ಬುಧವಾರ, ನವೆಂಬರ್ 20, 2019
20 °C

ಅಯೋಧ್ಯೆ ತೀರ್ಪು: ನವೆಂಬರ್‌ 26ರಂದು ಭೂಮಿ ಬಗ್ಗೆ ನಿರ್ಧಾರ– ಸುನ್ನಿ ವಕ್ಫ್ ಮಂಡಳಿ

Published:
Updated:

ಲಖನೌ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಿಕೆ ಪ್ರಸ್ತಾವ ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಕುರಿತು ನವೆಂಬರ್ 26ರಂದು ನಡೆಯುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸುನ್ನಿ ವಕ್ಫ್ ಮಂಡಳಿ ಭಾನುವಾರ ತಿಳಿಸಿದೆ. 

ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿರುವ ಸುಪ್ರೀಂಕೋರ್ಟ್, ಅಯೋಧ್ಯೆಯ ಮತ್ತೊಂದು ಜಾಗದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಾಗ ನೀಡಬೇಕು ಎಂದು ಶನಿವಾರ ಸರ್ವಾನುಮತದ ತೀರ್ಪು ಪ್ರಕಟಿಸಿತ್ತು. 

‘ಭೂಮಿ ತೆಗೆದುಕೊಳ್ಳುವ ಪ್ರಸ್ತಾವದ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವೈಯಕ್ತಿಕವಾಗಿ ಹೇಳುವುದಾದರೆ ಸಕಾರಾತ್ಮಕ ಧೋರಣೆಯಿಂದ ಮಾತ್ರ ನಕಾರಾತ್ಮಕತೆಯನ್ನು ಗೆಲ್ಲಲು ಸಾಧ್ಯ’ ಎಂದು ಉತ್ತರ ಪ್ರದೇಶದ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷ ಝಫರ್ ಫಾರೂಕಿ ಹೇಳಿದ್ದಾರೆ. 

ಹೊಸ ಜಾಗದಲ್ಲಿ ಮಸೀದಿಯ ಜತೆ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದಿದ್ದಾರೆ. 

ಸುಪ್ರೀಂಕೋರ್ಟ್ ಆದೇಶವನ್ನು ವಕ್ಫ್ ಮಂಡಳಿ ಸ್ವಾಗತಿಸುತ್ತದೆ. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೇಶದ ಹಿತಾಸಕ್ತಿಯಿಂದ ವಿವಾದಿತ ಜಾಗದ ಹಕ್ಕು ಮಂಡನೆಯಿಂದ ಹಿಂದೆ ಸರಿಯುವುದಾಗಿ ಕಳೆದ ತಿಂಗಳು ಮಂಡಳಿ ಪ್ರಸ್ತಾಪಿಸಿತ್ತು.

ಪ್ರತಿಕ್ರಿಯಿಸಿ (+)