ಬುಧವಾರ, ನವೆಂಬರ್ 20, 2019
20 °C

ಸರ್ವೋಚ್ಛ ನ್ಯಾಯಾಲಯ ಸುಪ್ರೀಂ, ಆದರೆ ದೋಷಾತೀತವಲ್ಲ –ಒವೈಸಿ

Published:
Updated:
Prajavani

ಹೈದರಾಬಾದ್‌: ‘ಸರ್ವೋಚ್ಛ ನ್ಯಾಯಾಲಯ ನಿಜವಾಗಿಯೂ ಸುಪ್ರೀಂ. ಆದರೆ, ದೋಷಾತೀತವಲ್ಲ’ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾಸುದ್ದೀನ್‌ ಒವೈಸಿ ಹೇಳಿದ್ದಾರೆ.

‘ಅಯೋಧ್ಯೆ ನಿವೇಶನ ವಿವಾದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಸಲ್ಮಾನರಿಗೆ ಐದು ಎಕರೆ ಭೂಮಿ ಅಗತ್ಯವಿಲ್ಲ. ನಾವು ಖಂಡಿತವಾಗಿ ಆ ‘ಕೊಡುಗೆ’ಯನ್ನು ತಿರಸ್ಕರಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಉತ್ತರ ಪ್ರದೇಶದಲ್ಲಿ ‘ದೇವರಿ’ಗಾಗಿ ಐದು ಎಕರೆ ಭೂಮಿಯನ್ನು ಖರೀದಿಸಲು ಆಗದಷ್ಟೂ ಶೋಚನೀಯ ಸ್ಥಿತಿಯಲ್ಲಿಲ್ಲ. ದಯವಿಟ್ಟು ನಮ್ಮನ್ನು ಹುರಿದುಂಬಿಸಬೇಡಿ’ ಎಂದರು.

‘ನನಗೆ ಭಾರತ ಸಂವಿಧಾನದ ಮೇಲೆ ನಂಬಿಕೆ ಇದೆ. ಮುಸಲ್ಮಾನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇವೆ. ತೀರ್ಪು ಕುರಿತಂತೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿಲುವನ್ನು ಒಪ್ಪಲಿದ್ದು, ತೀರ್ಪು ನಮಗೆ ಸಮಾಧಾನ ನೀಡಿಲ್ಲ’ ಎಂದು ಹೇಳಿದರು.

‘ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರಿಗೆ ಈಗ ಟ್ರಸ್ಟ್‌ ಸ್ಥಾಪಿಸಲು ಹಾಗೂ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸುವ ಹೊಣೆಯನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದೊಂದು ವಿರೋಧಾಭಾಸ’ ಎಂದು ಹೇಳಿದರು.

ಒಂದು ವೇಳೆ ಅಲ್ಲಿ ಮಸೀದಿಯನ್ನು ನೆಲಸಮ ಮಾಡಿರದೇ ಇದ್ದರೆ ಸುಪ್ರೀಂ ಕೋರ್ಟ್‌ನ ತೀರ್ಪು ಏನಿರುತ್ತಿತ್ತು? ಎಂದು ಪ್ರಶ್ನಿಸಿದ ಅವರು, ಮಸೀದಿ ನೆಲಸಮ ಕಾನೂನುಬಾಹಿರ ಎಂಬುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)