ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ | ನಿವೇಶನ ವಿವಾದ ತೀರ್ಪಿನ ನಿರೀಕ್ಷೆ, ರಾಮಮಂದಿರ ಕಲ್ಲು ಕೆತ್ತನೆ ಸ್ಥಗಿತ

ಸಾಮರಸ್ಯಕ್ಕಾಗಿ ವಿಎಚ್‌ಪಿ ಕರೆ
Last Updated 7 ನವೆಂಬರ್ 2019, 20:30 IST
ಅಕ್ಷರ ಗಾತ್ರ

ಅಯೋಧ್ಯೆ: ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ನಿವೇಶನ ವಿವಾದದ ತೀರ್ಪು ಹೊರಬೀಳುವ ಸಾಧ್ಯತೆ ಇರುವುದರಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಿಸಿದ್ದ ಕಲ್ಲು ಕೆತ್ತನೆ ಕೆಲಸವನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನಿಲ್ಲಿಸಿದೆ. 1990ರ ಬಳಿಕ ಇದೇ ಮೊದಲಿಗೆ ಕೆತ್ತನೆ ಕೆಲಸ ಪೂರ್ಣವಾಗಿ ಸ್ಥಗಿತವಾಗಿದೆ.

ಕೆತ್ತನೆ ಕೆಲಸದಲ್ಲಿ ತೊಡಗಿದ್ದ ಎಲ್ಲ ಶಿಲ್ಪಿಗಳು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ವಿಎಚ್‌ಪಿ ವಕ್ತಾರ ಶರದ್‌ ಶರ್ಮಾ ತಿಳಿಸಿದ್ದಾರೆ.

ವಿಎಚ್‌ಪಿಯ ಉನ್ನತ ನಾಯಕತ್ವವು ಕೆತ್ತನೆ ಕೆಲಸ ನಿಲ್ಲಿಸುವ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

ಕೆತ್ತನೆ ಕೆಲಸವನ್ನು ಮತ್ತೆ ಯಾವಾಗ ಆರಂಭಿಸಬೇಕು ಎಂಬುದನ್ನು ರಾಮ ಜನ್ಮಭೂಮಿ ನ್ಯಾಸವು ನಿರ್ಧರಿಸ ಲಿದೆ.ತೀರ್ಪಿನ ನಿರೀಕ್ಷೆ ಇರುವುದರಿಂದ ನಮ್ಮ ಸಂಘಟನೆಯ ಎಲ್ಲ ಚಟುವಟಿಕೆಗಳನ್ನು ಮತ್ತು ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ರಾಮಮಂದಿರ ನಿರ್ಮಾಣ ಕಾರ್ಯಶಾಲಾದಲ್ಲಿ ಕಲ್ಲುಗಳ ಕೆತ್ತನೆ ಕೆಲಸವನ್ನು 1990ರಲ್ಲಿ ಆರಂಭಿಸಲಾಗಿತ್ತು. ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ನೇತೃತ್ವದ ಸರ್ಕಾರವು ಆಗ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿತ್ತು. ಈವರೆಗೆ ಯಾವತ್ತೂ ಈ ಕೆಲಸಕ್ಕೆ ಅಡ್ಡಿ ಉಂಟಾಗಿರಲಿಲ್ಲ.

1.25 ಲಕ್ಷ ಕ್ಯುಬಿಕ್‌ ಅಡಿಯಷ್ಟು ಕಲ್ಲುಗಳ ಕೆತ್ತನೆ ಈಗಾಗಲೇ ಪೂರ್ಣ ಗೊಂಡಿದೆ. ಪ್ರಸ್ತಾವಿತ ದೇವಾಲಯದ ಮೊದಲ ಮಹಡಿ ನಿರ್ಮಾಣಕ್ಕೆ ಈ ಕಲ್ಲುಗಳು ಸಾಕಾಗುತ್ತವೆ. ದೇವಾಲಯದ ಇನ್ನುಳಿದ ಭಾಗಕ್ಕೆ ಬೇಕಾದ 1.75 ಲಕ್ಷ ಕ್ಯುಬಿಕ್‌ ಅಡಿಯಷ್ಟು ಕಲ್ಲುಗಳ ಕೆತ್ತನೆ ಆಗಬೇಕಿದೆ ಎಂದು ವಿಎಚ್‌ಪಿ ಮೂಲಗಳು ತಿಳಿಸಿವೆ. ವಿವಾದಾತ್ಮಕ ವಿಚಾರದ ತೀರ್ಪು ಹೊರಬರುವ ಈ ಸಂದರ್ಭದಲ್ಲಿ ಸಂಯಮದಿಂದ ಇರಬೇಕು ಎಂದು ಕಾರ್ಯಕರ್ತರಿಗೆ ವಿಎಚ್‌ಪಿ ಕರೆ ನೀಡಿದೆ. ಶಾಂತಿಯಿಂದ ಇರಬೇಕು ಮತ್ತು ಮಿತಿ ಮೀರಿದ ಸಂಭ್ರಮದ ವಾತಾವರಣ ಸೃಷ್ಟಿಸಬಾರದು ಎಂದೂ ಹೇಳಿದೆ.

‘ವಿಎಚ್‌ಪಿಯ ಉಪಾಧ್ಯಕ್ಷ ಚಂಪತ್‌ ರಾಯ್‌ ಅವರು ಕಾರ್ಯಕರ್ತರಿಗೆ ಪತ್ರ ಬರೆದು ಈ ವಿನಂತಿ ಮಾಡಿದ್ದಾರೆ.

ವಕೀಲರ ವಾದ–ಪ್ರತಿವಾದ ಮತ್ತು ನ್ಯಾಯಮೂರ್ತಿಗಳ ಅವಲೋಕನವನ್ನು ಗಮನಿಸಿದರೆ ತೀರ್ಪು ಸತ್ಯದ ಪರವಾಗಿ ಬರಲಿದೆ ಅನಿಸುತ್ತದೆ. ತೀರ್ಪು ಸಮಾಜದಲ್ಲಿ ಆನಂದ ಉಂಟು ಮಾಡಲಿದೆ ಎಂದು ಅವರು ಹೇಳಿದ್ದಾರೆ.

‘ತೀರ್ಪು ಹಿಂದೂಗಳ ಪರವಾಗಿ ಅಥವಾ ಮುಸ್ಲಿಮರ ಪರವಾಗಿ ಬರಲಿ. ಏನೇ ಬಂದರೂ ಎರಡೂ ಸಮುದಾಯಗಳು ಸಾಮರಸ್ಯ ಮತ್ತು ಸಹೋದರತ್ವ ಅತ್ಯುತ್ತಮ ನಿದರ್ಶನ ಪ್ರದರ್ಶಿಸಬೇಕು. ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟು ಹಾಕುವ ಯಾವುದೇ ಘಟನೆ ನಡೆಯದಂತೆ ನಾವೆಲ್ಲರೂ ನೋಡಿಕೊಳ್ಳಬೇಕು’ ಎಂದು ಅವರು ಕರೆ ಕೊಟ್ಟಿದ್ದಾರೆ.ಕೆತ್ತನೆ ಕೆಲಸ ನಿಲ್ಲಿಸುವ ನಿರ್ಧಾರಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.

‘1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ಬಳಿಕ ಆರ್‌ಎಸ್‌ಎಸ್‌, ವಿಎಚ್‌ಪಿ ಮತ್ತು ಅಂತಹ ಇತರ ಸಂಘಟನೆಗಳ ಮೇಲೆ ಆರು ತಿಂಗಳು ನಿಷೇಧ ಹೇರಲಾಗಿತ್ತು. ಆ ದಿನಗಳಲ್ಲಿಯೂ ಕೆತ್ತನೆ ಕೆಲಸ ನಡೆದಿತ್ತು’ ಎಂದು ಸೂರ್ಯ ಕುಂಜ ಸೀತಾರಾಮ ದೇವಾಲಯದ ಮಹಾಂತ ಯುಗಲ್‌ ಕಿಶೋರ್‌ ಶರಣ್‌ ಶಾಸ್ತ್ರಿ ಹೇಳಿದ್ದಾರೆ.

ವಿಜಯೋತ್ಸವ ಬೇಡ: ಪೇಜಾವರ ಶ್ರೀ
ಉಡುಪಿ: ರಾಮಮಂದಿರ ನಿರ್ಮಾಣ ವಿಚಾರವಾಗಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ಬದ್ಧವಾಗಿರಬೇಕು. ಸಾರ್ವಜನಿಕವಾಗಿ ವಿಜಯೋತ್ಸವ, ಪ್ರತಿಭಟನೆ ಮಾಡಬಾರದು. ಶಾಂತಿಗೆ ಭಂಗವಾದರೆ ಉಪವಾಸ ಕೂರುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಪೇಜಾವರ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೀರ್ಪು ಹಿಂದೂಗಳ ಪರವಾಗಿ ಬರುವ ವಿಶ್ವಾಸವಿದೆ. ಆದರೆ, ನಿಶ್ಚಿತವಾಗಿ ಹೇಳಲಾಗುವುದಿಲ್ಲ. ಹಿಂದೂಗಳ ಪರವಾಗಿ ಬಂದರೆ ಬೀದಿಗಿಳಿದು ವಿಜಯೋತ್ಸವ, ಮೆರವಣಿಗೆ ಮಾಡಬಾರದು. ಮುಸ್ಲಿಮರ ಪರವಾಗಿ ಬಂದರೂ ಪ್ರತಿಭಟನೆ ಮಾಡಬಾರದು. ಇದು ವಿಶ್ವಹಿಂದೂ ಪರಿಷತ್‌ ಹಾಗೂ ಸಾಧು–ಸಂತರ ನಿಲುವು’ ಎಂದು ಘೋಷಿಸಿದರು.

‘ಸುಪ್ರೀಂ ಕೋರ್ಟ್‌ ಹಾಗೂ ಸಂವಿಧಾನಕ್ಕೆ ಎಲ್ಲರೂ ಗೌರವ ಕೊಡಬೇಕು’ ಎಂದು ಸ್ವಾಮೀಜಿ ಹೇಳಿದರು.

ರಾಜ್ಯದಲ್ಲೂ ಕಟ್ಟೆಚ್ಚರ
ಬೆಂಗಳೂರು: ಇದೇ ತಿಂಗಳ 17ಕ್ಕೆ ಮುನ್ನ ಯಾವುದೇ ದಿನ ಅಯೋಧ್ಯೆಯ ಭೂವಿವಾದ ತೀರ್ಪು ಸುಪ್ರೀಂ ಕೋರ್ಟ್‌ ಪ್ರಕಟಿಸುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಗೃಹ ಇಲಾಖೆ ಮುಂದಾಗಿದೆ.

ಸೂಕ್ಷ್ಮ, ಅತಿ ಸೂಕ್ಷ್ಮವೆಂದು ಗುರುತಿಸಿದ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾಮಟ್ಟ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆದಿದೆ.

ಅಯೋಧ್ಯೆ ತೀರ್ಪು ಪ್ರಕಟಣೆ ಸಂದರ್ಭ ಶಾಂತಿ ಕಾಪಾಡುವಂತೆ ಬೆಂಗಳೂರಿನ ‘ಪೀಪಲ್‌ ಫಾರ್‌ ಪೀಸ್‌ ಅಂಡ್‌ ಜಸ್ಟೀಸ್‌’ ಸದಸ್ಯರು ದೀಪ ಹಚ್ಚಿ ಮನವಿ ಮಾಡಿದರು
ಅಯೋಧ್ಯೆ ತೀರ್ಪು ಪ್ರಕಟಣೆ ಸಂದರ್ಭ ಶಾಂತಿ ಕಾಪಾಡುವಂತೆ ಬೆಂಗಳೂರಿನ ‘ಪೀಪಲ್‌ ಫಾರ್‌ ಪೀಸ್‌ ಅಂಡ್‌ ಜಸ್ಟೀಸ್‌’ ಸದಸ್ಯರು ದೀಪ ಹಚ್ಚಿ ಮನವಿ ಮಾಡಿದರು

ಈ ಬಗ್ಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಎ.ಕೆ. ಪಾಂಡೆ,‘ವ್ಯಾಟ್ಸ್‌ ಆ್ಯಪ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಡಲಾಗುವುದು. ಪ್ರಚೋದನಕಾರಿ ಸಂದೇಶಗಳನ್ನು ಹರಡುವವರ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಶಾಂತಿ, ಕಾಪಾಡಲು ಮನವಿ
ಚಿತ್ರದುರ್ಗ: ಅಯೋಧ್ಯೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಬರುವ ನಿರೀಕ್ಷೆ ಇದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭಕ್ಕೆ ಗುರುವಾರ ಬಂದ ಅವರು ಮಾತನಾಡಿದರು. ‘ತೀರ್ಪಿನ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡುವ ಅಗತ್ಯವಿಲ್ಲ. ತೀರ್ಪು ಪರ ಅಥವಾ ವಿರೋಧವೇ ಬರಲಿ ಜನ ಶಾಂತಿಯಿಂದ ವರ್ತಿಸಬೇಕು’ ಎಂದರು.

ಸುರಕ್ಷತೆಯ ಕ್ರಮಗಳು
* ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಪೊಲೀಸರ ರಜೆ ರದ್ದು. ಪ್ಲಾಟ್‌ಫಾರಂ, ನಿಲ್ದಾಣ, ಯಾರ್ಡ್‌, ನಿಲುಗಡೆ ಪ್ರದೇಶ, ಸೇತುವೆ, ಸುರಂಗಗಳು ಮತ್ತು ಕಾರ್ಯಾಗಾರಗಳಿಗೆ ವಿಶೇಷ ರಕ್ಷಣೆ ನೀಡಲು ಸೂಚನೆ
* ರೈಲು ನಿಲ್ದಾಣಗಳ ಸಮೀಪದ ಧಾರ್ಮಿಕ ಸ್ಥಳಗಳ ಮೇಲೆ ವಿಶೇಷ ನಿಗಾ
* ಮುಂಬೈ, ದೆಹಲಿ ಸೇರಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ 80 ಪ್ರಮುಖ ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ
* ನಿಲ್ದಾಣ ಸಮೀಪ ಜನರ ಗುಂಪು ಕಂಡ ಕೂಡಲೇ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮನವರಿಕೆ, ಸಿ.ಸಿ.ಟಿ.ವಿ ಕ್ಯಾಮರಾಗಳ ಮೇಲೆ ನಿಗಾ ಇರಿಸಲು ಪರಿಣತರ ನಿಯೋಜನೆಗೆ ಸೂಚನೆ
* ಸಮಾಜವಿರೋಧಿ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವ ಸಾಧ್ಯತೆ ಇದೆ. ಅದಕ್ಕಾಗಿ, ಫೈಜಾಬಾದ್‌ ಮತ್ತು ಉತ್ತರ ಪ್ರದೇಶದ ಇತರೆಡೆಗಳಲ್ಲಿ ಜೈಲುಗಳಾಗಿ ಪರಿವರ್ತಿಸಬಹುದಾದ ಶಾಲೆ–ಕಾಲೇಜುಗಳನ್ನು ಗುರುತಿಸಲಾಗಿದೆ

**
ತೀರ್ಪು ಹಿಂದೂ–ಮುಸ್ಲಿಮರ ವಿಚಾರವಾಗಿ ಪರಿವರ್ತನೆ ಆಗಬಾರದು. ಇದು ಸತ್ಯ ಒಪ್ಪಿಕೊಳ್ಳುವ ವಿಚಾರ. ಹಾಗಾಗಿ, ಸಂಭ್ರಮದ ಹುಚ್ಚುತನ ಸಲ್ಲದು.
-ಚಂಪತ್‌ ರಾಯ್‌, ವಿಎಚ್‌ಪಿಯ ರಾಷ್ಟ್ರೀಯ ಉಪಾಧ್ಯಕ್ಷ

*

ಅಯೋಧ್ಯೆ ತೀರ್ಪು ಇನ್ನೇನು ಬರಲಿದೆ. ಇದರಿಂದಾಗಿ ಜನರಲ್ಲಿ ಕಳವಳ ಇದೆ, ದೇಶದ ಜನರ ಹಿತಾಸಕ್ತಿಗಾಗಿ ಎಲ್ಲರೂ ತೀರ್ಪನ್ನು ಗೌರವಿಸಬೇಕು.
-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT