ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ವರ್ಷವೇ ಪಿಯುಸಿ ಆರಂಭ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗೆ ಇರುವ ಆಯ್ದ 500 ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಪಿಯು ತರಗತಿಗಳನ್ನು ಈ ವರ್ಷದಿಂದಲೇ (2018–19) ಪ್ರಾರಂಭಿಸುವಂತೆ ಸರ್ಕಾರ ಆದೇಶಿಸಿದೆ.

ತರಗತಿಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿ, ಇದೇ 20ರಂದು ಸರ್ಕಾರ ಆದೇಶ ಹೊರಡಿಸಿದೆ.

ಅದೇ ರೀತಿ 1ರಿಂದ 8ನೇ ತರಗತಿವರೆಗೆ ನಡೆಯುತ್ತಿರುವ 500 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 9ನೇ ತರಗತಿ ಪ್ರಾರಂಭಿಸಿ ಪ್ರೌಢಶಾಲೆ ತೆರೆಯಲು ಸಮ್ಮತಿಸಿದೆ.

1ರಿಂದ 7ನೇ ತರಗತಿವರೆಗೆ ನಡೆಯುತ್ತಿರುವ 500 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್‌ಸಿಟಿಇ) ನಿಯಮಾವಳಿಗಳ ಪ್ರಕಾರ 8ನೇ ತರಗತಿ ಪ್ರಾರಂಭಿಸಲು ಸರ್ಕಾರ ಒಪ್ಪಿಗೆ ನೀಡಿದೆ.

ಅವುಗಳ ಜತೆಗೆ 1ರಿಂದ 5ನೇ ತರಗತಿವರೆಗೆ ನಡೆಯುತ್ತಿರುವ 1,000 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ನೇ ತರಗತಿ ಪ್ರಾರಂಭಿಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ನಡೆಸಲು ಮಂಜೂರಾತಿ ನೀಡಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಹಾಲಿ ಇರುವಂತಹ ಮೂಲ ಸೌಕರ್ಯ, ಶಿಕ್ಷಕರು ಮತ್ತು ಉಪನ್ಯಾಸಕರ ಸೇವೆಯನ್ನು ಬಳಸಿಕೊಂಡು, ಯಾವುದೇ ಆರ್ಥಿಕ ಹೊರೆ ಉಂಟಾಗದಂತೆ 2018–19ನೇ ಶೈಕ್ಷಣಿಕ ಸಾಲಿನಿಂದ ಉನ್ನತೀಕರಿಸಿದ ಶಾಲೆ/ ಕಾಲೇಜುಗಳನ್ನು ತೆರೆಯುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸಿಬ್ಬಂದಿ ಸದ್ಬಳಕೆ: ಪಿಯು ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಇರುವ ಉಪನ್ಯಾಸಕರನ್ನು 500 ಸರ್ಕಾರಿ ಪ್ರೌಢಶಾಲೆಗಳಲ್ಲಿನ ಪಿಯು ತರಗತಿಗಳಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಜತೆಗೆ ಪಿಯು ಇಲಾಖೆ 1,204 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲಿಯೇ ಈ ಉಪನ್ಯಾಸಕರು ಲಭ್ಯವಾಗಲಿದ್ದಾರೆ.

ರಾಜ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1,52,630 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಈ ಶಾಲೆಗಳಿಗೆ 1,03,000 ಶಿಕ್ಷಕರು ಸಾಕು. ಈ ಹೆಚ್ಚುವರಿ ಶಿಕ್ಷಕರ ಪೈಕಿ ಪದವಿ ಪಡೆದಿರುವ ಶಿಕ್ಷಕರನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಅವಕಾಶ ಇದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪಿಯು ಮೌಲ್ಯಮಾಪನ ಇಂದಿನಿಂದ
ದ್ವಿತೀಯ ಪಿಯು ಮೌಲ್ಯಮಾಪನ ಸೋಮವಾರದಿಂದ(ಮಾ.26) ಆರಂಭವಾಗಲಿದ್ದು, 23,800 ಬೋಧಕರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಕಳೆದ ವರ್ಷ 19 ಸಾವಿರ ಮೌಲ್ಯಮಾ‍ಪಕರನ್ನು ನಿಯೋಜಿಸಲಾಗಿತ್ತು. ಏಪ್ರಿಲ್‌ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಉದ್ದೇಶದಿಂದ ಈ ಬಾರಿ ಹೆಚ್ಚಿನ ಸಂಖ್ಯೆಯ ಮೌಲ್ಯಮಾಪಕರನ್ನು ನಿಯೋಜಿಸಲಾಗಿದೆ.

ಮಾರ್ಚ್‌ 1ರಿಂದ 17ರವರೆಗೆ ರಾಜ್ಯದಾದ್ಯಂತ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಈ ಬಾರಿ 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT