ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಚುನಾವಣೆ: ಕೆಸಿಆರ್‌ಗೆ ‘ಅಯೋಧ್ಯೆ’ ಸಂಕಷ್ಟ

Last Updated 3 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಭದ್ರಾಚಲಂ: ರಾಷ್ಟ್ರ ರಾಜಕಾರಣದಲ್ಲಿ ಅಯೋಧ್ಯೆ ರಾಮ ಮಂದಿರ ವಿವಾದ ಮತ್ತೆ ಸದ್ದು ಮಾಡುತ್ತಿರುವಾಗಲೇ ತೆಲಂಗಾಣ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪ್ರಸ್ತಾಪವಾಗುತ್ತಿರುವ ‘ದಕ್ಷಿಣ ಅಯೋಧ್ಯೆ’ ವಿಷಯ ಟಿಆರ್‌ಎಸ್‌ ನಿದ್ದೆಗೆಡಿಸಿದೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ನೇತೃತ್ವದ ಟಿಆರ್‌ಎಸ್‌ ಸರ್ಕಾರ ಭದ್ರಾಚಲಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪರ್ಣಸಾಲದ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪರ್ಣಸಾಲದ ಈ ದೇವಸ್ಥಾನವನ್ನು ರಾಮ ಭಕ್ತರು ‘ದಕ್ಷಿಣದ ಅಯೋಧ್ಯೆ’ ಎಂದು ಪರಿಗಣಿಸುತ್ತಾರೆ. 14 ವರ್ಷದ ವನವಾಸದ ವೇಳೆ ಶ್ರೀರಾಮ ಪರ್ಣಸಾಲದಲ್ಲಿ ನೆಲೆ ನಿಂತಿದ್ದ. ಇಲ್ಲಿಂದಲೇ ರಾವಣ, ಸೀತೆಯನ್ನು ಅಪಹರಿಸಿದ್ದ ಎನ್ನುವುದು ಸ್ಥಳದ ಐತಿಹ್ಯ.

ಅವಿಭಜಿತ ಆಂಧ್ರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರವಾದ ಪರ್ಣಸಾಲ ಪಟ್ಟಣದಲ್ಲಿ ಕಸ ವಿಲೇವಾರಿಗೆ ಸರಿಯಾದ ಸ್ಥಳ ಇಲ್ಲ. ಗೋದಾವರಿ ನದಿ ದಡದಲ್ಲಿ ಕಸ ಹಾಕಲಾಗುತ್ತದೆ. ಪಟ್ಟಣದ ಅಭಿವೃದ್ಧಿಗೆ ಮಂಜೂರಾಗಿದ್ದ ₹100 ಕೋಟಿ ಅನುದಾನವನ್ನು ತೆಲಂಗಾಣ ಸರ್ಕಾರ ಬಿಡುಗಡೆ ಮಾಡಲಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಸಿಆರ್‌ ಎರಡು ವರ್ಷಗಳಿಂದ ರಾಮ ನವಮಿ ಉತ್ಸವಕ್ಕೆ ಹಾಜರಾಗಿಲ್ಲ. ಸಾಮಾನ್ಯವಾಗಿ ಮುಖ್ಯಮಂತ್ರಿ ಈ ಉತ್ಸವಕ್ಕೆ ಹಾಜರಾಗುವುದು ಸಂಪ್ರದಾಯ. ತಮ್ಮ ಮೊಮ್ಮಗನನ್ನು ಉತ್ಸವಕ್ಕೆ ಕಳಿಸುವ ಮೂಲಕ ಕೆಸಿಆರ್‌ಆ ಸಂಪ್ರದಾಯ ಮುರಿದಿದ್ದಾರೆ. ಇದರಿಂದ ಭಕ್ತರ ಭಾವನೆಗಳಿಗೆ ಘಾಸಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಟಿಆರ್‌ಎಸ್‌ ನಾಯಕರ ಸುಳಿವಿಲ್ಲ:ಪರ್ಣಸಾಲ ಮತ್ತು ದೇವಸ್ಥಾನದ ಅಭಿವೃದ್ಧಿ ಕಡೆಗಣಿಸಿದ ಕಾರಣ ಕೆಸಿಆರ್‌ ಮತ್ತು ಟಿಆರ್‌ಎಸ್‌ ಮುಖಂಡರು ಚುನಾವಣಾ ಪ್ರಚಾರಕ್ಕೆ ಭದ್ರಾಚಲಂ ವಿಧಾನಸಭಾ ಕ್ಷೇತ್ರದತ್ತ ಸುಳಿಯುತ್ತಿಲ್ಲ. ಮೀಸಲು ಕ್ಷೇತ್ರವಾಗಿರುವ ಭದ್ರಾಚಲಂನಲ್ಲಿ ಆದಿವಾಸಿ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರೇ ಹೆಚ್ಚು.

‘ರಾಜ್ಯ ವಿಭಜನೆ ನಂತರ ತೆಲಂಗಾಣ ಪಾಲಿಗೆ ಹೆಚ್ಚಿನ ಭೂಮಿ ಉಳಿದಿಲ್ಲ. ದೇವಸ್ಥಾನದ ಅಪಾರ ಆಸ್ತಿ ಮತ್ತು ಭೂಮಿ ಆಂಧ್ರ ಪ್ರದೇಶದ ವ್ಯಾಪ್ತಿಗೆ ಸೇರಿದೆ. ಅದನ್ನು ತೆಲಂಗಾಣಕ್ಕೆ ಮರಳಿ ತರುವ ಟಿಆರ್‌ಎಸ್‌ ಭರವಸೆ ಈಡೇರಿಲ್ಲ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪೊಡೆಂ ವೀರಯ್ಯ ಆರೋಪಿಸುತ್ತಾರೆ.

ಜಾಗದ ಕೊರತೆಯಿಂದಾಗಿ ಕ್ಷೇತ್ರಕ್ಕೆ ಮಂಜೂರಾಗಿದ್ದ ಅನೇಕ ಅಭಿವೃದ್ಧಿ ಯೋಜನೆಗಳು ಅನ್ಯ ಕ್ಷೇತ್ರದ ಪಾಲಾಗಿವೆ ಎನ್ನುತ್ತಾರೆ ಟಿಡಿಪಿ ಹಿರಿಯ ಮುಖಂಡ ಕೋಮಾರಾಮ ಫಣೀಶ್ವರಿ.

ಚಿನ್ನ ಜೀಯರ್‌ ಮಠ ಅಡ್ಡಿ!

ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಸಂತ ಚಿನ್ನ ಜೀಯರ್‌ ಮಠವನ್ನು ನೆಲಸಮ ಮಾಡಲು ಕೆ. ಚಂದ್ರಶೇಖರ್‌ ರಾವ್‌ ಹಿಂಜರಿಯುತ್ತಿರುವುದೇ ದೇಗುಲದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯ ನನೆಗುದಿಗೆ ಬೀಳಲು ಕಾರಣ ಎನ್ನುವುದು ಸ್ಥಳೀಯರ ವಿಶ್ಲೇಷಣೆ.

ಕೆಸಿಆರ್‌ ಅವರು ವೈಷ್ಣವ ಸಂಪ್ರದಾಯದ ಪರಂಪರೆಯ ಸಂತರಾಗಿರುವ ಚಿನ್ನ ಜೀಯರ್‌ ಕಟ್ಟಾ ಅನುಯಾಯಿಯಾಗಿದ್ದಾರೆ.

ಒಂದು ವೇಳೆ ರಾಮನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಂಡರೆ ಚಿನ್ನ ಜೀಯರ್‌ ಮಠವನ್ನು ನೆಲಸಮ ಮಾಡಿ, ಮರು ನಿರ್ಮಾಣ ಮಾಡಬೇಕಾಗುತ್ತದೆ. ಅದು ಕೆಸಿಆರ್‌ ಅವರಿಗೆ ಇಷ್ಟವಿಲ್ಲ.

ಜೀಯರ್‌ ಮಠದ ಮೂಲ ಸ್ವರೂಪ ಉಳಿಸಿಕೊಳ್ಳಬೇಕು ಎನ್ನುವುದು ಕೆಸಿಆರ್‌ ಆಶಯ. ಹೀಗಾಗಿ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಸ್ಥಳೀಯರು.

***

ವಾಕ್ಚಾತುರ್ಯ

‘ಬಿಜೆಪಿ ದೇಶ ಭಕ್ತರ ಗುಂಪು’

ಕಾಂಗ್ರೆಸ್‌ಗೆ ನಾಯಕ, ನೀತಿ, ಸಿದ್ಧಾಂತ ಏನೂ ಇಲ್ಲ. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೇಶಭಕ್ತರ ಗುಂಪು. ದೇಶದ
ಶೇ 70ರಷ್ಟು ‍ಪ್ರದೇಶದಲ್ಲಿ ಬಿಜೆಪಿಯ ಕೇಸರಿ ಧ್ವಜ ಹೆಮ್ಮೆಯಿಂದ ಹಾರಾಡುತ್ತಿದೆ. ರಾಜಸ್ಥಾನದಲ್ಲಿ ಬಿಜೆಪಿ ಎಂದರೆ ಲಂಕೆಯಲ್ಲಿ ಅಂಗದ ಪಾದ ಊರಿದಂತೆ. ಈ ಪಾದವನ್ನು ಅಲುಗಾಡಿಸುವುದು ಯಾರಿಂದಲೂ ಆಗದ ಕೆಲಸ.

–ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ (ರಾಜಸ್ಥಾನದಲ್ಲಿ ಪ್ರಚಾರ ಭಾಷಣ)

‘ಬಿಜೆಪಿ ಉತ್ತಮ ವಿರೋಧ ಪಕ್ಷ’

ಬಿಜೆಪಿಗೆ ವಿರೋಧ ಪಕ್ಷದ ಸ್ಥಾನವೇ ಅತ್ಯುತ್ತಮ. ಬಹಳ ಬಲವಾದ ಪಕ್ಷವಾದ ಕಾರಣ ವಿರೋಧ ಪಕ್ಷದಲ್ಲಿರಲು ಬಿಜೆಪಿಗೆ ಮನಸ್ಸಿಲ್ಲ. ಆದರೆ, ಬಿಜೆಪಿಯನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಲು ಜನರು ಬಯಸಿದ್ದಾರೆ. ರಾಜಸ್ಥಾನದ ಹಳ್ಳಿಗಳಲ್ಲಿ ನಾನು ಸಭೆಗಳನ್ನು ಮಾಡಿದ್ದೇನೆ. ‘ಬದಲಾವಣೆ ಬೇಕಾಗಿದೆ’ ಎಂಬುದು ಜನರು ನನಗೆ ಕೊಟ್ಟ ಪ್ರತಿಕ್ರಿಯೆ. ಬಿಜೆಪಿ ಜನರನ್ನು ವಂಚಿಸಿದೆ. ಉದ್ಯೋಗದ ಹೆಸರಿನಲ್ಲಿ ಯುವ ಜನರಿಗೆ ಮೋಸ ಮಾಡಿದೆ.

–ಹಾರ್ದಿಕ್‌ ಪಟೇಲ್‌, ಗುಜರಾತಿನ ಪಾಟೀದಾರ್‌ ಮೀಸಲು ಹೋರಾಟದ ನಾಯಕ

ಒವೈಸಿಯನ್ನು ಯಾರೂ ಓಡಿಸಲಾಗದು

ಉತ್ತರ ಪ್ರದೇಶದ ಮುಖ್ಯಮಂತ್ರಿಯವರೇ ಕೇಳಿ, ಸಂಸದನೊಬ್ಬನನ್ನು ಓಡಿಸುವ ಮಾತನ್ನು ನೀವು ಆಡುತ್ತಿದ್ದೀರಿ. ಇದು ನನ್ನ ತಂದೆಯ ನಾಡು. ಇಲ್ಲಿಂದ ಯಾರೂ ನನ್ನನ್ನು ಓಡಿಸಲಾಗದು. ಹಿಂದುಸ್ಥಾನದ ವ್ಯಕ್ತಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಆದರೆ, ಒವೈಸಿಯನ್ನು ಓಡಿಸುವ ಮಾತನ್ನು ನೀವು ಆಡುತ್ತಿದ್ದೀರಿ. ನೀವು ಇಲ್ಲಿ ಬಂದು ದ್ವೇಷದ, ಗೋಡೆ ಕಟ್ಟುವ ಮಾತು ಆಡುತ್ತಿದ್ದೀರಿ.

–ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಮುಖ್ಯಸ್ಥ (ಬಿಜೆಪಿ ಗೆದ್ದರೆ ಒವೈಸಿ ಓಡಬೇಕಾಗುತ್ತದೆ ಎಂದು ಯೋಗಿ ಆದಿತ್ಯನಾಥ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT