ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌ನಲ್ಲಿ ಗರ್ಭಿಣಿ ಕರೆದೊಯ್ಯಲು ನೆರವಾದ ರಾಜ್ಯಪಾಲ

ಮಾನವೀಯತೆ
Last Updated 30 ನವೆಂಬರ್ 2018, 18:48 IST
ಅಕ್ಷರ ಗಾತ್ರ

ಇಟಾನಗರ: ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಿದ್ದ ತುಂಬು ಗರ್ಭಿಣಿಯನ್ನು ತಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲೇ ತವಾಂಗ್‌ನಿಂದ ಇಟಾನಗರದ ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಮಾಡುವ ಮೂಲಕ, ಅರುಣಾಚಲ ಪ್ರದೇಶದ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ಮಾನವೀಯತೆ ಮೆರೆದಿದ್ದಾರೆ.

ಮಾರ್ಗ ಮಧ್ಯೆ ಅಸ್ಸಾಂನ ತೇಜ್‌ಪುರದಲ್ಲಿ ಇಂಧನ ತುಂಬಿಸಿಕೊಳ್ಳಲು ಇಳಿಸಿದಾಗ, ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಆಗ ರಾಜ್ಯಪಾಲರು ವಾಯುಪಡೆಯ ಹೆಲಿಕಾಪ್ಟರ್‌ ಮೂಲಕ ಗರ್ಭಿಣಿ ಹಾಗೂ ಆಕೆಯ ಪತಿ ಮೊದಲು ಇಟಾನಗರ ತಲುಪುವ ವ್ಯವಸ್ಥೆ ಮಾಡಿದರು. ಬಳಿಕ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ತಾವು ರಾಜಧಾನಿಗೆ ತೆರಳಿದರು ಎಂದು ರಾಜಭವನದ ಮೂಲಗಳು ತಿಳಿಸಿವೆ.‌

ಅಷ್ಟೇ ಅಲ್ಲದೆ, ರಾಜಭವನದ ಹೆಲಿಪ್ಯಾಡ್‌ನಿಂದ ಪ್ರಸೂತಿ ತಜ್ಞೆಯನ್ನು ಒಳಗೊಂಡ ಆಂಬುಲೆನ್ಸ್ ಸೇವೆಯನ್ನೂ ಒದಗಿಸಿ, ದಂಪತಿ ಸಕಾಲದಲ್ಲಿ ಆಸ್ಪತ್ರೆ ತಲು‍ಪುವಂತೆ ನೋಡಿಕೊಂಡರು. ಹೀಮಾ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೆರಿಗೆ ಆಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ರಾಜ್ಯಪಾಲರು ಇಬ್ಬರಿಗೂ ಶುಭಾಶಯ ಹೇಳಿದ್ದಾರೆ.

ಆಗಿದ್ದೇನು?: ತವಾಂಗ್‌ನಲ್ಲಿ ಬುಧವಾರ ರಾಜ್ಯಪಾಲರು ಅಧಿಕೃತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆಗ, ಗರ್ಭಿಣಿಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದ ಬಗ್ಗೆ ಮುಖ್ಯಮಂತ್ರಿ ಪೆಮಾ ಖಂಡು ಅವರಿಗೆ ಸ್ಥಳೀಯ ಶಾಸಕರು ಮಾಹಿತಿ ನೀಡುತ್ತಿದ್ದುದು ಅವರ ಗಮನಕ್ಕೆ ಬಂದಿತು. ಮುಂದಿನ ಮೂರು ದಿನಗಳ ಕಾಲ ಗುವಾಹಟಿ ಮತ್ತು ತವಾಂಗ್ ಮಧ್ಯೆ ಹೆಲಿಕಾಪ್ಟರ್ ಸೇವೆ ಇಲ್ಲ ಎನ್ನುವುದನ್ನೂ ಶಾಸಕರು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದರು.

ಆಗ ಮಿಶ್ರಾ ತಮ್ಮ ಅಧಿಕೃತ ಹೆಲಿಕಾಪ್ಟರ್‌ನಲ್ಲಿ ತಮ್ಮೊಟ್ಟಿಗೇ ಆ ದಂಪತಿಯನ್ನು ಕರೆದೊಯ್ಯಲು ನಿರ್ಧರಿಸಿದರು. ಅದಕ್ಕಾಗಿ, ತಮ್ಮ ಜೊತೆ ಬರಬೇಕಿದ್ದ ಇಬ್ಬರು ಅಧಿಕಾರಿಗಳನ್ನು ತವಾಂಗ್‌ನಲ್ಲೇ ಉಳಿಯುವಂತೆ ಸೂಚಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.‌

**

ತವಾಂಗ್‌ನಿಂದ ಇಟಾನಗರ 200 ಕಿ.ಮೀ ದೂರ ಇದೆ. ಕಣಿವೆ ರಸ್ತೆ ಮಾರ್ಗದಲ್ಲಿ ಸಂಚರಿಸಲು ಕನಿಷ್ಠ 15 ಗಂಟೆ ಬೇಕು. ವಾಯು ಮಾರ್ಗ ಎರಡು ಗಂಟೆ ಮಾತ್ರ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT