ವಿಜಯ್ ಮಲ್ಯ ಪರಾರಿಯಾಗಲು ಅರುಣ್ ಜೇಟ್ಲಿ ನೆರವು: ರಾಹುಲ್ ಗಾಂಧಿ ಆರೋಪ

7

ವಿಜಯ್ ಮಲ್ಯ ಪರಾರಿಯಾಗಲು ಅರುಣ್ ಜೇಟ್ಲಿ ನೆರವು: ರಾಹುಲ್ ಗಾಂಧಿ ಆರೋಪ

Published:
Updated:

ನವದೆಹಲಿ: ವಿವಿಧ ಬ್ಯಾಂಕ್‌ಗಳಿಂದ ಪಡೆದ ಸಾವಿರಾರು ಕೋಟಿ ಹಣವನ್ನು ಮರುಪಾವತಿಸದೆ ಉದ್ಯಮಿ ವಿಜಯ್‌ ಮಲ್ಯ ಇಂಗ್ಲೆಂಡ್‌ಗೆ ಪರಾರಿಯಾಗಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ನೆರವು ನೀಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ದೇಶದಿಂದ ಹೊರಡುವ ಮುನ್ನ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾಗಿ ಮಲ್ಯ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌, ‘ಈ ವಿಚಾರವನ್ನು ತನಿಖಾ ಸಂಸ್ಥೆಗಳಿಗೆ ತಿಳಿಸದೆ ಇರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೇಶ ಬಿಡುವ ಮುನ್ನ ವಿತ್ತ ಸಚಿವರ ಭೇಟಿಯಾಗಿದ್ದೆ– ಮಲ್ಯ; ಎಲ್ಲ ಸುಳ್ಳು– ಜೇಟ್ಲಿ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಅಧ್ಯಕ್ಷ, ‘ಮಲ್ಯ ಪರಾರಿಯಾಗಲು ಜೇಟ್ಲಿ ಅವಕಾಶ ಮಾಡಿಕೊಟ್ಟಿದ್ದೇಕೆ? ಅಥವಾ ಇದು ಪ್ರಧಾನಮಂತ್ರಿಗಳ ಆದೇಶವಾಗಿತ್ತೇ?’ ಎಂದು ಗುಡುಗಿದ್ದಾರೆ.

‘ಇದೊಂದು ಯೋಜಿತ ಪ್ರಕರಣ ಎಂಬುದು ಸ್ಪಷ್ಟವಾಗಿದೆ. ಅವರ ನಡುವೆ ಕೆಲವು ಒಪ್ಪಂದಗಳಾಗಿವೆ. ಹಣಕಾಸು ಸಚಿವ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಕುರಿತು ತನಿಖೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಹಿರಿಯ ನಾಯಕ ಪಿ.ಎಲ್‌.ಪೂನಿಯಾ ಅವರು 2016ರ ಮಾರ್ಚ್‌ 01ರಂದು ಮಲ್ಯ ಹಾಗೂ ಜೇಟ್ಲಿ ಸಂಸತ್‌ ಭವನದಲ್ಲಿ ಚರ್ಚೆ ನಡೆಸುತ್ತಿದ್ದುದ್ದನ್ನು ಗಮನಿಸಿದ್ದಾಗಿ ಹೇಳಿದರು.

ಮಾರ್ಚ್‌ 02ರಂದು ಮಲ್ಯ ದೇಶದಿಂದ ಪರಾರಿಯಾಗಿದ್ದಾರೆ ಎಂಬ ಸುದ್ದಿ ಮಾರ್ಚ್‌ 03ರಂದು ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಇದಾದ ಬಳಿಕ ಮಾಧ್ಯಮಗಳ ಸಂದರ್ಶನ ಸಂದರ್ಭಗಳಲ್ಲಿ ಮಲ್ಯ–ಜೇಟ್ಲಿ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಅದಕ್ಕೆ ಪುರಾವೆಯಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಇವೆ. ನಾವು ಎಲ್ಲವನ್ನೂ ನೋಡಬಹುದಾಗಿದೆ. ಒಂದು ವೇಳೆ ನಾನು ಹೇಳುತ್ತಿರುವುದು ಸುಳ್ಳಾದರೆ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದೇನೆ’ ಎಂದರು.

ಇಬ್ಬರೂ 15–20 ನಿಮಿಷ ಮಾತುಕತೆ ನಡೆಸಿದ್ದರು ಎಂದೂ ಹೇಳಿದರು.

ಇದನ್ನೂ ಓದಿ: ಹಣಕಾಸು ಸಚಿವರನ್ನು ಅಧಿಕೃತ ಭೇಟಿ ಮಾಡಿಲ್ಲ ಎಂದ ವಿಜಯ್ ಮಲ್ಯ

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 0

  Frustrated
 • 9

  Angry

Comments:

0 comments

Write the first review for this !