ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ: ಬಿಜೆಪಿ ಪರ–ವಿರುದ್ಧ ಸಂತರ ಭಿನ್ನಮತ

Last Updated 26 ನವೆಂಬರ್ 2018, 18:29 IST
ಅಕ್ಷರ ಗಾತ್ರ

ಅಯೋಧ್ಯೆ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವನ್ನು ಮುನ್ನೆಲೆಗೆ ತರುವಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಭಾನುವಾರ ಸಂಘಟಿಸಿದ್ದ ‘ಧರ್ಮ ಸಭೆ’ ಭಾಗಶಃ ಯಶಸ್ವಿಯಾಗಿದೆ. ಆದರೆ, ಅದರ ಜತೆಗೆ ಸಾಧುಗಳು ಮತ್ತು ಸಂತರದಲ್ಲಿ ಇರುವ ಭಿನ್ನಾಭಿಪ್ರಾಯಗಳೂ ಬಯಲಿಗೆ ಬಂದಿವೆ.

ಮಂದಿರದ ವಿಚಾರದಲ್ಲಿ ಆಕ್ರಮಣಕಾರಿ ಧೋರಣೆಯನ್ನೇ ತಳೆಯಬೇಕು ಎಂದು ಒಂದು ಗುಂಪು ಪ್ರತಿಪಾದಿಸಿದೆ. ‘ರಾಮಭಕ್ತರಿಗೆ ಬಿಜೆಪಿ ಮೋಸ ಮಾಡಿದೆ’ ಎಂದು ಈ ಗುಂಪು ನೇರವಾಗಿಯೇ ಆರೋಪಿಸಿದೆ. ವಿಎಚ್‌ಪಿಗೆ ನಿಕಟವಾಗಿರುವ ಇನ್ನೊಂದು ಗುಂಪು ಹೆಚ್ಚು ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಸಂಯಮ ಪಾಲಿಸುವಂತೆ ಮನವಿ ಮಾಡಿದೆ.

ಸಂತರ ನಡುವಲ್ಲಿ ವ್ಯಕ್ತಿಗತವಾದ ಭಿನ್ನಾಭಿಪ್ರಾಯಗಳಿಗೂ ಧರ್ಮ ಸಭೆ ವೇದಿಕೆಯಾಯಿತು. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಡಿಸೆಂಬರ್‌ 11ರ ಬಳಿಕ ನಿರ್ಧಾರ ಪ್ರಕಟಿಸಲಿದೆ ಎಂದು ಹಿರಿಯ ಸಚಿವರೊಬ್ಬರು ಭರವಸೆ ಕೊಟ್ಟಿದ್ದಾರೆ ಎಂದು ಧರ್ಮಸಭೆಯಲ್ಲಿ ಹೇಳಿದ್ದ ಸ್ವಾಮಿ ರಾಮಭದ್ರಾಚಾರ್ಯ ಸಭೆಯಿಂದ ಅರ್ಧಕ್ಕೆ ಎದ್ದು ಹೋದರು. ಬೇರೊಬ್ಬ ಸ್ವಾಮೀಜಿ ತಮ್ಮನ್ನು ಪರೋಕ್ಷವಾಗಿ ‘ಸುಳ್ಳ’ ಎಂದರು ಎಂಬುದು ಅವರ ಸಿಟ್ಟಿಗೆ ಕಾರಣ.

ಮಂದಿರ ಚಳವಳಿ ಜತೆಗೆ ಹಿಂದಿನಿಂದಲೂ ಗುರುತಿಸಿಕೊಂಡಿರುವ ಸಾಧ್ವಿ ರಿತಂಬರಾ ಅವರನ್ನೂ ರಾಮಭದ್ರಚಾರ್ಯ ಜರೆದರು. ರಿತಂಬರಾ ಅವರು ಸರ್ಕಾರದಿಂದ ‘ಲಾಭ’ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.ಬಿಜೆಪಿಯ ವಿರುದ್ಧ ಇರುವ ಕೆಲವು ಸಂತರಂತೂ ಇದು 2019ರ ಲೋಕಸಭಾ ಚುನಾವಣೆಗೆ ಮುಂಚಿನ ‘ಗಿಮಿಕ್‌’ ಎಂದು ಹೀಗಳೆದಿದ್ದಾರೆ.

ಅದೇನೇ ಇದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ವಿಚಾರದಲ್ಲಿ ಸಾಧು–ಸಂತರದಲ್ಲಿ ಭಿನ್ನಮತ ಇಲ್ಲ. ದೇವಾಲಯ ನಿರ್ಮಾಣ ಹೇಗಾಗಬೇಕು ಎಂಬ ವಿಚಾರದಲ್ಲಿ ಮಾತ್ರ ಅವರ ನಡುವೆ ಅಭಿಪ್ರಾಯ ಭೇದ ಇದೆ.

‘ಇನ್ನು ಮುಂದೆ ಈ ವಿಚಾರದಲ್ಲಿ ಮುಸ್ಲಿಮರಲ್ಲಿ ಮಾತನಾಡುವ ಅಗತ್ಯವೇ ಇಲ್ಲ... ಶಾಸನ ಅಥವಾ ಸುಗ್ರೀವಾಜ್ಞೆಯ ಮೂಲಕ ದೇವಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಾದಿ ಸುಗಮಗೊಳಿಸಬೇಕು’ ಎಂದು ಮಹಾಂತ ಕನ್ಹಯ್ಯದಾಸ ಅವರು ಧರ್ಮಸಭೆಯಲ್ಲಿ ಒತ್ತಾಯಿಸಿದ್ದರು.

ಆದರೆ, ಅಯೋಧ್ಯೆಯ ಪ್ರಮುಖ ಸಂತರಲ್ಲಿ ಒಬ್ಬರಾದ ಮಹಾಂತ ಧರ್ಮದಾಸ ಅವರು ಇದನ್ನು ಒಪ್ಪುವುದಿಲ್ಲ. ನ್ಯಾಯಾಲಯದ ತೀರ್ಪಿನ ಮೂಲಕ ಅಥವಾ ಮುಸ್ಲಿಂ ಸಮುದಾಯದ ಜತೆ ಮಾತುಕತೆ ನಡೆಸುವ ಮೂಲಕ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ವಿವಾದಿತ ನಿವೇಶನದ ಮಾಲೀಕತ್ವವನ್ನು ವಿಎಚ್‌ಪಿಗೆ ನೀಡಬೇಕು ಎಂಬ ಬೇಡಿಕೆ ನಿರ್ಮೋಹಿ ಅಖಾಡದ ಮಹಾಂತ ದಿನೇಂದ್ರ ದಾಸ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇವರು ರಾಮಜನ್ಮಭೂಮಿ ಬಾಬರಿ ಮಸೀದಿ ನಿವೇಶನ ವಿವಾದದ ಅರ್ಜಿದಾರರಲ್ಲಿ ಒಬ್ಬರು. ‘ಈ ಪ್ರಕರಣದ ಜತೆಗೆ ವಿಎಚ್‌ಪಿಗೆ ಯಾವುದೇ ಸಂಬಂಧ ಇಲ್ಲ. ಇದು ಅರ್ಜಿದಾರ ಸಂಸ್ಥೆಯೂ ಅಲ್ಲ. ಬಿಜೆಪಿಯ ಹಿತಾಸಕ್ತಿ ಕಾಯುವ ಕೆಲಸವನ್ನಷ್ಟೇ ವಿಎಚ್‌ಪಿ ಮಾಡುತ್ತಿದೆ’ ಎಂದು ದಿನೇಂದ್ರ ದಾಸ ಹರಿಹಾಯ್ದಿದ್ದಾರೆ.

*
ಧರ್ಮಸಭೆಯು ವಿಎಚ್‌ಪಿ ನಡೆಸಿದ ಚುನಾವಣಾ ನಾಟಕವಲ್ಲದೆ ಬೇರೇನೂ ಅಲ್ಲ. ಭಾರಿ ಸಂಖ್ಯೆಯಲ್ಲಿ ಜನ ಸೇರಿಸುವುದರ ಮೂಲಕ ಬೇರೊಬ್ಬರ ಹಕ್ಕನ್ನು ನಾವು ಕಸಿದುಕೊಳ್ಳಲಾಗದು.
-ಮಹಾಂತ ಧರ್ಮದಾಸ, ಅಯೋಧ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT