ಸೋಮವಾರ, ಅಕ್ಟೋಬರ್ 21, 2019
22 °C
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ‘ರಾಷ್ಟ್ರೀಯ ಹಿತಾಸಕ್ತಿ’ಯನ್ನು ಮುನ್ನೆಲೆಗೆ ತಂದ ಅಮಿತ್‌ ಶಾ

‘ಒಬ್ಬ ಹುತಾತ್ಮನಾದರೆ 10 ಶತ್ರುಗಳ ಹತ್ಯೆ’

Published:
Updated:
Prajavani

ಮುಂಬೈ: ‘ನಮ್ಮ ಒಬ್ಬ ಯೋಧ ಹುತಾತ್ಮನಾದರೆ ಶತ್ರು ಪಾಳಯದ ಹತ್ತು ಮಂದಿಯನ್ನು ಕೊಲ್ಲುತ್ತೇವೆ ಎಂಬುದನ್ನು ಇಡೀ ಜಗತ್ತೇ ಅರ್ಥ ಮಾಡಿಕೊಂಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಭಾರತದ ಮೇಲೆ ಯಾರೇ ದಾಳಿ ನಡೆಸಿದರೂ ಅವರು ಅದರ ಹತ್ತು ಪಟ್ಟು ಸಾವು ನೋವು ಎದುರಿಸಬೇಕಾಗುತ್ತದೆ ಎಂದು ಶಾ ಎಚ್ಚರಿಕೆ ನೀಡಿದ್ದಾರೆ. 

ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ ಮತ್ತು ಉಸ್ಮಾನಾಬಾದ್‌ ಜಿಲ್ಲೆಗಳಲ್ಲಿ ಗುರುವಾರ ನಡೆಸಿದ ಸಮಾವೇಶಗಳಲ್ಲಿ ಶಾ ಈ ಎಚ್ಚರಿಕೆ ಕೊಟ್ಟಿದ್ದಾರೆ. 

‘ರಾಷ್ಟ್ರೀಯ ಹಿತಾಸಕ್ತಿ’ಯ ವಿಚಾರಗಳಲ್ಲಿ ಬೆಂಬಲ ನೀಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧವೂ ಅವರು ಹರಿಹಾಯ್ದರು.

‘ನಾವು ಮತಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ. ನಮಗೆ ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳೇ ಮುಖ್ಯ’ ಎಂದು ಶಾ ಹೇಳಿದರು.

ಉರಿ ಮತ್ತು ಪಠಾಣ್‌ಕೋಟ್‌ ಮೇಲೆ ಉಗ್ರರ ದಾಳಿಯ ಬಳಿಕ ನಡೆಸಿದ ನಿರ್ದಿಷ್ಟ ದಾಳಿ ಮತ್ತು ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯ ಬಳಿಕ ಬಾಲಾಕೋಟ್‌ ಮೇಲಿನ ವಾಯು ದಾಳಿಯನ್ನು ಅವರು ಉಲ್ಲೇಖಿಸಿದರು.  

ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹಲವು ಪಟ್ಟು ಹೆಚ್ಚಿದೆ. ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ನರೇಂದ್ರ ಮೋದಿ ಎಂಬುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. 

‘ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯು ರಕ್ತಪಾತಕ್ಕೆ ಕಾರಣವಾಗಬಹುದು ಎಂದು ರಾಹುಲ್‌ ಗಾಂಧಿ ಎಚ್ಚರಿಸಿದ್ದರು.  ಭಾರತೀಯ ಪಡೆಗಳು ನಿರ್ದಿಷ್ಟ ದಾಳಿ ಮತ್ತು ವಾಯುದಾಳಿ ನಡೆಸಿದಾಗ ಪಾಕಿಸ್ತಾನವು ಪುರಾವೆ ಕೇಳಿತ್ತು. ರಾಹುಲ್‌ ಕೂಡ ಪುರಾವೆ ಕೇಳಿದ್ದರು. ಇವರು ಪ್ರತಿ ಬಾರಿಯೂ ಒಂದೇ ದಾಟಿಯಲ್ಲಿ ಯಾಕೆ ಮಾತನಾಡುತ್ತಿದ್ದಾರೆ ಎಂಬುದು ಅರ್ಥವಾಗುವುದಿಲ್ಲ’ ಎಂದು ಶಾ ಹೇಳಿದರು. 

ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದ ನಿರ್ಧಾರವನ್ನು ರಾಹುಲ್‌ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಯಾಕೆ ವಿರೋಧಿಸುತ್ತಿದ್ದಾರೆ ಎಂದು ಹೇಳಬೇಕು ಎಂದು ಶಾ ಆಗ್ರಹಿಸಿದರು. 

ಸಣ್ಣ ಪಕ್ಷಗಳಲ್ಲಿ 'ದೊಡ್ಡ'ವರ ಮೇಲೆ ಮುನಿಸು

ಮಹಾರಾಷ್ಟ್ರದ ಬಿಜೆಪಿ–ಶಿವಸೇನಾ ಮತ್ತು ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟಗಳಲ್ಲಿ ಇರುವ ಸಣ್ಣ ಪಕ್ಷಗಳಲ್ಲಿ ಅತೃಪ್ತಿ ಹೆಚ್ಚುತ್ತಿರುವಂತೆ ಕಾಣಿಸುತ್ತಿದೆ. ದೊಡ್ಡ ಪಕ್ಷಗಳು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಈ ಸಣ್ಣ ಪಕ್ಷಗಳಲ್ಲಿ ಅಸಮಾಧಾನ ಜೋರಾಗಿದೆ.

ಕಾಂಗ್ರೆಸ್‌ ಪಕ್ಷವು ನಾಯಕತ್ವ ಬಿಕ್ಕಟ್ಟಿನಿಂದ ಬಳಲುತ್ತಿದೆ. ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ಪಕ್ಷಾಂತರವು ದೊಡ್ಡ ಏಟನ್ನೇ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಪಕ್ಷಗಳು ಈ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುತ್ತಿವೆ. 

ಕಾಂಗ್ರೆಸ್‌–ಎನ್‌ಸಿಪಿ ನೇತೃತ್ವದ ‘ಮಹಾಅಘಾಡಿ’ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ಸಮಾಜವಾದಿ ಪಕ್ಷ, ರೈತರು ಮತ್ತು ಕಾರ್ಮಿಕರ ಪಕ್ಷ, ಪೀಪಲ್ಸ್‌ ರಿಪಬ್ಲಿಕನ್‌ ಪಾರ್ಟಿ, ಸಿಪಿಎಂ, ಸಿಪಿಐ, ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೇತ್ಕರಿ ಸಂಘಟನೆ ಮೈತ್ರಿಕೂಟದಲ್ಲಿರುವ ಪಕ್ಷಗಳು ಎಂದು ಹೇಳಲಾಗಿದೆ. 

ಆದರೆ, ‘ನಾವು ಕಾಂಗ್ರೆಸ್‌ನಿಂದ ದೂರ ಇದ್ದೇವೆ’ ಎಂದು ಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಅಬು ಆಸಿಮ್‌ ಅಜ್ಮಿ ಹೇಳಿದ್ದಾರೆ. 50 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಎಸ್‌ಪಿ ಬೇಡಿಕೆ ಇರಿಸಿತ್ತು. ಅಜ್ಮಿ ಅವರು ಸ್ಪರ್ಧಿಸಿರುವ ಮನ್‌ಕುರ್ದ್‌ ಶಿವಾಜಿನಗರ ಸೇರಿ ಮೂರು ಕ್ಷೇತ್ರಗಳನ್ನು ಮಾತ್ರ ಎಸ್‌ಪಿಗೆ ಬಿಟ್ಟುಕೊಡಲಾಗಿದೆ. ಭಿವಂಡಿ ಪೂರ್ವ ಮತ್ತು ಔರಂಗಾಬಾದ್‌ ಇನ್ನೆರಡು ಕ್ಷೇತ್ರಗಳು. ವಿಚಿತ್ರವೆಂದರೆ ಭಿವಂಡಿ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕಣದಲ್ಲಿದ್ದಾರೆ. ಔರಂಗಾಬಾದ್‌ ಸ್ಥಳೀಯ ಘಟಕ ಎಸ್‌ಪಿಗೆ ಬೆಂಬಲ ನೀಡದಿರಲು ನಿರ್ಧರಿಸಿದೆ. 

ಸಿಪಿಎಂ ಜತೆಗೆ ಹೊಂದಾಣಿಕೆಗೆ ಕಾಂಗ್ರೆಸ್‌ ಪ್ರಯತ್ನಿಸಿದೆ. ಆದರೆ, ಹಿರಿಯ ಮುಖಂಡ ಸುಶೀಲ್‌ ಕುಮಾರ್‌ ಶಿಂಧೆ ಅವರ ಮಗಳು ಪ್ರಣತಿ ಪುನರಾಯ್ಕೆ ಬಯಸಿರುವ  ಸೋಲಾಪುರ ದಕ್ಷಿಣ–ಕೇಂದ್ರ ಕ್ಷೇತ್ರದಲ್ಲಿ ನರಸಯ್ಯ ಆಡಂ ಅವರನ್ನು ಸಿಪಿಎಂ ಕಣಕ್ಕಿಳಿಸಿದೆ. ರಾಜು ಶೆಟ್ಟಿ ಅವರ ಪಕ್ಷದ ಅಭ್ಯರ್ಥಿಗೆ ಖಾಮ್‌ಗಾಂವ್‌ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ಆದರೆ, ಶೆಟ್ಟಿ ಅವರಿಂದ ಇದಕ್ಕೆ ಅನುಮತಿಯನ್ನೇ ಪಡೆದಿಲ್ಲ. ಬಿಜೆಪಿ–ಶಿವಸೇನಾ ನೇತೃತ್ವದ ‘ಮಹಾ
ಯುತಿ’ಯಲ್ಲಿರುವ ರಾಮದಾಸ್‌ ಆಠವಲೆ ನೇತೃತ್ವದ ಆರ್‌ಪಿಐ, ವಿನಾಯಕ ಮೆಟೆ ನೇತೃತ್ವದ ಶಿವ ಸಂಗ್ರಾಮ, ಮಹಾದೇವ ಜಣ್ಕರ್‌ ನೇತೃತ್ವದ ರಾಷ್ಟ್ರೀಯ ಸಮಾಜ ಪಕ್ಷ ಮತ್ತು ಸದಭಾವು ಖೋಟ್‌ ನೇತೃತ್ವದ ರೈತಕ್ರಾಂತಿ ಸಂಘಟನೆಗಳೂ ಅತೃಪ್ತವಾಗಿವೆ. 

ಆರ್‌ಪಿಐ ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸುವಂತೆ ಒತ್ತಡ ಹೇರಲಾಗಿದೆ. ಜೈಲಿನಲ್ಲಿರುವ ಪಾತಕಿ ಛೋಟಾ ರಾಜನ್‌ ತಮ್ಮ ದೀಪಕ್‌ ನಿಕಲ್ಜೆಗೆ ಪಲ್ಟನ್‌ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಆಠವಲೆ ಆಗ್ರಹಿಸಿದ್ದರು. ಅದನ್ನು ತಿರಸ್ಕರಿಸಲಾಗಿದೆ. 

‘ಬಿಜೆಪಿ ತಮ್ಮನ್ನು ವಂಚಿಸಿದೆ’ ಎಂದು ಜಣ್ಕರ್‌ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ತಮ್ಮ ಪಕ್ಷದ ರಾಹುಲ್‌ ಕುಲ್‌ (ದೌಂಡ್‌) ಮತ್ತು ಮೇಘನಾ ಬೋರ್ಡಿಕರ್‌ (ಜಿಂತೂರ್‌) ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದು ಜಣ್ಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಪಿ ಚಿಹ್ನೆ ಅಡಿ ಸ್ಪರ್ಧಿಸುತ್ತಿರುವವರು ಗಂಗಾಖೇಡ್‌ನ ರತ್ನಾಕರ ಗುತ್ತೆ ಮಾತ್ರ. 

26 ಕಾರ್ಪೊರೇಟರ್‌ಗಳಿಂದ ಶಿವಸೇನಾಗೆ ರಾಜೀನಾಮೆ

ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದ ಕಲ್ಯಾಣ್‌ ಪೂರ್ವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟದ್ದನ್ನು ಖಂಡಿಸಿ ಶಿವಸೇನಾದ 26 ಕಾರ್ಪೊರೇಟರ್‌ಗಳು ಮತ್ತು ಸುಮಾರು 300 ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಶಿವಸೇನಾದ ಧನಂಜಯ ಬೊಡಾರೆ ಅವರಿಗೆ ಈ ಕ್ಷೇತ್ರದ ಟಿಕೆಟ್‌ ನೀಡಬೇಕಿತ್ತು ಎಂಬುದು ಇವರ ಆಗ್ರಹವಾಗಿದೆ.

‘ಶಿವಸೇನಾ ಮತ್ತು ಬಿಜೆಪಿಯ ನಡುವೆ ಮೈತ್ರಿ ಈಗಾಗಲೇ ಅಂತಿಮವಾಗಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಸೇನಾದ ನಾಯಕರು ಕರೆ ಕೊಟ್ಟಿದ್ದಾರೆ. ಆದರೆ, ಕಲ್ಯಾಣ್‌ ಪೂರ್ವ ಕ್ಷೇತ್ರದ ಅಭ್ಯರ್ಥಿಗೆ ಬೆಂಬಲ ನೀಡಲು ಸಾಧ್ಯವಿಲ್ಲ. ಇದರಿಂದ ನಮ್ಮ ನಾಯಕರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇವೆ’ ಎಂದು ರಾಜೀನಾಮೆ ನೀಡಿರುವವರಲ್ಲಿ ಒಬ್ಬರಾದ ಶರದ್‌ ಪಾಟೀಲ್‌ ಹೇಳಿದ್ದಾರೆ. 

ಪ್ರಬಲ ವಿರೋಧ ಪಕ್ಷವಾಗಲು ಶಕ್ತಿ ಕೊಡಿ

ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಮತದಾರರಿಗೆ ವಿಚಿತ್ರವಾದ ಮನವಿ ಮಾಡಿದ್ದಾರೆ. ತಮ್ಮನ್ನು ಅಧಿಕಾರಕ್ಕೆ ತನ್ನಿ ಎಂದು ಅವರು ಕೋರಿಲ್ಲ. ಬದಲಿಗೆ, ಪ್ರಬಲ ವಿರೋಧಪಕ್ಷ ಆಗುವಷ್ಟು ಶಕ್ತಿಯನ್ನು ಕೊಡಿ ಎಂದು ಕೇಳಿದ್ದಾರೆ.

‘ಮಹಾರಾಷ್ಟ್ರ ಮತ್ತು ಭಾರತಕ್ಕೆ ಈಗ ಬೇಕಿರುವುದು ಪ್ರಬಲವಾದ ವಿರೋಧ ಪಕ್ಷ’ ಎಂದು ಮುಂಬೈನ ಸಾಂತಾಕ್ರೂಜ್‌ನಲ್ಲಿ ತಮ್ಮ ಮೊದಲ ಚುನಾವಣಾ ಭಾಷಣದಲ್ಲಿ ರಾಜ್‌ ಹೇಳಿದ್ದಾರೆ. ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಎನ್‌ಎಸ್‌ ಸ್ಪರ್ಧಿಸುತ್ತಿದೆ.

‘ನಾನು ನಿಮ್ಮಲ್ಲಿ ವಿಶೇಷವಾದದ್ದನ್ನು ಬೇಡಲು ಬಂದಿದ್ದೇನೆ. ಇಂತಹ ಮನವಿಯನ್ನು ಈವರೆಗೆ ಯಾರಾದರೂ ಮಾಡಿರಬಹುದು ಎಂದು ನಾನು ಭಾವಿಸುವುದಿಲ್ಲ. ನಿಮಗೆ ಸಂಬಂಧಿಸಿದ ವಿಚಾರಗಳನ್ನು ಎತ್ತಲು ಪ್ರಬಲ ವಿರೋಧ ಪಕ್ಷದ ಸ್ಥಾನವನ್ನು ನನಗೆ ನೀಡಿ’ ಎಂದು ಅವರು ಕೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)