ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

93ರ ಹರೆಯದ ವ್ಯಕ್ತಿ ಕೋವಿಡ್-19 ರೋಗಮುಕ್ತ: ಆರೋಗ್ಯದ ಗುಟ್ಟು ಬಿಚ್ಚಿಟ್ಟ ಕುಟುಂಬ

Last Updated 2 ಏಪ್ರಿಲ್ 2020, 14:52 IST
ಅಕ್ಷರ ಗಾತ್ರ

ಪತ್ತನಂತಿಟ್ಟ: ಕೇರಳದ ಪತ್ತನಂತಿಟ್ಟ ಜಿಲ್ಲೆಯ 93ರ ಹರೆಯದ ವ್ಯಕ್ತಿ ಮತ್ತು 88ರ ಹರೆಯದ ಅವರ ಪತ್ನಿ ಕೋವಿಡ್-19 ರೋಗಮುಕ್ತರಾಗಿದ್ದು, ಇದಕ್ಕೆ ಕಾರಣ ಅವರ ಜೀವನಶೈಲಿ ಎಂದು ಕುಟುಂಬ ಹೇಳಿದೆ.

ಥಾಮಸ್ ಅಬ್ರಹಾಂ ಮತ್ತು ಅವರ ಪತ್ನಿ ಮರಿಯಮ್ಮ ಕೋವಿಡ್ ರೋಗ ಮುಕ್ತರಾಗಿದ್ದಾರೆ. ಕಳೆದ ತಿಂಗಳು ಇಟಲಿಯಿಂದ ಬಂದ ಮಗ, ಸೊಸೆ ಮತ್ತು ಮೊಮ್ಮಗನಿಂದ ಇವರಿಗೆ ಕೊರೊನಾ ಸೋಂಕು ತಗಲಿತ್ತು. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇವರೀಗ ಮನೆಯಲ್ಲಿದ್ದಾರೆ.

ಕೋವಿಡ್ ರೋಗಕ್ಕೆ ಹಿರಿಯ ವಯಸ್ಸಿನವರು ಬೇಗನೆ ತುತ್ತಾಗುತ್ತಾರೆ ಎಂದು ಸುದ್ದಿ ಮಧ್ಯೆಯೇ ಹಿರಿಜೀವಗಳು ಕೋವಿಡ್ ರೋಗ ಮುಕ್ತವಾಗಿದ್ದು ಹೆಚ್ಚಿನ ಸಮಾಧಾನತಂದಿದೆ .

ರೋಗ ಮುಕ್ತರಾಗಿದ್ದಕ್ಕೆ ಪ್ರಧಾನ ಕಾರಣ ಆರೋಗ್ಯಕರವಾದ ಜೀವನ ಶೈಲಿ ಅಂತಾರೆ ಮೊಮ್ಮಗ ರಿಜೊ ಮೊನ್ಸಿ.ಪತ್ತನಂತಿಟ್ಟದ ರನ್ನಿ ಉಪವಿಭಾಗದಲ್ಲಿ ರೈತನಾಗಿರುವ ಥಾಮಸ್ ಅಬ್ರಹಾಂ ಅವರು ಮದ್ಯ ಸೇವಿಸುವುದಿಲ್ಲ, ಧೂಮಪಾನ ಮಾಡವುದಿಲ್ಲ. ಜಿಮ್‌ಗೆ ಹೋಗದೆಯೇ ಅವರಿಗೆ ಸಿಕ್ಸ್ ಪ್ಯಾಕ್ ದೇಹವಿದೆ.

ಅಬ್ರಹಾಂ ಅವರಿಗೆ ಪಳಂಕಂಞಿ (ತಂಗಳನ್ನ), ಮರಗೆಣಸು ಅಥವಾ ಹಲಸಿನಕಾಯಿಯ ಲಘು ಆಹಾರ ಇಷ್ಟ.ಕೋಟ್ಟಯಂ ವೈದ್ಯಕೀಯ ಆಸ್ಪತ್ರೆಯ ಐಸೋಲೊಷನ್ ವಾರ್ಡ್‌ನಲ್ಲಿದ್ದಾಗಲೂ ಅವರು ತಿನ್ನಲು ಬಯಸಿದ್ದು ಕೂಡಾ ಅದನ್ನೇ.

ಈ ಕೋವಿಡ್ ಮಹಾಮಾರಿಯಿಂದ ಅವರು ಬದುಕಿದ್ದೇ ಅದ್ಬುತ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತುಂಬಾ ಶ್ರಮ ವಹಿಸಿದ್ದರು ಅಂತಾರೆ ರಿಜೊ. ಮೊಮ್ಮಗ ರಿಜೊ ಇಟಲಿಯಲ್ಲಿ ರೇಡಿಯಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಟಲಿಯಲ್ಲಿಯೇ ನೆಲೆಸಿರುವ ರಿಜೊ ಮತ್ತು ಅವರ ಅಪ್ಪ ಅಮ್ಮ ಕೇರಳ ಸರ್ಕಾರದ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಕೇರಳಕ್ಕೆ ಬರುವುದಾಗಿ ಹೇಳಿದ್ದೆವು. ಆದರೆ ನೀವು ಬೇಗ ಬನ್ನಿ ಎಂದು ನಮ್ಮ ತಾತ ಒತ್ತಾಯ ಮಾಡಿದ್ದರು. ಅದು ನಿಜವಾಗಿಯೂ ನಮ್ಮ ಪಾಲಿಗೆ ವರದಾನವೇ ಆಯಿತು. ಇಲ್ಲವೆಂದಾದರೆ ನಾವು ಈಗ ಇಟಲಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿದ್ದೆವು ಎಂದು ರಿಜೊ ಹೇಳಿದ್ದಾರೆ.

ಇಟಲಿಯಲ್ಲಿ ಕೋವಿಡ್ ರೋಗ ವ್ಯಾಪಕವಾಗಿ ಹರಡಿದ್ದು ಇಲ್ಲಿಯವರಿಗೆ ಸುಮಾರು 11,500 ಮಂದಿ ಸಾವಿಗೀಡಾಗಿದ್ದಾರೆ. 1,00,000 ಮಂದಿ ಸೋಂಕಿಗೊಳಗಾಗಿದ್ದಾರೆ.

ಥಾಮಸ್ ಅವರಿಗೆ ಮೂರು ಮಕ್ಕಳು, ಏಳು ಮೊಮ್ಮಕ್ಕಳು ಮತ್ತು 14 ಮರಿ ಮೊಮ್ಮಕ್ಕಳು ಇದ್ದಾರೆ. ರಿಜೊ ಅವರ ಹೆತ್ತವರಿಗೆ, ಅಜ್ಜಿ ತಾತನಿಗೆ, ಸಹೋದರಿ ಮತ್ತು ಆಕೆಯ ಗಂಡ, ಅಪ್ಪನ ಅಣ್ಣನಿಗೆ ಎಲ್ಲರಿಗೂ ಕೊರೊನಾ ಸೋಂಕು ತಗುಲಿದೆ.

ಅಜ್ಜಿ ತಾತನಿಗೆ ವಯೋಸಹಜ ಕಾಯಿಲೆಗಳಿತ್ತು.ಆದರೆ ಕೋಟ್ಟಯಂ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ನರ್ಸ್‌ಗಳು ಅವರನ್ನು ಸ್ವಂತ ಕುಟುಂಬದವರಂತೆ ಆರೈಕೆ ಮಾಡಿದರು. ಕೇರಳ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಅಲ್ಲಿನ ಆರೋಗ್ಯ ಸಚಿವೆ ಮತ್ತು ಮುಖ್ಯಮಂತ್ರಿ ತುಂಬಾ ಕಾಳಜಿ ವಹಿಸುತ್ತಾರೆ ಎಂದಿದ್ದಾರೆ ರಿಜೊ.

ರಿಜೊ ಅವರ ಸಹೋದರಿ ಮತ್ತು ಆಕೆಯ ಗಂಡ ನರ್ಸ್ ಆಗಿದ್ದು, ಎಂಟು ತಿಂಗಳ ಹಿಂದೆ ಇಟಲಿಯಿಂದ ಬಂದಿದ್ದರು.
7 ಜನ ವೈದ್ಯರ ತಂಡದ ನೇತೃತ್ವದಲ್ಲಿ ಇವರಿಗೆ ಚಿಕಿತ್ಸೆ ನೀಡಿದ್ದು, 25 ನರ್ಸ್‌ಗಳು ಸೇರಿದಂತೆ 40 ವೈದ್ಯಕೀಯ ನೌಕರರು ಈ ಚಿಕಿತ್ಸೆಯ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT