ಸೋಮವಾರ, ಅಕ್ಟೋಬರ್ 21, 2019
22 °C
ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆ; ರಾಷ್ಟ್ರೀಯ ವಿಷಯಗಳೇ ಬಿಜೆಪಿ ಚುನಾವಣಾ ಅಸ್ತ್ರ

ರಾಷ್ಟ್ರೀಯತೆಗೆ ಬಿಜೆಪಿ, ಸಾಂಪ್ರದಾಯಿಕ ಮತಕ್ಕೆ ಕಾಂಗ್ರೆಸ್‌ ಮೊರೆ

Published:
Updated:
Prajavani

ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ವಿಷಯಗಳನ್ನು ಮುಂದಿಟ್ಟುಕೊಂಡು ದಸರಾ ಹಬ್ಬದ ಬಳಿಕ ಪ್ರಚಾರ ಕಣಕ್ಕೆ ಇಳಿಯಲು ಬಿಜೆಪಿ ನಿರ್ಧರಿಸಿದೆ. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿ, ಕೇಂದ್ರ ಸರ್ಕಾರದ ಭ್ರಷ್ಟಾಚಾರ ವಿರೋಧಿ ಕಾರ್ಯಕ್ರಮಗಳು ಹಾಗೂ ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಸ್ತರಿಸುವ ವಿಷಯಗಳು ಪಕ್ಷದ ಪ್ರಚಾರ ವೇದಿಕೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿವೆ. 

ಎರಡೂ ರಾಜ್ಯಗಳಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ 10 ಹಾಗೂ ಹರಿಯಾಣದಲ್ಲಿ 5 ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಮಹಾರಾಷ್ಟ್ರದ 20 ಹಾಗೂ ಹರಿಯಾಣದ 10 ಕಡೆಗಳಲ್ಲಿ ಸಮಾವೇಶ ನಡೆಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿ ಜನರು ನೀಡಿರುವ ಪ್ರತಿಕ್ರಿಯೆ ಪಕ್ಷದಲ್ಲಿ ಹುರುಪು ತುಂಬಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ದೊಡ್ಡ ವ್ಯಕ್ತಿಗಳ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳು ‘ರಾಜಕೀಯ ದುರುದ್ದೇಶ’ದಿಂದ ಕೂಡಿವೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದರೂ, ಜನರು ಮಾತ್ರ ಸಕಾರಾತ್ಮಕ ದೃಷ್ಟಿಕೋನದಿಂದ ಗಮನಿಸುತ್ತಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. 

ಈ ವಿಷಯಗಳನ್ನು ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಎಚ್ಚರಿಕೆಯಿಂದ ನಿಭಾಯಿಸುತ್ತಿವೆ. ಸಂವಿಧಾನದ 370ನೇ ವಿಧಿ ವಿಷಯ ಸರ್ಕಾರಕ್ಕೆ ಜನಪ್ರಿಯತೆ ತಂದುಕೊಟ್ಟಿದೆ. ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿದ್ದರೂ, ಹಲವು ಮುಖಂಡರು ಸರ್ಕಾರದ ನಡೆಯನ್ನು ಬೆಂಬಲಿಸಿದ್ದಾರೆ. 

ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಮತ್ತೆ ಗೆಲುವಿನ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಮುಖ್ಯಮಂತ್ರಿಗಳಾದ ಮನೋಹರ ಲಾಲ್ ಖಟ್ಟರ್ ಹಾಗೂ ದೇವೇಂದ್ರ ಫಡಣವೀಸ್ ಅವರ ‘ಸ್ವಚ್ಛ ಆಡಳಿತ’ವೂ ಗೆಲುವಿಗೆ ಕಾಣಿಕೆ ನೀಡಲಿದೆ ಎಂಬ ವಿಶ್ವಾಸ ನಾಯಕರಲ್ಲಿದೆ. ಭಾರಿ ಬಹುಮತದಿಂದ ಗೆಲ್ಲಲು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳು ನೆರವಾಗಲಿವೆ ಎಂಬುದು ಪಕ್ಷದ ವಿಶ್ವಾಸ. 

288 ಸದಸ್ಯಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಿತ್ರಪಾಳಯ 220ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಅತ್ತ ಹರಿಯಾಣದಲ್ಲಿ 90ರ ಪೈಕಿ ಏಕಾಂಗಿಯಾಗಿ 75 ಕ್ಷೇತ್ರದಲ್ಲಿ ಕಮಲ ಬಾವುಟ ಹಾರಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. 2014ರ ಚುನಾವಣೆಯಲ್ಲಿ ಕ್ರಮವಾಗಿ 122 ಹಾಗೂ 47 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. 

ಈ ಚುನಾವಣೆಯಲ್ಲಿ ಪಕ್ಷ ಪ್ರಸ್ತಾಪಿಸಲು ಮುಂದಾಗಿರುವ ರಾಷ್ಟ್ರೀಯ ವಿಷಯಗಳು ಫಲ ನೀಡಿದಲ್ಲಿ, ಅದನ್ನು ಮುಂಬರುವ ಜಾರ್ಖಂಡ್ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳಲ್ಲೂ ಪ್ರಯೋಗಿಸಲು ಬಿಜೆಪಿ ಚಿಂತನೆ ನಡೆಸಿದೆ. ಆದರೆ ಪ್ರತಿಪಕ್ಷಗಳು ಸ್ಥಳೀಯ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆಯಿದೆ. 

ತಾರಾ ಪ್ರಚಾರಕರ ಪಟ್ಟಿಯಲ್ಲಿ ಸಿಧು ಇಲ್ಲ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಹರಿಯಾಣ ವಿಧಾನಸಭಾ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಿಂದ ಕಾಂಗ್ರೆಸ್ ಕೈಬಿಟ್ಟಿದೆ. 

ಪಟ್ಟಿಯಲ್ಲಿ ಸಿಧು ಹೆಸರು ಸೇರಿಸುವುದರಿಂದ ಆಗಬಹುದಾದ ವಿವಾದಗಳನ್ನು ತಪ್ಪಿಸಲು ಪಕ್ಷ ಈ ನಿರ್ಧಾರ ಮಾಡಿದೆ. ಸಂಬಂಧ ಹಳಸಿದ್ದರೂ ಪಾಕಿಸ್ತಾನ ಜತೆ ಮಾತುಕತೆ ನಡೆಸುವುದನ್ನು ಸಿಧು ಪ್ರತಿಪಾದಿಸಿದ್ದರು. ತಮ್ಮ ಕ್ರಿಕೆಟ್ ಗೆಳೆಯ ಹಾಗೂ ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದು ವಿವಾದಕ್ಕೆ ಕಾರಣರಾಗಿದ್ದರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಬಾಜ್ವಾ ಅವರನ್ನು ತಬ್ಬಿಕೊಂಡಿದ್ದಕ್ಕೆ ಟೀಕೆಗೆ ಗುರಿಯಾಗಿದ್ದರು. 

ಬಿಜೆಪಿ ಈ ಬಾರಿ ರಾಷ್ಟ್ರೀಯ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಇಳಿಯುವ ಸಾಧ್ಯತೆಯಿದೆ. ಹಾಗಾಗಿ, ಸಿಧು ಅವರನ್ನು ದೂರವಿಡುವ ಮೂಲಕ ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದಿರಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.  

ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ‍ಅಮಿತ್ ಶಾ, ಜೆಪಿ ನಡ್ಡಾ, ಫಡಣವೀಸ್, ವಿಜಯ್ ರೂಪಾಣಿ, ಯೋಗಿ ಆದಿತ್ಯನಾಥ, ನಿತಿನ್ ಗಡ್ಕರಿ, ರಾಜನಾಥ ಸಿಂಗ್ ಇದ್ದಾರೆ. ಕಾಂಗ್ರೆಸ್ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ, ಕಮಲನಾಥ್, ಅಶೋಕ್ ಗೆಹ್ಲೋಟ್, ಶತ್ರುಘ್ನ ಸಿನ್ಹಾ, ಅಶೋಕ್ ಚೌಹಾಣ್, ಪೃಥ್ವಿರಾಜ್ ಚೌಹಾಣ್, ಸುಶೀಲ್‌ಕುಮಾರ್ ಶಿಂಧೆ, ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಹಾಗೂ ನಟಿ ನಗ್ಮಾ ಸ್ಥಾನ ಪಡೆದಿದ್ದಾರೆ. 

ಎನ್‌ಸಿಪಿಯಿಂದ ಶರದ್ ಪವಾರ್, ಅಜಿತ್ ಪವಾರ್, ಧನಂಜಯ ಮುಂಢೆ, ಸುಪ್ರಿಯಾ ಸುಳೆ, ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ತಾರಾ ಪ್ರಚಾರಕರು.

ಎಲ್ಲ ಕಡೆ ಅಭ್ಯರ್ಥಿ ಹಾಕಲು ಐಎನ್‌ಎಲ್‌ಡಿ ವಿಫಲ

ಚಂಡೀಗಡ: 2014ರಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಗುರುತಿಸಿಕೊಂಡಿದ್ದ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಪಕ್ಷವು ಈ ಬಾರಿ ಹರಿಯಾಣ ವಿಧಾನಸಭಾ ಚುನಾವಣೆಯ 81 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 

90 ಸದಸ್ಯಬಲದ ವಿಧಾನಸಭೆಯ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ವಿಫಲವಾಗಿರುವ ಚೌಟಾಲ ನೇತೃತ್ವದ ಪಕ್ಷವು ಇದನ್ನು ಚುನಾವಣಾ ತಂತ್ರಗಾರಿಕೆ ಎಂದು ಕರೆದಿದೆ. ಚೌಟಾಲ ಕುಟುಂಬದ ಒಡಕು ಹಾಗೂ ಪಕ್ಷ ತನ್ನ ನೆಲೆ ಕಳೆದುಕೊಳ್ಳುತ್ತಿರುವುದನ್ನು ಈ ನಡೆ ಬಿಂಬಿಸುತ್ತಿದೆ ಎನ್ನಲಾಗಿದೆ. 

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶೇ 24ರಷ್ಟಿದ್ದ ಐಎನ್‌ಎಲ್‌ಡಿ ಮತ ಪ್ರಮಾಣ, ಲೋಕಸಭಾ ಚುನಾವಣೆಯಲ್ಲಿ ಶೇ 1.89ರಷ್ಟಕ್ಕೆ ಕುಸಿದಿತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)