ಅಯೋಧ್ಯೆ: ಸಂಧಾನಕ್ಕೆ ಸಲಹೆ

ಗುರುವಾರ , ಮಾರ್ಚ್ 21, 2019
32 °C
ಹಿಂದೂ ಕಕ್ಷಿದಾರರ ವಿರೋಧ, ಮುಸ್ಲಿಮರ ಸ್ವಾಗತ

ಅಯೋಧ್ಯೆ: ಸಂಧಾನಕ್ಕೆ ಸಲಹೆ

Published:
Updated:

ನವದೆಹಲಿ: ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿರುವ ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಬೇಕೇ ಎಂಬ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಕೂಡಲೇ ಸಂಧಾನಕಾರರ ಹೆಸರು ಸೂಚಿಸುವಂತೆ ಎಲ್ಲ ಕಕ್ಷಿದಾರರಿಗೆ ತಿಳಿಸಿತು.

ದಶಕಗಳಷ್ಟು ಹಳೆಯದಾದ ಭೂ ಒಡೆತನ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವಂತೆ ಹೇಳಿದ ಪೀಠ, ಹಳಸಿರುವ ಸಂಬಂಧ ಸುಧಾರಿಸಲು ಇದು ನೆರವಾಗಬಹುದು ಎಂದು ಸಲಹೆ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌.ಎ. ನಜೀರ್‌ ಅವರು ಸಂವಿಧಾನ ಪೀಠದಲ್ಲಿದ್ದಾರೆ.

ಸಂಧಾನಕ್ಕೆ ನಕಾರ: ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಕೋರ್ಟ್ ಸಲಹೆಯನ್ನು ನಿರ್ಮೋಹಿ ಅಖಾಡ ಹೊರತುಪಡಿಸಿ ಉಳಿದ ಹಿಂದೂ ಕಕ್ಷಿದಾರರು ವಿರೋಧಿಸಿದರು. ಮುಸ್ಲಿಂ ಕಕ್ಷಿದಾರರು ಈ ಸಲಹೆಯನ್ನು ಸ್ವಾಗತಿಸಿದರು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಇತ್ಯರ್ಥ ಸಾಧ್ಯತೆಗಳಿದ್ದರೆ ಮಾತ್ರ ಪ್ರಕರಣವನ್ನು ಸಂಧಾನ ಮಾತುಕತೆಗೆ ಶಿಫಾರಸು ಮಾಡಬಹುದು ಎಂದರು.

‘ಅಯೋಧ್ಯೆಯಲ್ಲಿ ರಾಮ ಹುಟ್ಟಿರುವ ಬಗ್ಗೆ ಯಾವುದೇ ವಿವಾದಗಳಿಲ್ಲ. ಆದರೆ, ವಿವಾದ ಉದ್ಭವಿಸಿರುವುದು ರಾಮ ಜನಿಸಿದ ಸ್ಥಳದ ಬಗ್ಗೆ. ಹೀಗಾಗಿ ರಾಮ ಜನ್ಮಸ್ಥಳ ವಿವಾದದ ಇತ್ಯರ್ಥಕ್ಕೆ ಸಂಧಾನ ಮಾತುಕತೆ ಅಗತ್ಯವಿಲ್ಲ’ ಎಂದು ರಾಮಲಲ್ಲಾ ವಿರಾಜಮಾನ ಪರ ವಕೀಲ ಸಿ.ಎಸ್‌. ವೈದ್ಯನಾಥನ್‌ ಹೇಳಿದರು.

‘ಹೃದಯ, ಮನಸ್ಸುಗಳ ಗಾಯ ಮಾಯುವುದು ಸಾಧ್ಯವೇ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ಸಂಧಾನ ಪ್ರಯತ್ನವನ್ನೇ ಮಾಡದೇ ಸಂಧಾನ ಪ್ರಕ್ರಿಯೆಯನ್ನು ಏಕೆ ತಿರಸ್ಕರಿಸುತ್ತೀರಿ’ ಎಂದು ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !