ಅಯೋಧ್ಯೆ: ತ್ವರಿತ ವಿಚಾರಣೆಗೆ ಅರ್ಜಿ

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಲಾಗಿದೆ.
ವಿವಾದದ ಸೌಹಾರ್ದಯುತ ಪರಿಹಾರಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಎಫ್‌ಎಂಐ ಖಲೀಫುಲ್ಲಾ ನೇತೃತ್ವದಲ್ಲಿ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಆದರೆ ಸಮಿತಿಯಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಅರ್ಜಿದಾರರಾದ ಗೋಪಾಲ್ ಸಿಂಗ್ ವಿಶಾರದ ಅವರು ಕೋರ್ಟ್ ಗಮನಕ್ಕೆ ತಂದರು.
ಶ್ರೀಶ್ರೀ ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ ಪಂಚು ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ. ಸಮಿತಿಗೆ ನೀಡಿದ್ದ ಗಡುವನ್ನು ಆಗಸ್ಟ್ 15ರವರೆಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ವಿಸ್ತರಿಸಿತ್ತು.
ಮುಖ್ಯನ್ಯಾಯಮೂರ್ತಿ ಪೀಠದ ಎದುರು ಅರ್ಜಿದಾರರ ಪರ ಹಾಜರಾದ ವಕೀಲ ಪಿ.ಎಸ್. ನರಸಿಂಹ ಅವರು, ತುರ್ತು ವಿಚಾರಣೆ ಪ್ರಕರಣಗಳ ಪಟ್ಟಿಯಲ್ಲಿ ಅಯೋಧ್ಯೆ ಪ್ರಕರಣ ಸೇರಿಸಬೇಕು ಎಂದು ಆಗ್ರಹಿಸಿದರು. ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಬಗ್ಗೆ ಸಮಿತಿ ಆಶಾವಾದ ವ್ಯಕ್ತಪಡಿಸಿದೆ ಎಂದು ಪೀಠ ತಿಳಿಸಿತು.
‘ಫಲಿತಾಂಶ ಸಕಾರಾತ್ಮಕವಾಗಿರಲಿದೆ ಎಂದು ಸಮಿತಿ ಆಶಾಭಾವ ವ್ಯಕ್ತಪಡಿಸಿದೆ. ಹೀಗಿರುವಾಗ ಗಡುವು ವಿಸ್ತರಿಸುವುದರಲ್ಲಿ ತಪ್ಪೇನಿದೆ? ಇಷ್ಟಕ್ಕೂ ರಾಮಜನ್ಮಭೂಮಿ ವಿವಾದ ಇತ್ಯರ್ಥಗೊಳ್ಳದೆ ವರ್ಷಾನುಗಟ್ಟಲೆ ಬಾಕಿಯಿರುವಾಗ ನಾವು ಒಂದಿಷ್ಟು ಸಮಯವನ್ನು ಏಕೆ ವಿಸ್ತರಿಸಬಾರದು’ ಎಂದು ಅರ್ಜಿದಾರರನ್ನು ಪೀಠ ಪ್ರಶ್ನಿಸಿತು.
ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರು ಪೀಠದಲ್ಲಿರುವ ಇತರೆ ನ್ಯಾಯಮೂರ್ತಿಗಳಾಗಿದ್ದಾರೆ. ಸೌಹಾರ್ದಯುತ ಪರಿಹಾರಕ್ಕೆ ಇರುವ ದಾರಿಗಳನ್ನು ಪರಿಶೀಲಿಸುವಂತೆ ಸೂಚಿಸಿ ಮಾರ್ಚ್ 8ರಂದು ಸಮಿತಿ ರಚಿಸಿ ಎಂಟು ವಾರ ಕಾಲಾವಕಾಶ ನೀಡಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.