ಅಜಾತಶತ್ರು ಅಸ್ತಂಗತ: ಜೈಲು ಸಾಥಿ ನೆನೆದು...

7

ಅಜಾತಶತ್ರು ಅಸ್ತಂಗತ: ಜೈಲು ಸಾಥಿ ನೆನೆದು...

Published:
Updated:
Deccan Herald

ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಅದು 1975ರ ಜೂನ್‌ 26ನೇ ತಾರೀಕು. ನಾನು ಹಾಗೂ ಕೃ.ಗೋಪಿನಾಥ್‌ ಇಬ್ಬರೂ ಎಂಟಿಆರ್‌ ಹೋಟೆಲ್‌ನಿಂದ ಶಾಸಕರ ಭವನಕ್ಕೆ ಮಸಾಲೆ ದೋಸೆಗಳನ್ನು ಕಟ್ಟಿಸಿಕೊಂಡು ಹೋಗಿದ್ದೆವು. ಏಕೆಂದರೆ, ನಮ್ಮ ನೆಚ್ಚಿನ ನಾಯಕರು ಅಲ್ಲಿ ಗೃಹ ಬಂಧನದಲ್ಲಿ ಇದ್ದರು.

ಹೌದು, ಶಾಸಕರ ಭವನದಲ್ಲಿ ತಂಗಿದ್ದ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ, ಮಧು ದಂಡವತೆ ಹಾಗೂ ಶ್ಯಾಮನಂದನ್‌ ಮಿಶ್ರಾ ಅವರನ್ನು ತುರ್ತು ಪರಿಸ್ಥಿತಿ ಘೋಷಣೆಯಾದ ಮಾರನೆಯ ದಿನವೇ ಬಂಧಿಸಲಾಗಿತ್ತು. ಆಗ ಡಿಸಿಪಿಯಾಗಿದ್ದ ರಾಮಲಿಂಗಂ ನಾಲ್ವರನ್ನೂ ಶಾಸಕರ ಭವನದಲ್ಲಿ ಬಂಧನದ ಪ್ರಕ್ರಿಯೆ ಪೂರೈಸಿ, ಅಲ್ಲಿಯೇ ಉಳಿಸಿದ್ದರು. ಆಗ ರಾಮಲಿಂಗಂ ಅವರು, ‘ಸಾರಿ ಸರ್‌, ಮೇಲಧಿಕಾರಿಗಳ ಆರ್ಡರ್‌’ ಎಂದೊಡನೆ, ವಾಜಪೇಯಿಯವರು ತಟ್ಟನೆ ‘ತುಮ್ಹಾರೆ ಕಾಮ್‌, ತುಮ್‌ ಕರೋ’ ಎಂದು ಪ್ರತಿಕ್ರಿಯಿಸಿದ್ದರು.

ತಿಂಡಿಯನ್ನು ಒಳಗೆ ಒಯ್ಯಲು ಪೊಲೀಸರು ಮೊದಮೊದಲು ನಮ್ಮನ್ನು ಬಿಡಲಿಲ್ಲ. ತುಸು ಹೊತ್ತು ಸತಾಯಿಸಿದ ಬಳಿಕ ನಾಯಕರ ಭೇಟಿಗೆ ಅವಕಾಶ ಮಾಡಿಕೊಟ್ಟರು. ಒಳಹೋದಾಗ ಮಿಕ್ಕವರೆಲ್ಲ ವ್ಯಗ್ರವಾಗಿದ್ದರೆ, ವಾಜಪೇಯಿಯವರು ಮಾತ್ರ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದರು. ಅವರಿಂದ ಹೊರಟಿದ್ದು ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬ ಉದ್ಗಾರ ಮಾತ್ರ. ಶಾಸಕರ ಭವನದಿಂದ ಅವರನ್ನೆಲ್ಲ ಮೊದಲು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ, ಅಲ್ಲಿಂದ ಸೆಂಟ್ರಲ್‌ ಜೈಲಿಗೆ ಸ್ಥಳಾಂತರ ಮಾಡಲಾಯಿತು. ಜುಲೈ 4ರಂದು ನಮ್ಮನ್ನೂ ಬಂಧಿಸಲಾಯಿತು. ಜೈಲಿನೊಳಗೆ ಅಡ್ವಾಣಿ ಅವರೊಂದಿಗೆ ಊಟದ ತಟ್ಟೆ ಹಿಡಿದು ನಿಂತಿದ್ದ ವಾಜಪೇಯಿಯವರು ನಮ್ಮನ್ನು ನೋಡಿ ‘ಆವೋ, ಆವೋ’ ಎಂದು ಬರಮಾಡಿಕೊಂಡಿದ್ದರು.

ಹಿರಿಯ ರಾಜಕೀಯ ನೇತಾರರಾಗಿದ್ದ ಕಾರಣ ಅವರನ್ನೆಲ್ಲ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿದ್ದರು. ನಮ್ಮಂತಹ ಯುವ ನಾಯಕರಿಗೆಲ್ಲ ಬೇರೆಡೆ ವ್ಯವಸ್ಥೆ ಮಾಡಲಾಗಿತ್ತು. ವಾರದಲ್ಲಿ 2–3 ದಿನ ಮಾತ್ರ ಜೈಲಿನ ಅಂಗಳದಲ್ಲಿ ಒಟ್ಟಾಗಿ ಸೇರುತ್ತಿದ್ದೆವು. ಅವರೊಂದಿಗೆ ಹರಟೆ ಹೊಡೆಯಲು ಆಗ ಅವಕಾಶ ಸಿಗುತ್ತಿತ್ತು. ನಮ್ಮ ಜತೆ ಮಾತ್ರವಲ್ಲದೆ ಜೈಲಿನ ಇತರ ಕೈದಿಗಳ ಜತೆಗೂ ಅವರು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಹರಟೆ ಬಿಟ್ಟರೆ ಓದು–ಬರಹದಲ್ಲಿ ಅವರು ಕಾಲ ಕಳೆಯುತ್ತಿದ್ದರು.

ವಾಜಪೇಯಿ ಅವರಿಗೆ ಅಪೆಂಡಿಸೈಟಿಸ್‌ ಸಮಸ್ಯೆ ಇತ್ತು. ಅವರು ಆಗಾಗ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಅವರೊಂದಿಗೆ ನಾವೂ ಹೋಗುತ್ತಿದ್ದೆವು. ಡಾ. ವಿಠಲ ಮತ್ತು ಡಾ. ದೇಶಿಕಾಚಾರ್ಯ ಅವರು (ಇಬ್ಬರೂ ಈಗಿಲ್ಲ) ಚಿಕಿತ್ಸೆ ನೀಡುತ್ತಿದ್ದರು. ಒಮ್ಮೆ ಅಪೆಂಡಿಸೈಟಿಸ್‌ ಸಮಸ್ಯೆ ವಿಪರೀತವಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲೇ 3–4 ದಿನ ಆರೈಕೆ ಮಾಡಬೇಕಾಯಿತು.

(ಲೇಖಕ: ಜೆಡಿಎಸ್‌ ಮುಖಂಡ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !