ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಚುನಾವಣೆ: ಪೈಲಟ್‌, ಗೆಹ್ಲೋಟ್‌: ನಿಲ್ಲದ ಗುದ್ದಾಟ

Last Updated 15 ನವೆಂಬರ್ 2018, 18:41 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಪಕ್ಷದ ಒಳಜಗಳವನ್ನು ಸದ್ಯಕ್ಕೆ ತಣಿಸಲು ಹೈಕಮಾಂಡ್‌ ಯತ್ನಿಸಿದೆ. ಆದರೆ, ಈ ಇಬ್ಬರು ಮುಖಂಡರ ನಡುವಣ ಮುಸುಕಿನ ಗುದ್ದಾಟ ನಿಲ್ಲಿಸಲು ಇದರಿಂದ ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳುತ್ತಿವೆ.

ರಾಜಸ್ಥಾನ ವಿಧಾನಸಭೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗಲು ಇವರಿಬ್ಬರ ನಡುವಣ ಕಿತ್ತಾಟವೇ ಕಾರಣ. ತಮ್ಮ ಬೆಂಬಲಿಗರಲ್ಲಿ ಹೆಚ್ಚಿನವರಿಗೆ ಟಿಕೆಟ್‌ ದೊರೆಯಬೇಕು ಎಂದು ಇಬ್ಬರೂ ಹಟ ಹಿಡಿದಿರುವುದರಿಂದ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ.

ಮುಖ್ಯಮಂತ್ರಿ ಯಾರು ಎಂಬುದನ್ನು ಆಯ್ಕೆಯಾದ ಶಾಸಕರು ಮತ್ತು ಕೇಂದ್ರದ ನಾಯಕರು ನಿರ್ಧರಿಸಲಿದ್ದಾರೆ ಎಂದು ಪೈಲಟ್‌ ಮತ್ತು ಗೆಹ್ಲೋಟ್‌ ಹೇಳಿದ್ದಾರೆ. ಹಾಗಾಗಿ, ತಮ್ಮ ಪರವಾಗಿ ಹೆಚ್ಚು ಶಾಸಕರು ಇರುವಂತೆ ನೋಡಿಕೊಳ್ಳಲು ಇಬ್ಬರೂ ಕಾರ್ಯತಂತ್ರ ರೂಪಿಸುತ್ತಿದ್ದಾರೆ.ಖಚಿತವಾಗಿ ಗೆಲುವು ಸಾಧ್ಯವಿರುವ 20–30 ಕ್ಷೇತ್ರಗಳಿಗಾದರೂ ತಮ್ಮ ಬೆಂಬಲಿಗರಿಗೆ ಟಿಕೆಟ್‌ ದೊರೆಯಬೇಕು ಎಂಬುದು ಈ ಮುಖಂಡರ ಲೆಕ್ಕಾಚಾರ.

ಪೈಲಟ್‌, ಗೆಹ್ಲೋಟ್‌ ಮತ್ತು ವಿರೋಧ ಪಕ್ಷದ ನಾಯಕ ರಾಮೇಶ್ವರ್‌ ಡುಡಿ ಅವರ ನಡುವೆ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಕನಿಷ್ಠ ಮೂರು ಬಾರಿ ವಾಕ್ಸಮರವೂ ನಡೆದಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಈ ಇಬ್ಬರು ಮುಖಂಡರನ್ನು ನಿಭಾಯಿಸುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿದೆ. ಲೋಕಸಭಾ ಚುನಾವಣೆಗೆ ಆರು ತಿಂಗಳೂ ಇಲ್ಲ. ಇಂತಹ ಸಂದರ್ಭದಲ್ಲಿ ಗೆಹ್ಲೋಟ್‌ ಅವರಿಗೆ ಅಸಮಾಧಾನ ಉಂಟು ಮಾಡಲು ಹೈಕಮಾಂಡ್‌ಗೆ ಮನಸ್ಸಿಲ್ಲ. ಅಷ್ಟಲ್ಲದೆ, ಗುಜರಾತ್‌ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಗೆಹ್ಲೋಟ್‌ ಅವರ ಕಾರ್ಯತಂತ್ರ ಕಾಂಗ್ರೆಸ್‌ಗೆ ಸಾಕಷ್ಟು ನೆರವಾಗಿದೆ. ಹಾಗೆಯೇ, ಪೈಲಟ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಆಪ್ತ. ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಅವರು ತೋರಿದ್ದಾರೆ. ಐದು ವರ್ಷಗಳಿಂದ ರಾಜಸ್ಥಾನ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಪರಿಣಾಮಕಾರಿಯಾಗಿ ಪುನಶ್ಚೇತನಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT