ಅಪವಾದಕ್ಕೆ ಅಂಜುತ್ತಿದ್ದ ಅಕಳಂಕ ಅಟಲ್

7

ಅಪವಾದಕ್ಕೆ ಅಂಜುತ್ತಿದ್ದ ಅಕಳಂಕ ಅಟಲ್

ಡಿ. ಉಮಾಪತಿ
Published:
Updated:
Deccan Herald

ನವದೆಹಲಿ: ಭಾರತದ ರಾಜಕಾರಣದ ಅಜಾತಶತ್ರು ಎಂದೇ ಬಣ್ಣಿಸಲಾಗುತ್ತಿದ್ದ ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ (93) ಗುರುವಾರ ಸಂಜೆ ಇಲ್ಲಿನ ಅಖಿಲಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಕೊನೆಯುಸಿರೆಳೆದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಕಳೆದ 24 ತಾಸುಗಳಲ್ಲಿ ನಾಜೂಕಿನ ಸ್ಥಿತಿಯಿಂದ ಅತಿ ನಾಜೂಕಿನ ಸ್ಥಿತಿಯತ್ತ ಸಾಗಿತ್ತು.

ಕವಿ, ಪತ್ರಕರ್ತ, ವಿದೇಶಾಂಗ ವ್ಯವಹಾರಗಳ ನಿಪುಣ, ವಾಕ್ಚತುರ, ವಿರಳ ಮುತ್ಸದ್ದಿ ಎಂದು ಜನಮಾನಸದಲ್ಲಿ
ತಮ್ಮ ವ್ಯಕ್ತಿತ್ವದ ಛಾಪು ಮೂಡಿಸಿದ ಈ ವಿರಳ ಬಹುಮುಖ ಪ್ರತಿಭೆಯನ್ನು ಸಾವು 93ನೆಯ ವಯಸ್ಸಿನಲ್ಲಿ ಕೊಂಡೊಯ್ಯಿತು.

‘ಮರಣಕ್ಕೆ ಹೆದರುವುದಿಲ್ಲ ನಾನು...ಅಂಜುವುದಾದರೆ ಅದು ಅಪಮಾನಕ್ಕೆ, ಅಪಕೀರ್ತಿಗೆ’ ಎಂದು ಸಾರಿದ್ದ ಅವರನ್ನು ಕಳಂಕಗಳು ಅಂಟಲೇ ಇಲ್ಲ.

‘ಕಾಲದ ಕಪಾಲದ ಮೇಲೆ ಬರೆಯುತ್ತೇನೆ, ಅಳಿಸುತ್ತೇನೆ, ಗೀತೆ ಹೊಸದು ಹಾಡುತ್ತೇನೆ ಗೀತೆ ಹೊಸದು ಹಾಡುತ್ತೇನೆ’ ಎಂಬುದು ಅವರ ಪ್ರಸಿದ್ಧ ಕವಿತೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರಗಡೆಯೂ ಅಪಾರ ಗೆಳೆಯರನ್ನು ಸಂಪಾದಿಸಿ, ವಿರೋಧ ಪಕ್ಷಗಳಿಂದಲೂ ಮಾನವತಾವಾದಿ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದ ಅವರದು ಪೂರ್ಣ ಬದುಕು. ಭಾರತ ರಾಜಕಾರಣದ ಈ ‘ಅಜಾತಶತ್ರು’ವಿನಿಂದ ಪ್ರೇರಣೆ ಪಡೆದವರ ಸಂಖ್ಯೆ ಬಹಳ ದೊಡ್ಡದು. ಅವರ ಸಾವನ್ನು ಭಾರತದ ರಾಜನೀತಿಯ ನಷ್ಟ ಎಂದು ಬಣ್ಣಿಸಲಾಗಿದೆ.

ವಿನೋದಪ್ರಿಯರೂ, ಭೋಜನಪ್ರಿಯರೂ, ಬದುಕು ಕೊಡಮಾಡುವ ಎಲ್ಲ ಆಮೋದ ಪ್ರಮೋದಗಳನ್ನು ಮುಕ್ತ ಮನಸ್ಸಿನಿಂದ ಸವಿದವರು ವಾಜಪೇಯಿ. ರಾಜಕೀಯ ವಿರೋಧಿಗಳ ಜೊತೆಗೆ ಮತಭೇದ ಇಟ್ಟುಕೊಳ್ಳಬೇಕೇ ವಿನಾ ಮನಭೇದ ಸಲ್ಲದು ಎಂಬುದು ಅವರ ತತ್ವವಾಗಿತ್ತು. ‘ಪತ್ರಕರ್ತನಾಗಲು ಬಂದಿದ್ದೆ, ರಾಜನೀತಿಯಲ್ಲಿ ಸಿಕ್ಕಿಬಿದ್ದೆ. ಮರಣದ ನಂತರ ಸಮಾಜಕ್ಕಾಗಿ ದುಡಿದ ಒಳ್ಳೆಯ ಮನುಷ್ಯ ಎಂದು ಅನ್ನಿಸಿಕೊಂಡರೆ ಸಾಕು’ ಎಂದು ಅವರು ಹೇಳುತ್ತಿದ್ದುದುಂಟು.

1924ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದ ವಾಜಪೇಯಿ 15ನೆಯ ವಯಸ್ಸಿಗೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದರು. ಪೂರ್ಣಾವಧಿ ಪ್ರಚಾರಕರಾಗಿ ಆನಂತರ ಭಾರತೀಯ ಜನಸಂಘದ ಸ್ಥಾಪಕ ಸದಸ್ಯರಾದರು. ಆರೆಸ್ಸೆಸ್ ಪತ್ರಿಕೆಗಳಾಗಿದ್ದ ಪಾಂಚಜನ್ಯ, ವೀರ ಅರ್ಜುನ್, ಸ್ವದೇಶ್ ಹಾಗೂ ರಾಷ್ಟ್ರಧರ್ಮ ದಲ್ಲಿ ದುಡಿದರು.

ವಾಜಪೇಯಿ ಸರ್ಕಾರ ಒಂದೇ ಮತದ ಅಂತರದಲ್ಲಿ ಸೋತು ಅಧಿಕಾರ ಕಳೆದುಕೊಂಡ ವಿಶ್ವಾಸ ಮತಯಾಚನೆ ದೇಶದ ಸಂಸದೀಯ ಇತಿಹಾಸದಲ್ಲೇ ಸುಪ್ರಸಿದ್ಧ.

ರಾಮಮಂದಿರ ನಿರ್ಮಾಣ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಹಾಗೂ ಸಮಾನ ನಾಗರಿಕ ಸಂಹಿತೆಯಂತಹ ಬಿಜೆಪಿಯ ಮೂಲಭೂತ ಕಾರ್ಯಸೂಚಿಯನ್ನು ಹಿನ್ನೆಲೆಗೆ ಸರಿಸಿದ ವಾಜಪೇಯಿ ತಮ್ಮ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಮಿತ್ರ ಪಕ್ಷಗಳ ಬೆಂಬಲದಿಂದ ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದರು. ಬಹುಮತ ಇರಲಿಲ್ಲವಾದರೂ 1999ರಿಂದ 2004ರ ತನಕ ಅವರ ಸರ್ಕಾರಕ್ಕೆ ಸಂಸದೀಯ ಸ್ಥಿರತೆ ಇತ್ತು, ಜೊತೆಗೆ ಸಾಮಾಜಿಕ ಸ್ಥಿರತೆಯೂ ಇತ್ತು.

ವಾಜಪೇಯಿ ಅವರ ಅತ್ಯಾಕರ್ಷಕ ಭಾಷಣ ಶೈಲಿ ಸುಪ್ರಸಿದ್ಧ. ಅವರ ವಾಗ್ಝರಿ ಜನಸಾಮಾನ್ಯರು ಮತ್ತು ಅಸಾಮಾನ್ಯರನ್ನು ಏಕಕಾಲಕ್ಕೆ ಸೂಜಿಗಲ್ಲಿನಂತೆ ಸೆಳೆದದ್ದು ಹೌದು. ಅಂದಿನ ಪ್ರಧಾನಿ ನೆಹರೂ ಕೂಡ ಇವರ ಭಾಷಣಕ್ಕೆ ತಲೆದೂಗಿದ್ದರು. ಅವರ ವಾಕ್ಚಾತುರ್ಯದಿಂದ ಭಾರತೀಯ ಜನಸಂಘದ ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಪಂಡಿತ ದೀನದಯಾಳ ಉಪಾಧ್ಯಾಯ ತೀವ್ರ ಪ್ರಭಾವಿತರಾಗಿದ್ದರು. ಲೋಕಸಭೆಗೆ ತಂದು ದೇಶವಿಡೀ ಅವರ ಭಾಷಣ ಆಲಿಸುವಂತಾಗಬೇಕೆಂದು ಬಯಸಿದ್ದರು. 1957ರಲ್ಲಿ ಉತ್ತರಪ್ರದೇಶದ ಮಥುರಾ ಮತ್ತು ಬಲರಾಂಪುರ ಕ್ಷೇತ್ರಗಳಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಬಲರಾಂಪುರದಿಂದ ಆಯ್ಕೆಯಾದ ಅವರು ಒಟ್ಟು ಹತ್ತು ಸಲ ಲೋಕಸಭೆಗೆ ಆರಿಸಿ ಬಂದರು. ಎರಡು ಬಾರಿ ರಾಜ್ಯಸಭೆ ಪ್ರವೇಶಿಸಿದರು.

ಸರ್ವಾಧಿಕಾರಿ ಮನೋವೃತ್ತಿಯಿಂದ ದೂರವಿದ್ದ ವಾಜಪೇಯಿ ಅಪ್ಪಟ ಜನತಂತ್ರವಾದಿ ಆಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಹಲವು ಶಕ್ತಿ ಕೇಂದ್ರಗಳಿದ್ದವೇ ವಿನಾ ಎಲ್ಲ ಅಧಿಕಾರವೂ ಏಕೈಕ ಶಕ್ತಿ ಕೇಂದ್ರದಲ್ಲಿ ಹೆಪ್ಪುಗಟ್ಟಿರಲಿಲ್ಲ. ಆಡ್ವಾಣಿ, ಪ್ರಮೋದ್ ಮಹಾಜನ್, ಬ್ರಿಜೇಶ್ ಮಿಶ್ರಾ ಮುಂತಾದವರು ಅವರ ಕಾಲದ ಶಕ್ತಿಕೇಂದ್ರಗಳು.

ಜನಸಂಘ- ಬಿಜೆಪಿಯ ತಾಯಿ ಬೇರು ಆಗಿರುವ ಆರೆಸ್ಸೆಸ್ ಅಂದಿನ ಸರ್ಕಾರದ ಮೇಲೆ ಇಂದಿನಷ್ಟು ಕವಿದಿರಲಿಲ್ಲ. ಮಿತ್ರಪಕ್ಷಗಳು ಮತ್ತು ಸಮ್ಮಿಶ್ರ ಸರ್ಕಾರದ ಗುರಾಣಿಯನ್ನು ಆರೆಸ್ಸೆಸ್ ಮುಂದೆ ಹಿಡಿದು ಅದನ್ನು ತಟಸ್ಥಗೊಳಿಸುತ್ತಿದ್ದರು ವಾಜಪೇಯಿ. ಪ್ರಧಾನಿ ಕಚೇರಿಯೂ ಅಷ್ಟೇ, ಪತ್ರಕರ್ತರು ಮತ್ತು ಸಾರ್ವಜನಿಕ ಜನಜೀವನಕ್ಕೆ ಮುಚ್ಚಿರಲಿಲ್ಲ.

ಪೋಖ್ರಾನ್‌ನಲ್ಲಿ ವಿಶ್ವದ ಭಾರಿ ರಾಜಕೀಯ- ಆರ್ಥಿಕ ಶಕ್ತಿಗಳನ್ನು ಎದುರು ಹಾಕಿಕೊಂಡು 1998ರಲ್ಲಿ ನಡೆಸಿದ ಪರಮಾಣು ಪರೀಕ್ಷೆ ವಾಜಪೇಯಿ ಸರ್ಕಾರದ ಪಾಲಿಗೆ ತೀವ್ರ ರಾಷ್ಟ್ರವಾದದ ಮಹೋನ್ನತ ಗಳಿಗೆಯಾಗಿತ್ತು. ಪರಮಾಣು ಪರೀಕ್ಷೆಯ ತರುವಾಯ ಪಕ್ಷದ ಕಟ್ಟರ್ ವಾದಿಗಳ ಕಟು ಟೀಕೆಯ ಎಡೆಬಿಡದ ದಾಳಿಯ ನಡುವೆಯೂ ಪಾಕಿಸ್ತಾನದ ಜೊತೆಗೆ ಸಂಬಂಧ ಸುಧಾರಿಸುವ ಇಚ್ಛೆಯಿಂದ ಅವರು ಹಿಂದೆ ಸರಿಯಲಿಲ್ಲ.

ಮರುವರ್ಷ 1999ರ ಫೆಬ್ರವರಿಯಲ್ಲಿ ಲಾಹೋರ್‌ಗೆ ಬಸ್ ಯಾತ್ರೆಯಲ್ಲಿ ತೆರಳಿದರು. ಆದರೆ ಎರಡೇ ತಿಂಗಳ ನಂತರ ಮೇ ತಿಂಗಳಿನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಕಾರ್ಗಿಲ್ ಯುದ್ಧ ಸಾರಿತ್ತು. ಬೆನ್ನಿಗೆ ಚೂರಿ ಹಾಕಿದ್ದು ತಾವಲ್ಲವೆಂದೂ, ಅಂದಿನ ಪಾಕ್ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಪರ್ವೇಜ್ ಮುಷರ‍್ರಫ್ ಎಂದೂ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದುಂಟು. ಆದರೆ ಕಾರ್ಗಿಲ್ ದಾಳಿ ವಾಜಪೇಯಿ ವಿರುದ್ಧದ ಟೀಕೆಗೆ ಮತ್ತಷ್ಟು ಮೊನಚು ನೀಡಿತ್ತು.

**

ರಾಜ್ಯದಲ್ಲಿ ಇಂದು ರಜೆ

ಬೆಂಗಳೂರು: ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ನೆಗೋಷಿಯೇಬಲ್‌ ಇನ್‌ಸ್ಟ್ರೆಮೆಂಟ್‌ ಆ್ಯಕ್ಟ್ ಪ್ರಕಾರ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಶುಕ್ರವಾರ (ಆ. 17) ರಜೆ ಘೋಷಿಸಲಾಗಿದೆ.

ಹಲವೆಡೆ ಪ್ರವಾಹ ಪರಿಸ್ಥಿತಿ ಇರುವ ಕಾರಣ ತುರ್ತು ಪರಿಸ್ಥಿತಿ ನಿಭಾಯಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ರಜೆ ಇರುವುದಿಲ್ಲ. 22ರವರೆಗೆ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ.

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !