‘ವಾಜಪೇಯಿ ಅವರ ಭಾಷಣವನ್ನು ನಾನು ತರ್ಜುಮೆ ಮಾಡುತ್ತಿದ್ದೆ’

7

‘ವಾಜಪೇಯಿ ಅವರ ಭಾಷಣವನ್ನು ನಾನು ತರ್ಜುಮೆ ಮಾಡುತ್ತಿದ್ದೆ’

Published:
Updated:
Deccan Herald

ದೇಶದಲ್ಲಿನ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಕಾರಣಕ್ಕೆ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ ಸೇರಿದಂತೆ ಹಲವು ಮುಖಂಡರನ್ನು ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲಿ ಇಡಲಾಗಿತ್ತು. ಅವರ ಪರವಾಗಿ ನಾನು ವಾದಿಸಿದ್ದೆ.

ಹೈಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಬಂತು. ಆದರೆ, ಸುಪ್ರೀಂ ಕೋರ್ಟ್‌ ಈ ಆದೇಶವನ್ನು ರದ್ದುಪಡಿಸಿತು. ಇದರಿಂದ ಸುಪ್ರೀಂ ಕೋರ್ಟ್‌ಗೆ ಕೆಟ್ಟ ಹೆಸರು ಬಂತು. ‘ಈ ಪ್ರಕರಣದಲ್ಲಿ ನಾನು ತಪ್ಪು ಮಾಡಿದೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಬಳಿಕ ಬೇಸರ ವ್ಯಕ್ತಪಡಿಸಿದ್ದರು. ವಾಜಪೇಯಿ 18 ತಿಂಗಳು ಜೈಲಿನಲ್ಲಿದ್ದರು. ಅವರ ಪರವಾಗಿ ವಾದಿಸಿದ್ದ ಕಾರಣಕ್ಕೆ ನನ್ನನ್ನೂ ಜೈಲಿಗೆ ಅಟ್ಟಲಾಗಿತ್ತು.

ರಾಜ್ಯದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಾಜಪೇಯಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದೆ. ಪ್ರಧಾನಿ ಆಗಿದ್ದಾಗ ಅವರಿಗೆ ಆಗಾಗ ಸಲಹೆ ನೀಡುತ್ತಿದ್ದೆ.

‘ಮನಮೋಹನ’ ಮೈತ್ರಿ

ನಿಡುಗಾಲದ ಗೆಳೆಯ ಎನ್.ಎಂ. ಘಟಾಟೆ ಅವರೊಬ್ಬರೇ ವಾಜಪೇಯಿ ಅವರನ್ನು ನಿಯತವಾಗಿ ಭೇಟಿ ಮಾಡುತ್ತಿದ್ದುದು. ಒಮ್ಮೆ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಪ್ರತಿಪಕ್ಷದ ನಾಯಕ ವಾಜಪೇಯಿ ಅವರಿಗೆ ಫೋನ್ ಮಾಡಿ ಕಷ್ಟವೊಂದನ್ನು ಹೇಳಿಕೊಂಡರಂತೆ.

ರಾವ್ ಮಂತ್ರಿಮಂಡಲದ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಮಂಡಿಸಿದ್ದ ಬಜೆಟ್ಟನ್ನು ವಾಜಪೇಯಿ ಸದನದಲ್ಲಿ ಕಟು ಟೀಕೆಗೆ ಗುರಿಪಡಿಸಿದ್ದರು. ಬಿರುನುಡಿಗಳನ್ನು ವ್ಯಕ್ತಿಗತವಾಗಿ ಪರಿಗಣಿಸಿದ ಸಿಂಗ್ ಮಂತ್ರಿ ಪದವಿಗೆ ರಾಜೀನಾಮೆ ನೀಡಲು ಮುಂದಾಗಿದ್ದ ಪ್ರಸಂಗ ಅದು.

ತಾವು ಆಡಿದ ಮಾತುಗಳು ಸಿಂಗ್ ಅವರಿಗೆ ತೀವ್ರ ನೋವು ಉಂಟುಮಾಡಿವೆ ಎಂಬ ಅಂದಾಜು ಅವರಿಗೆ ಇರಲಿಲ್ಲ. ಸಿಂಗ್ ಅವರಿಗೆ ಫೋನ್ ಮಾಡಿದ ವಾಜಪೇಯಿ, ರಾಜಕೀಯ ಮೇಲಾಟದ ಭಾಗವಾಗಿ ಮಾಡಿದ ತಮ್ಮ ಟೀಕೆಯನ್ನು ಮನಸ್ಸಿಗೆ ತೆಗೆದುಕೊಳ್ಳಬಾರದೆಂದು ಸಮಾಧಾನ ಮಾಡಿದರು.

ಮನಮೋಹನ್ ಮತ್ತು ವಾಜಪೇಯಿ ಅವರ ನಡುವೆ ಅಂದು ಹೊಸ ಸುದೀರ್ಘ ಮೈತ್ರಿಯೊಂದು ಚಿಗುರೊಡೆದಿತ್ತು.

**

ರಾಜೀವ್ ಹೃದಯವಂತಿಕೆ

1984-89ರ ಅವಧಿಯಲ್ಲಿ ರಾಜೀವಗಾಂಧಿ ಪ್ರಧಾನಿಯಾಗಿದ್ದ ದಿನಗಳು. ಅಟಲ್ ಬಿಹಾರಿ ವಾಜಪೇಯಿ ಮೂತ್ರಕೋಶದ ತೀವ್ರ ವ್ಯಾಧಿಗೆ ತುತ್ತಾಗಿದ್ದರು. ವಿದೇಶದಲ್ಲಿ ನುರಿತ ತಜ್ಞರ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಅವರು ಆಗ ಸಂಸತ್ ಸದಸ್ಯರಾಗಿರಲಿಲ್ಲ. ಗ್ವಾಲಿಯರ್‌ನಲ್ಲಿ ಮಾಧವರಾವ್ ಸಿಂಧ್ಯ ಅವರ ಎದುರು ಸೋತಿದ್ದರು.

ವಾಜಪೇಯಿ ಅನಾರೋಗ್ಯದ ವಿಷಯ ಅರಿತ ರಾಜೀವ್, ಅವರನ್ನು ವಿಶ್ವಸಂಸ್ಥೆಗೆ ತೆರಳುವ ಭಾರತೀಯ ನಿಯೋಗದ ಸದಸ್ಯರಾಗಿ ಸೇರಿಸಿದರು. ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯಲಿ ಎಂಬುದು ಅವರ ಉದ್ದೇಶವಾಗಿತ್ತು. ‘ಅಂದು ನಾನು ನ್ಯೂಯಾರ್ಕ್‌ಗೆ ಹೋದ ಕಾರಣ ಇಂದು ಜೀವಂತ ಇರುವುದಾಗಿ’ ಖುದ್ದು ವಾಜಪೇಯಿ ಅವರು ಪತ್ರಕರ್ತ ಕರಣ್ ಥಾಪರ್ ಅವರಿಗೆ ತಿಳಿಸಿದ್ದರು. ಅದು 1991ರಲ್ಲಿ ರಾಜೀವಗಾಂಧಿ ಶ್ರೀಪೆರಂಬದೂರಿನಲ್ಲಿ ಹತ್ಯೆಗೀಡಾಗಿದ್ದ ಸಂದರ್ಭ.

2001ರಲ್ಲಿ ಸೋನಿಯಾ ಆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿ. ಹಿಂಜರಿಕೆ, ಸಂಕೋಚ ಅವರನ್ನು ಇನ್ನೂ ಬಿಟ್ಟಿರಲಿಲ್ಲ. ವಿಶ್ವಸಂಸ್ಥೆಯ ಏಡ್ಸ್‌ ಸಮ್ಮೇಳನಕ್ಕೆ ಭಾರತೀಯ ನಿಯೋಗದ ಮುಖ್ಯಸ್ಥರನ್ನಾಗಿ ಸೋನಿಯಾ ಅವರನ್ನು ಅಮೆರಿಕಕ್ಕೆ ಕಳಿಸಿಕೊಟ್ಟರು ಅಂದಿನ ಪ್ರಧಾನಿ ವಾಜಪೇಯಿ. ನಿಯೋಗದ ನೇತೃತ್ವ ತಮ್ಮ ಕೈ ತಪ್ಪಿತೆಂದು ಮುನಿಸಿಕೊಂಡಿದ್ದರು ಆರೋಗ್ಯ ಮಂತ್ರಿ ಡಾ.ಸಿ.ಪಿ. ಠಾಕೂರ್. ಅಮೆರಿಕದ ಉಪಾಧ್ಯಕ್ಷ ಡಿಕ್ ಚೆನೆ ಅವರ ಮಹತ್ವದ ಭೇಟಿ ಸೋನಿಯಾ ಅವರಿಗೆ ಒದಗಿತ್ತು.

ಸಾಲುಗಟ್ಟಿ ಜರುಗಿದ ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಸೋನಿಯಾ ಒಮ್ಮೆಯೂ ಬಿಜೆಪಿ ಜೊತೆ ತಮಗಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಲಿಲ್ಲ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !