೀಮಂತ ಬೌದ್ಧಿಕ ಚಿಂತಕರಾಗಿದ್ದರು. ಆರ್‌ಎಸ್‌ಎಸ್‌ನ ವಿಚಾರಗಳನ್ನು ಉತ್ತಮವಾಗಿ ಪ್ರತಿಪಾದಿಸುವ ಕಲೆ ಅವರಲ್ಲಿತ್ತು.

ಕರ್ನಾಟಕಕ್ಕೆ ಸಂಬಂಧಪಟ್ಟಂತೆ 2004ರ ನಂತರವೂ ಅವರು ಬಂದು ಹೋಗುವುದನ್ನು ಮಾಡುತ್ತಿದ್ದರು. 2004ರಲ್ಲಿ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡಿತು. ಆದರೂ ರಾಜ್ಯದ ಜತೆಗಿನ ಒಡನಾಟ ಮುಂದುವರಿಸಿದ್ದರು.

ಅರುಣ್‌ ಜೇಟ್ಲಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಅಮೃತಸರ ಕ್ಷೇತ್ರದಲ್ಲಿ ಸೋಲುಕಂಡರು. ಅವರು ಮಾಸ್‌ ಲೀಡರ್‌ ಆಗಿರಲಿಲ್ಲ. ಕ್ಲಾಸ್‌ ಲೀಡರ್‌ ಆಗಿದ್ದರು. ಜೇಟ್ಲಿ ಅವರು ಬೌದ್ಧಿಕ ವಿಚಾರಧಾರೆ ಮತ್ತು ವಾಕ್ಚಾತುರ್ಯದ ಮೂಲಕ ತಿಳಿವಳಿಕೆಯುಳ್ಳ ನಗರಮಟ್ಟದ ಜನರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಕ್ಲಾಸ್‌ ಲೀಡರ್‌, ಕಣ್ಮಣಿ ಆಗಿದ್ದರು. ಅಮೃತಸರದಲ್ಲಿ ಸೋಲುಕಂಡರು ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಕರೆತರಲಾಯಿತು. ಸದನದಲ್ಲಿ ಹಿರಿಯ ನಾಯಕರ ಪ್ರಶ್ನೆಗಳಿಗೆ ಸಮರ್ಥವಾಗಿ ಪ್ರತ್ಯುತ್ತರ ನೀಡುತ್ತಿದ್ದ ಸಾಮರ್ಥ್ಯ ಅವರಲ್ಲಿತ್ತು. ಸಂಸತ್‌ನಲ್ಲಿ ಅವರ ಇರುವಿಕೆ ಅಗತ್ಯ ಇದ್ದುದರಿಂದ, ಅವರನ್ನು ರಾಜ್ಯ ಸಭೆಗೆ ಕರೆತಂದರು. ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳು, ಅದರಲ್ಲೂ ಪಿ.ಚಿದಂಬರಂ, ಮನೀಷ್ ತಿವಾರಿ, ಮನಮೋಹನ್‌ ಸಿಂಗ್ ಅವರಂಥ ನಾಯಕರಿಗೆ ಪ್ರತಿ ಉತ್ತರ ನೀಡುವ ಸಾಮರ್ಥ್ಯ ಅವರಲ್ಲಿ ಇತ್ತು. ಹಾಗಾಗಿ, ಅರುಣ್‌ ಜೇಟ್ಲಿ ಬಿಜೆಪಿಯ ಬೌದ್ಧಿಕ ಮುಖ ಮತ್ತು ‘ಅರ್ಬನ್’(ನಗರ) ಕೇಂದ್ರಿತ ಮುಖವೂ ಆಗಿದ್ದರು.

ವಿದೇಶದಲ್ಲಿ ಭಾರತ ಎಂದರೇನು? ಭಾರತ ಸರ್ಕಾರ ಎಂದರೇನು? ಹೊಸ ಬಗೆಯ ಸರ್ಕಾರ ಎಂದರೇನು? ಭಾರತದ ಮೋದಿ ಆರ್ಥಿಕ ಚಿಂತನೆ ಏನು? ಎಂಬುದನ್ನು ಅತ್ಯುತ್ತಮವಾಗಿ ಪ್ರತಿಪಾದಿಸಿದ ವ್ಯಕ್ತಿ ಅರುಣ್‌ ಜೇಟ್ಲಿ. ಅವರಿಗಿದ್ದ ಇಂಗ್ಲಿಷ್‌ ಮತ್ತು ಹಿಂದಿ ಭಾಷೆ ಮೇಲಿನ ಉತ್ತಮ ಹಿಡಿತದಿಂದಾಗಿ ಯಾವುದೇ ವಿಷಯವನ್ನು ಮಾಧ್ಯಮಗಳ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದರು. ಸುಷ್ಮಾ ಸ್ವರಾಜ್‌ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದರು. ಜೇಟ್ಲಿ ಅವರಿಗೆ ಕನ್ನಡ ಬರುತ್ತಿರಲಿಲ್ಲ.

ಕಾನೂನು, ಅರ್ಥಶಾಸ್ತ್ರ, ‘ಕಾರ್ಪೋರೇಟ್‌ ಅಫೇರ್ಸ್‌’ ಭಾರತದ ಸಾಮಾಜಿಕ ಪರಿಸ್ಥಿತಿ, ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೆಚ್ಚಿನ ಪರಿಣತಿ ಹೊಂದಿದ್ದರು. ಕೇಂದ್ರದಲ್ಲಿ ಸಚಿವರಾಗಿದ್ದಾಗಲೂ ಅವರು ರಾಜ್ಯಕ್ಕೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ಕರ್ನಾಟಕ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದವರಾದ್ದರಿಂದ, ರಾಜ್ಯದಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ, ಶಾಸಕಾಂಗ ಸಭೆ, ಪರಿಷತ್‌ ಸಭೆಗಳಲ್ಲಿ ಮಾತನಾಡಿದ್ದಾರೆ. ಹೀಗಾಗಿ, ಅವರಿಗೆ ಹಲವು ಜಿಲ್ಲೆಗಳ ಹಾಗೂ ಜಿಲ್ಲಾ ಮಟ್ಟದ ಮುಖಂಡರ, ಕಾರ್ಯಕರ್ತರ ಹೆಸರುಗಳು ನಾಲಿಗೆ ತುದಿಯಲ್ಲೇ ಇದ್ದವು. ಉಸ್ತುವಾರಿಯಾಗಿದ್ದಾಗ ಪ್ರತಿ ತಿಂಗಳು ರಾಜ್ಯಕ್ಕೆ ಬಂದು ಹೋಗುತ್ತಿದ್ದರು. ಕೇಂದ್ರ ಸಚಿವರಾಗಿದ್ದರಿಂದ ಕೆಲಸದ ಒತ್ತಡದಿಂದ ಬರುವುದು ಕಡಿಮೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT