'ಮುಸ್ಲಿಂ ವ್ಯಕ್ತಿಯ ಗಡ್ಡ ಬೋಳಿಸಿದ ಆರೋಪಿಗಳನ್ನು ಇಸ್ಲಾಂಗೆ ಮತಾಂತರಿಸುತ್ತೇವೆ'

7

'ಮುಸ್ಲಿಂ ವ್ಯಕ್ತಿಯ ಗಡ್ಡ ಬೋಳಿಸಿದ ಆರೋಪಿಗಳನ್ನು ಇಸ್ಲಾಂಗೆ ಮತಾಂತರಿಸುತ್ತೇವೆ'

Published:
Updated:

ಹೈದರಾಬಾದ್: ಬಲವಂತವಾಗಿ ಮುಸ್ಲಿಂ ವ್ಯಕ್ತಿಯೊಬ್ಬನ ಗಡ್ಡ ಬೋಳಿಸಲಾಯಿತು. ಈ ಕೃತ್ಯವನ್ನು ಮಾಡಿದವರು ಯಾರೇ ಆಗಿರಲಿ, ಅವರಿಗೂ ಅವರಪ್ಪನಿಗೂ ಹೇಳುತ್ತಿದ್ದೇನೆ...ನೀವು ನಮ್ಮ ಕತ್ತು ಸೀಳಿದರೂ ನಾವು ಮುಸ್ಲಿಮರಾಗಿಯೇ ಇರುತ್ತೇವೆ. ನಾವು ನಿಮ್ಮನ್ನು ಇಸ್ಲಾಂಗೆ ಮತಾಂತರ ಮಾಡಿ ಗಡ್ಡ ಬೆಳೆಸುವಂತೆ ಮಾಡುತ್ತೇವೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಗುಡುಗಿದ್ದಾರೆ ಎಂದು ಎನ್‌‍ಡಿಟಿವಿ ವರದಿ ಮಾಡಿದೆ.

ಗುರುಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಬಲವಂತವಾಗಿ ಕ್ಷೌರದಂಗಡಿಗೆ ಕರೆದೊಯ್ದು ಗಡ್ಡ ಬೋಳಿಸಿದ ಪ್ರಕರಣದ ಬಗ್ಗೆ ಒವೈಸಿ ಈ ರೀತಿ ಪ್ರತಿಕ್ರಯಿಸಿದ್ದಾರೆ.

ಏನಿದು ಪ್ರಕರಣ?
ಗುರುಗ್ರಾಮದ ಸೆಕ್ಟರ್‌ 29ರಲ್ಲಿ ಮುಸ್ಲಿಂ ಯುವಕನೊಬ್ಬನ ಗಡ್ಡವನ್ನು ಬಲವಂತದಿಂದ ಬೋಳಿಸಲಾಗಿತ್ತು. ಐಎಫ್ಎಫ್‍ಸಿಒ ಚೌಕ್ ಬಳಿ ಚಿಕ್ಕ ಡಾಬಾ ನಡೆಸುತ್ತಿದ್ದ ಜಾಫರುದ್ದೀನ್ ಎಂಬ ವ್ಯಕ್ತಿ ತನ್ನ ಅಡುಗೆಯವನಾದ ಇಬ್ರಾಹಿಂ ಜತೆ ಜುಲೈ 31ರಂದು ಸಂಜೆ 6 ಗಂಟೆಗೆ ಖಾಂಡ್ಸಾ ಮಂಡಿಗೆ ತರಕಾರಿ ಖರೀದಿಸಲು ಹೋಗಿದ್ದನು.

ಈ ಘಟನೆ ಬಗ್ಗೆ ಜಾಫರುದ್ದೀನ್ ಹೇಳಿದ್ದು ಹೀಗೆ: 
ತರಕಾರಿ ಮಾರುಕಟ್ಟೆಗೆ ಹೋಗಿದ್ದ ನಾನು ತಲೆಕೂದಲು ಕತ್ತರಿಸಲು ಹತ್ತಿರದ ಸಲೂನ್‍ಗೆ ಹೋದೆ. ಅಲ್ಲಿ ಆಗಲೇ ಇಬ್ಬರು ಯುವಕರು ಇದ್ದರು. ಒಬ್ಬಾತ ಶೇವ್ ಮಾಡಿದ ನಂತರ ನಿನ್ನ ಗಡ್ಡ ಕತ್ತರಿಸುವುದಿಲ್ಲವೇ ಎಂದು ಕೇಳಿದ. ಆಗ ನಾನು ನನ್ನ ಧರ್ಮದ ಬಗ್ಗೆ ಹೇಳಿದೆ. ಅಷ್ಟೊತ್ತಿಗೆ ಅವನು ನನ್ನನ್ನು ಬೈದು ಪಾಕಿಸ್ತಾನಿ ಎಂದ. ಅಲ್ಲಿದ್ದ ಇನ್ನೊಬ್ಬನೂ ಅವನ ಜತೆ ಸೇರಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಬಲವಂತವಾಗಿ ನನ್ನ ಗಡ್ಡ  ಬೋಳಿಸಿದರು. ಗಡ್ಡ ಬೋಳಿಸಲು ಕ್ಷೌರಿಕ ಮೊದಲಿಗೆ ನಿರಾಕರಿಸಿದ್ದ. ಆದರೆ ಇವರ ಬೆದರಿಕೆ ಭಯದಿಂದ ಗಡ್ಡ ಬೋಳಿಸಿದ ಎಂದು ಜಾಫರುದ್ದೀನ್ ಹೇಳಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಜಾಫರುದ್ದೀನ್‍ನ ಗಡ್ಡ ಬೋಳಿಸಿದ ಪ್ರಕರಣದಲ್ಲಿ ಗೌರವ್ ಅಲಿಯಾಸ್ ತೇಧಾ, ನಿತಿನ್ ಕುಮಾರ್ ಮತ್ತು ಕ್ಷೌರಿಕ ಇಕ್ಲಾಶ್ ಎಂಬವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಮಾಡಿದ ನಂತರ ಇವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !