ಗುರುವಾರ , ನವೆಂಬರ್ 14, 2019
19 °C
ಅಯೋಧ್ಯೆ ಪ್ರಕರಣ: ಸುಪ್ರೀಂಕೋರ್ಟ್‌ಗೆ ಮನವಿ

ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯುವುದು ಅಗತ್ಯ: ಮುಸ್ಲಿ ಕಕ್ಷಿದಾರರ ಮನವಿ

Published:
Updated:

ನವದೆಹಲಿ: ‘ಅಯೋಧ್ಯೆಯ ರಾಮಮಂದಿರ– ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ರಕಟಿಸುವ ಅಂತಿಮ ತೀರ್ಪು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ರೂಪದಲ್ಲಿರಬೇಕು’ ಎಂದು ಮುಸ್ಲಿಂ ಕಕ್ಷಿದಾರರು ಭಾನುವಾರ ಕೋರ್ಟ್‌ಗೆ ಕೇಳಿಕೊಂಡಿದ್ದಾರೆ. 

‘ಈ ತೀರ್ಪು ದೂರಗಾಮಿ ಪರಿಣಾಮಗಳನ್ನು ಉಂಟಮಾಡುವ ಸಾಧ್ಯತೆಯಿದ್ದು, ಮುಂದಿನ ಜನಾಂಗವು ತೀರ್ಪನ್ನು ಹೇಗೆ ನೋಡುತ್ತದೆ ಎಂಬುದನ್ನೂ ಕೋರ್ಟ್ ಗಮನದಲ್ಲಿಟ್ಟುಕೊಂಡಿರಬೇಕು’ ಎಂದು ಮುಸ್ಲಿಂ ಕಕ್ಷಿದಾರರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 

ಕೋರ್ಟ್ ಸೂಚಿಸಿದಂತೆ ಪರಿಹಾರ ಸೂತ್ರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಬಳಿಕ ಮುಸ್ಲಿಂ ಕಕ್ಷಿದಾರರ ಪರ ವಕೀಲರಾದ ರಾಜೀವ್ ಧವನ್, ಇಜಾಜ್ ಮಕ್ಬೂಲ್, ಎಸ್.ಎ. ಸೈಯದ್, ಎಂ.ಆರ್. ಶಂಶಾದ್, ಇರ್ಷಾದ್ ಅಹಮದ್ ಮತ್ತು ಎಫ್‌.ಎ. ಅಯ್ಯೂಬಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

‘ಕೋರ್ಟ್ ನೀಡಲಿರುವ ತೀರ್ಪು ನಮ್ಮ ಬಹುಧರ್ಮ, ಬಹುಸಂಸ್ಕೃತಿಯ ಮೌಲ್ಯಗಳನ್ನು ಪೋಷಿಸುವ ರೂಪದಲ್ಲಿರುತ್ತದೆ ಎಂಬುದು ನಮ್ಮ ಆಶಯ. ಇಂಥ ಪರಿಹಾರ ಸೂತ್ರ ರೂಪಿಸುವುದು ಸಂವಿಧಾನ ರಕ್ಷಣೆಯ ಹೊಣೆ ಹೊತ್ತಿರುವ ಕೋರ್ಟ್‌ನ ಜವಾಬ್ದಾರಿಯೂ ಹೌದು’ ಎಂದು ಅಭಿಪ್ರಾಯಪಡಲಾಗಿದೆ.

2.77 ಎಕರೆ ವಿವಾದಿತ ಜಾಗವೂ ಸೇರಿದಂತೆ ಇಡೀ ಪ್ರದೇಶವನ್ನು ತಮಗೆ ಒಪ್ಪಿಸುವಂತೆ ಹಿಂದೂ ಕಕ್ಷಿದಾರರು ಸುಪ್ರೀಂ ಕೋರ್ಟ್‌ಗೆ ಟಿಪ್ಪಣಿ ಕಳುಹಿಸಿದ್ದರು. ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 16ರಂದು ಪೂರ್ಣಗೊಳಿಸಿದ್ದ ಕೋರ್ಟ್, ತೀರ್ಪು ಕಾಯ್ದಿರಿಸಿದೆ.

ಪ್ರತಿಕ್ರಿಯಿಸಿ (+)