ರಾಜಕೀಯದಲ್ಲಿ ಕವಿಸಮಯ

7

ರಾಜಕೀಯದಲ್ಲಿ ಕವಿಸಮಯ

Published:
Updated:

‘ಕೆಲವು ಸ್ನೇಹಿತರು ಹೇಳುತ್ತಾರೆ ರಾಜಕಾರಣಿಯಾಗಿರದಿದ್ದರೆ ನಾನೊಬ್ಬ ಪ್ರಮುಖ ಹಿಂದಿ ಕವಿಯಾಗಿರುತ್ತಿದ್ದೆ ಎಂದು. ಅದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನಾನು ಕವಿಯಾಗಿರುವುದರಲ್ಲಿ ಹೊರಹೊಮ್ಮುವಲ್ಲಿ ರಾಜಕಾರಣದ ಪಾತ್ರವೂ ಇದೆ’ ಎಂದಿದ್ದರು ವಾಜಪೇಯಿ. ರಾಜಕಾರಣಿಯೊಬ್ಬರಿಗೆ ಸಾಹಿತ್ಯದ ಹಿನ್ನೆಲೆ ಇದ್ದರೆ ಅವರು ಮಾನವೀಯ ಭಾವನೆಗಳನ್ನು ಅಲಕ್ಷಿಸಲು ಸಾಧ್ಯವೇ ಇಲ್ಲ ಎಂಬುದರಲ್ಲಿ ನಂಬಿಕೆ ಇರಿಸಿಕೊಂಡಿದ್ದವರು ವಾಜಪೇಯಿ.

ಅವರ ಮಾತಿನ ಮಾಂತ್ರಿಕತೆಯ ಆಂತರ್ಯದಲ್ಲಿದ್ದದ್ದು ಹುಟ್ಟಿನಿಂದಲೇ ಅವರೊಳಗಿದ್ದ ಕವಿಹೃದಯ. ಕವಿಯ ಉಪಮೆ, ರೂಪಕಗಳ ಹತಾರುಗಳನ್ನು ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾಣತನದಿಂದ ಬಳಸಿದವರು ಅವರು. ರಾಜಕೀಯ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ, ಎಷ್ಟೋ ಬಾರಿ ನೇರವಾಗಿ ಹೇಳಲಾಗದೆ ಇದ್ದಾಗ, ಅವರ ಕವಿಹೃದಯ ನೆರವಿಗೆ ಬರುತ್ತಿತ್ತು. ರಾಜಕಾರಣದಲ್ಲಿ ಕೆಲವೊಮ್ಮೆ ಅಪ್ರಿಯ ಸತ್ಯಗಳನ್ನು ವ್ಯಕ್ತಪಡಿಸುತ್ತಿದ್ದರು. ಕಾವ್ಯಕ್ಕಿರಬೇಕಾದ ದ್ವಂದ್ವ, ಅನಿರ್ದಿಷ್ಟತೆಗಳು ಅವರ ಮಾತಿನಲ್ಲೂ ಕೆಲವೊಮ್ಮೆ ಇಣುಕುತ್ತಿದ್ದವು. ಬಾಬರಿ ಮಸೀದಿ ಧ್ವಂಸದ ಹಿಂದಿನ ದಿನ ಫೈಜಾಬಾದ್ ನಲ್ಲಿ ಅವರು ಮಾಡಿದ ಭಾಷಣ ಇದಕ್ಕೆ ಸಾಕ್ಷಿ: 

‘ಹೌದು, ವಿವಾದಿತ ಸ್ಥಳದಲ್ಲಿ ಭಜನೆ ಕೀರ್ತನೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಭಜನೆಯನ್ನು ಒಬ್ಬರು ಮಾಡಲಾಗುವುದಿಲ್ಲ, ಅದನ್ನು ಕೂಡಿ ಮಾಡಬೇಕು, ಅದನ್ನು ನಿಂತುಕೊಂಡು ಮಾಡಲೂ ಆಗುವುದಿಲ್ಲ… ಅಲ್ಲಿ ನೆಲದಲ್ಲಿ ಚೂಪಾದ ಕಲ್ಲುಗಳಿವೆ, ಅದರ ಮೇಲೆ ಕೂರುವುದಾದರೂ ಹೇಗೆ? ಇದಕ್ಕಾಗಿ ನೆಲವನ್ನು ಸಮತಟ್ಟುಗೊಳಿಸಬೇಕು. ಯಜ್ಞಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು…ನಾಳೆ ಏನಾಗುತ್ತದೋ ಗೊತ್ತಿಲ್ಲ...ನಾನು ಅಯೋಧ್ಯೆಗೆ ಹೋಗಬೇಕೆಂದಿದ್ದೆ. ಆದರೆ ನನ್ನನ್ನು ದೆಹಲಿಗೆ ಹೋಗಲು ಹೇಳಿದ್ದಾರೆ’ ಎಂದಷ್ಟೇ ಹೇಳಿದ ವಾಜಪೇಯಿ ದೆಹಲಿಗೆ ಹೊರಟುಬಿಟ್ಟಿದ್ದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನಂತರ ನಡೆದ ಒಪ್ಪಂದದ ಸಮಯದಲ್ಲಿ ವಾಜಪೇಯಿ ಬರೆದ ಕವನದ ಕೆಲವು ಸಾಲುಗಳು ಹೀಗಿವೆ:

‘ಒಂದಲ್ಲ ಎರಡಲ್ಲ ಇಪ್ಪತ್ತು ರಾಜಿ ಮಾಡಿಕೊಳ್ಳಿ, ಆದರೆ ಸ್ವತಂತ್ರ ಭಾರತದ ತಲೆ ಬಾಗದು… ಇದು ತ್ಯಾಗ, ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯ ದುಃಖಿತರ ಹಿತಕ್ಕಾಗಿ ಅರ್ಪಿತ ಸ್ವಾತಂತ್ರ್ಯ... ಇದರ ನಾಶಕ್ಕಾಗಿ ಯತ್ನಿಸುವವರಿಗೆ ಹೇಳಿ ಬೆಂಕಿಕಿಡಿಯ ಜತೆಗಿನ ಆಟ ಅಪಾಯಕಾರಿ ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ನಿಮ್ಮ ಮನೆಯನ್ನೇ ಸುಟ್ಟು ಹಾಕುತ್ತದೆ ನಿಮ್ಮದೇ ಕೈಯಲ್ಲಿ ನಿಮ್ಮ ಗೋರಿಯನ್ನು ತೋಡಬೇಡಿ 
ನಿಮ್ಮ ಕಾಲಿಗೆ ನೀವೇ ಕೊಡಲಿ ಹಾಕಿಕೊಳ್ಳಬೇಡಿ ಅಮಾಯಕ ನೆರೆಮನೆಯವರೇ, ಕಣ್ಣು ತೆರೆಯಿರಿ ಬೆಲೆಕಟ್ಟಲಾಗದ ಸ್ವಾತಂತ್ರ್ಯದ ಬೆಲೆ ಏನೆಂಬುದು ತಿಳಿದುಕೊಳ್ಳಿ’.

ವಾಜಪೇಯಿ ಅವರು ಅಜಾತಶತ್ರು ಎಂದು ಜನಪ್ರಿಯರಾಗಲು ಕೂಡ ನೆರವಾಗಿದ್ದು ಅವರೊಳಗಿನ ಕವಿ. 

ಸೂಕ್ಷ್ಮಗ್ರಾಹಿ ಸಂವೇದನಾಶೀಲ ರಾಜಕಾರಣಿಯಾಗಿ ಅವರ ತಕ್ಷಣದ ಪ್ರತಿಕ್ರಿಯೆ ಭಾವುಕವಾಗೇ ಇರುತ್ತಿತ್ತು. ನಂತರವೇನಾದರೂ ವಿವರಣೆ ಇದ್ದರೆ ಅದು ರಾಜಕಾರಣಿಯಾಗಿ ರಾಜಿಯಾಗುವ ಧಾಟಿಯದು ಎನಿಸಿಬಿಡುತ್ತಿತ್ತು. ರಾಜಕೀಯ ಬಿಕ್ಕಟ್ಟಿನ ಹಲವಾರು ಸಂದರ್ಭಗಳಲ್ಲಿ ಅವರ ಜನಪ್ರಿಯ ಕವನದ ‘ಗೀತ್ ನಯಾ ಗಾತಾ ಹೂಂ’ ಸಾಲುಗಳನ್ನು ಹೇಳಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. 2003ರಲ್ಲಿ ದೇಶದ ಜನಸಂಖ್ಯೆಯ ಗಣನೀಯ ಪ್ರಮಾಣದ 20ರ ಆಸುಪಾಸಿನ ಯುವಜನರಲ್ಲಿ ನವಚೈತನ್ಯ, ಹುರುಪು ತುಂಬಲು ಕೂಡ ಇದು ಕಾರಣವಾಗಿತ್ತು.

1998ರ ಮಾರ್ಚ್ ನಲ್ಲಿ ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವಾಗ ಮಾಡಿದ ಅವರ ಭಾಷಣ ಚರ್ಚೆಗೆ ನಾಂದಿ ಹಾಡಿತ್ತು; ಮತ್ತು ವಿರೋಧ ಪಕ್ಷಗಳ ಬೆಂಬಲ ಬಯಸಿದ ಅವರ ರೀತಿ ಹೆಚ್ಚು ಕಡಿಮೆ ಎರಡು ದಶಕಗಳ ನಂತರವೂ ಬಿಜೆಪಿ ಮತ್ತು ಅದನ್ನು ವಿರೋಧಿಸುವ ಇತರ ಪಕ್ಷಗಳಿಗೆ ಕೂಡ ಇಂದಿಗೂ ಸಂದೇಶದಂತಿದೆ. ರಾಷ್ಟ್ರದ ಹಿತದ ಪ್ರಶ್ನೆ ಬಂದಾಗ ಅವರೆಂದೂ ಆಡಳಿತದಲ್ಲಿರುವವರಿಗೆ ಬೆಂಬಲ ನೀಡಲು ಹಿಂದೆ ಮುಂದೆ ನೋಡಲಿಲ್ಲ.

ದೇಶದ ವಿಷಯಕ್ಕೆ ಬಂದಾಗ ಸಮಸ್ಯೆಗಳಿಂದ ಹೊರಬರಲು ಮತ್ತು ಸವಾಲುಗಳನ್ನು ಎದುರಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಇದು ಒಂದು ಪಕ್ಷ, ಒಂದು ಮೈತ್ರಿಯಿಂದ ಸಾಧ್ಯವಾಗುವಂಥದ್ದಲ್ಲ ಎಂದು ಈ ಭಾಷಣದ ವಿಡಿಯೊ ನೋಡುವ ಯಾವ ರಾಜಕೀಯ ನಾಯಕರಿಗೂ ಈಗಲೂ ನೆನಪಿಸುವಂತಿದೆ ಅದು.

‘ದಿ ಲೈಬ್ರರಿ ಆಫ್ ಕಾಂಗ್ರೆಸ್’ ಅವರ 20 ಕೃತಿಗಳನ್ನು ತನ್ನ ಸಂಗ್ರಹದಲ್ಲಿರಿಸಿಕೊಂಡಿದೆ. ಕನ್ನಡಕ್ಕೂ ಅವರ ಕವಿತೆಗಳು ಅನುವಾದವಾಗಿವೆ. ‘ಸಂವೇದನಾ’ ಎಂಬ ಆಲ್ಬಂನಲ್ಲಿ ಅಮಿತಾಭ್ ಬಚ್ಚನ್‌ರ ಪೀಠಿಕೆ, ಜಗಜೀತ್ ಸಿಂಗ್ ಅವರ ಹಿನ್ನೆಲೆ ಗಾಯನ ಮತ್ತು ಸಂಗೀತಕ್ಕೆ ಶಾರೂಕ್‌ ಖಾನ್ ಅಭಿನಯ ಇದೆ.

ಆದರೆ ಕಾವ್ಯದ ಮೂಲಕ ಅವರು ಸ್ಪರ್ಶಿಸಿದ ಅಂಶಗಳು ಯಾವುದೇ ಶ್ರೇಷ್ಠ ಕವಿ ಬರೆದಷ್ಟೇ ಗಂಭೀರವಾದವುಗಳು. ಏಕತಾನತೆ, ಒಂಟಿತನ, ಸಾವು – ಹೀಗೆ ಅವರ ಕಾವ್ಯ ಬದುಕಿನ ಸಂದಿಗ್ಧತೆಗಳನ್ನು ಬಿಡಿಸಿಟ್ಟು ನಿಟ್ಟುಸಿರಿಟ್ಟಿದೆ.

‘ಒಂದು ದಿನ ನೀವು ಮಾಜಿ ಪ್ರಧಾನಮಂತ್ರಿ ಆಗಬಹುದು. ಆದರೆ ನೀವು ಎಂದೂ ಮಾಜಿ ಕವಿ ಆಗಲಾರಿರಿ’ ಎಂದಿದ್ದರು ವಾಜಪೇಯಿ. 

ಅವರದೇ ಕವನದ ಸಾಲುಗಳಿಂದ:

‘ಹೋನೆ ನ ಹೋನೆ ಕಾ ಕ್ರಮ್

ಇಸಿ ತರ‍್ಹಾ ಚಲ್ತಾ ರಹೇಗಾ

ಹಮ್‌ ಹೈ, ಹಮ್ ರಹೆಂಗೆ

ಯೆಹ್ ಭ್ರಮ್‌ ಭಿ ಸದಾ ಪಲ್ತಾ ರಹೇಗಾ’

‘ಇರುವುದು ಇಲ್ಲದಿರುವುದು ಎಂಬುವ ಈ ನಿಯತಿ

ಹೀಗೇ ಸಂಭವಿಸುತಲಿರುವುದು

ನಾವು ಇದ್ದೇವೆ, ನಾವು ಇರುತ್ತೇವೆ

ಎಂಬುವ ಈ ಭ್ರಮೆಯೂ.’

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !