ಗುರುವಾರ , ಆಗಸ್ಟ್ 22, 2019
26 °C

ಅಯೋಧ್ಯೆ ವಿಚಾರಣೆ ನೇರ ಪ್ರಸಾರಕ್ಕೆ ಅರ್ಜಿ

Published:
Updated:
Prajavani

ನವದೆಹಲಿ: ಇದೇ ಆರರಿಂದ ನಡೆಯಲಿರುವ ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ವಿಚಾರಣೆಯ ನೇರ ಪ್ರಸಾರಕ್ಕೆ ಅವಕಾಶ ಕೊಡಬೇಕು ಎಂದು ಕೋರಿ ಆರ್‌ಎಸ್‌ಎಸ್‌ ಸಿದ್ಧಾಂತ ಪ್ರತಿಪಾದಕ ಕೆ.ಎನ್‌. ಗೋವಿಂದಾಚಾರ್ಯ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

ಅಯೋಧ್ಯೆ ವಿವಾದ ಆದಷ್ಟು ಬೇಗನೆ ಇತ್ಯರ್ಥವಾಗಬೇಕು ಎಂಬ ಆತುರ ಜನರಲ್ಲಿ ಇದೆ. ಜತೆಗೆ, ಈ ಪ್ರಕರಣದ ಬಗ್ಗೆ ಭಾರಿ ಕುತೂಹಲವೂ ಇದೆ. ಹಾಗಾಗಿ ವಿಚಾರಣೆ ನೇರಪ್ರಸಾರವಾಗಬೇಕು ಎಂದು ಅವರು ವಿನಂತಿ ಮಾಡಿದ್ದಾರೆ. 

‘ಭಾರತವು ಡಿಜಿಟಲ್‌ ಸೂಪರ್‌ ಪವರ್‌. ಅಯೋಧ್ಯೆ ವಿಚಾರಣೆಯನ್ನು ನೇರ ಪ್ರಸಾರ ಮಾಡುವ ವ್ಯವಸ್ಥೆ ಇಲ್ಲಿ ಇದೆ. ಮಾಹಿತಿ ಪಡೆಯುವುದು ಮೂಲಭೂತ ಹಕ್ಕು. ಹಾಗಾಗಿ ಸುಪ್ರೀಂ ಕೋರ್ಟ್‌ ವಿಚಾರಣೆ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪೊಂದನ್ನು ಅವರು ಉಲ್ಲೇಖಿಸಿದ್ದಾರೆ. ‘ನೇರ ಪ್ರಸಾರ ಆರಂಭಿಸಿದರೆ ನ್ಯಾಯಾಲಯದ ಪ್ರಕ್ರಿಯೆಯನ್ನು ಜನರು ತಿಳಿದುಕೊಳ್ಳುವ ಹಕ್ಕು ಈಡೇರಿದಂತಾಗುತ್ತದೆ. ನ್ಯಾಯಾಲಯವು ಯಾವ ಆಧಾರದಲ್ಲಿ ನಿರ್ಧಾರಗಳನ್ನು ಕೈಗೊಂಡಿದೆ ಎಂಬುದು ಸಂಬಂಧಪಟ್ಟವರಿಗೆ ಮನವರಿಕೆ ಆಗುತ್ತದೆ’ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು. 

ಸುಪ್ರೀಂ ಕೋರ್ಟ್‌ನಲ್ಲಿ ಶ್ರೀರಾಮನನ್ನು ವ್ಯಕ್ತಿಗಳು ಹೇಗೆ ಪ್ರತಿನಿಧಿಸುತ್ತಾರೆ ಎಂಬುದನ್ನು ನೋಡುವ ಆಸಕ್ತಿ ರಾಮನ ಭಕ್ತರಲ್ಲಿ ಇದೆ ಎಂದೂ ಗೋವಿಂದಾಚಾರ್ಯ ಹೇಳಿದ್ದಾರೆ. 

Post Comments (+)