ಮಂಗಳವಾರ, ಮೇ 18, 2021
28 °C
ಅಯೋಧ್ಯೆ ವಿವಾದ

ಬಾಬರಿ ಮಸೀದಿ ಬೀಗ ತೆರೆಸಿದ್ದು ರಾಜೀವ್ ಗಾಂಧಿ: ಒವೈಸಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Asaduddin Owaisi

ಹೈದರಾಬಾದ್: ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಬೀಗಗಳನ್ನು ಒಡೆಯಲು ಆದೇಶಿಸಿದ್ದು ಅಂದಿನ ಪ್ರಧಾನಿ ರಾಜೀವ್ ಗಾಂಧಿ. ಇದಕ್ಕೂ ಶಾ ಬಾನು ಪ್ರಕರಣಕ್ಕೂ ಸಂಬಂಧವಿರಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

"ಶಾ ಬಾನು ಪ್ರಕರಣದ ತೀರ್ಪಿನ ಬಳಿಕ, 15 ನಿಮಿಷಗಳಲ್ಲೇ ಕಾನೂನನ್ನು ಉಲ್ಲಂಘಿಸಲಾಗಿತ್ತು. ಕೀಲಿಕೈ ಇದ್ದ ವ್ಯಕ್ತಿಯನ್ನು ಅಲ್ಲಿಗೆ ಕರೆಸಲೂ ಇಲ್ಲ. ನಂತರ, ರಾಜೀವ್ ಗಾಂಧಿ ಅವರು ಅಲ್ಲಿಂದಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದರು. ಐದು ನಿಮಿಷಗಳ ವಿಚಾರಣೆಯಲ್ಲಿ 25 ಪುಟಗಳ ತೀರ್ಪು ನೀಡಲಾಗಿತ್ತು. ಆದರೆ ಬೀಗ ಒಡೆಸಿದ್ದಕ್ಕೂ, ಶಾ ಬಾನು ಪ್ರಕರಣಕ್ಕೂ ಯಾವುದೇ ಸಂಬಂಧವಿರಲಿಲ್ಲ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಒವೈಸಿ ಹೇಳಿದರು.

"(ಮಾಜಿ ಗೃಹ ಕಾರ್ಯದರ್ಶಿ) ಮಾಧವ ಗೋಡಬೊಲೆ ಹೇಳಿದ್ದೆಲ್ಲವೂ ಸತ್ಯವೇ. ನಮ್ಮ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಅವರು ಹೇಳಿದ್ದು ಐತಿಹಾಸಿಕ ಸತ್ಯವಾಗಿದ್ದು, ಇದನ್ನು ನಿರಾಕರಿಸಲಾಗದು. ಅವರ ಆದೇಶದ ಅನುಸಾರವೇ ಬೀಗಗಳನ್ನು ತೆರೆಯಲಾಗಿತ್ತು ಮತ್ತು ಆ ಕಾಲದಲ್ಲಿ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು" ಎಂದು ಎಐಎಂಐಎಂ ಮುಖ್ಯಸ್ಥ ಹೇಳಿದ್ದಾರೆ.

ಇದಕ್ಕೂ ಮೊದಲು, ಮಾಧವ ಗೋಡಬೊಲೆ ಅವರು ರಾಜೀವ್ ಗಾಂಧಿ ಕುರಿತು ತಮ್ಮ ಪುಸ್ತಕವೊಂದರಲ್ಲಿ ಈ ವಿಷಯ ಬಹಿರಂಗಪಡಿಸಿದ್ದರು. "ರಾಜೀವ್ ಗಾಂಧಿ ಅಂದೇ ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ ಬಾಬರಿ ಮಸೀದಿ-ರಾಮ ಮಂದಿರ ವಿವಾದಕ್ಕೆ ಪರಿಹಾರ ದೊರೆಯುತ್ತಿತ್ತು. ಇದಕ್ಕೆ ಕಾರಣವೆಂದರೆ, ಎರಡೂ ಬಣಗಳ ಮಧ್ಯೆ ರಾಜಕೀಯ ಬದ್ಧತೆಗಳು ಆಗಿನ್ನೂ ಬೆಳೆದಿರಲಿಲ್ಲ. ಆಗಲೇ ಕೊಡು-ಕೊಳ್ಳುವಿಕೆಯ ಸಾಧ್ಯತೆಗಳಿದ್ದವು ಮತ್ತು ವಿವಾದದ ಪರಿಹಾರವೂ ಸ್ವೀಕಾರಾರ್ಹವಾಗುತ್ತಿತ್ತು" ಎಂದು ಗೋಡಬೊಲೆ ಅವರು ಪುಸ್ತಕದಲ್ಲಿ ಬರೆದಿದ್ದರು.

"ಸಂಸದರಾದ ಶಹಾಬುದ್ದೀನ್ ಹಾಗೂ ಸಚಿವ ಕರಣ್ ಸಿಂಗ್ ಮುಂತಾದವರು ರಾಜೀವ್ ಗಾಂಧಿಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದರು. ಆದರೆ ರಾಜೀವ್ ಗಾಂಧಿಗೆ ಆಸಕ್ತಿ ಇರಲಿಲ್ಲ. ವಾಸ್ತವವಾಗಿ ಅವರು ಬಾಬರಿ ಮಸೀದಿಯ ಬೀಗಗಳನ್ನು ತೆಗೆಸಿದರು ಮತ್ತು 'ಶಿಲಾನ್ಯಾಸ' ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು. ರಾಜೀವ್ ಗಾಂಧಿಯನ್ನು ಎರಡನೇ ಕರಸೇವಕ ಅಂತ ನಾನು ನನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ. ಮೊದಲ ಕರಸೇವಕ ಎಂದರೆ ಜಿಲ್ಲಾ ಮ್ಯಾಜಿಸ್ಟ್ರೇಟ್" ಎಂದು ಪುಸ್ತಕದಲ್ಲಿ ಮಾಧವ್ ಅವರು ಬರೆದಿದ್ದರು.

ಅಯೋಧ್ಯೆ ವಿವಾದದ ಬಗ್ಗೆ ನಿರಂತರ 40 ದಿನಗಳ ದಿನಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟು, ಅಕ್ಟೋಬರ್ 16ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಅಯೋಧ್ಯೆಯ 2.77 ಎಕರೆ ಜಮೀನಿನ ಮಾಲೀಕತ್ವದ ವಿವಾದದ ಕುರಿತು ಸರ್ವೋಚ್ಚ ನ್ಯಾಯಾಲಯವು ನವೆಂಬರ್ 17ರಂದು ತೀರ್ಪು ನೀಡುವ ನಿರೀಕ್ಷೆಯಿದೆ. ಅಂದು ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನಿವೃತ್ತಿಯ ದಿನವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು