ಮಂದಿರ ಬೇಕಿದ್ದರೆ ಬಿಜೆಪಿ ಬೆಂಬಲಿಸಿ

7
ಧರ್ಮ ಸಂಸತ್‌ನಲ್ಲಿ ಮೋಹನ ಭಾಗವತ್‌ ಘೋಷಣೆ

ಮಂದಿರ ಬೇಕಿದ್ದರೆ ಬಿಜೆಪಿ ಬೆಂಬಲಿಸಿ

Published:
Updated:

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದ ವಿಶ್ವ ಹಿಂದೂ ಪರಿಷತ್‌ ಮತ್ತು ಆರ್‌ಎಸ್‌ಎಸ್‌ ತಮ್ಮ ನಿಲುವಿನಿಂದ ಹಿಂದೆ ಸರಿದಿವೆ. ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಬಯಕೆ ಹಿಂದೂಗಳಿಗೆ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರೆ ಕೊಟ್ಟಿವೆ. ಮಂದಿರಕ್ಕಾಗಿ ಹೊಸ ಅಭಿಯಾನ ನಡೆಸದಿರಲು ನಿರ್ಧರಿಸಿವೆ.

ಪ್ರಯಾಗರಾಜ್‌ನ ಕುಂಭ ಮೇಳದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸತ್‌ನ ಸಮಾರೋಪದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಮೇಲ್ಮನವಿಗಳ ವಿಚಾರಣೆಯನ್ನು ನಿತ್ಯವೂ ನಡೆಸಬೇಕು ಎಂಬ ನಿರ್ಣಯವನ್ನೂ ಧರ್ಮ ಸಂಸತ್‌ ಅಂಗೀಕರಿಸಿದೆ. 

ಅಯೋಧ್ಯೆಯ ವಿವಾದಾತ್ಮಕ ಸ್ಥಳದ ಸುತ್ತ ಇರುವ ವಿವಾದವಿಲ್ಲದ ಸ್ಥಳವನ್ನು ರಾಮ ಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸಲು ಮುಂದಾಗಿರುವ ಕೇಂದ್ರದ ನಿರ್ಧಾರವನ್ನು ಧರ್ಮ ಸಂಸತ್‌ ಸ್ವಾಗತಿಸಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಮ ಮಂದಿರ ನಿರ್ಮಾಣ ಆರಂಭಗೊಳ್ಳಲಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಘೋಷಿಸಿದರು. ಆದರೆ, ಮಂದಿರ ನಿರ್ಮಾಣ ಕಾಮಗಾರಿ ದಿನಾಂಕ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಹಲವು ಸಂತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

‘ಈ ಸರ್ಕಾರಕ್ಕೆ ನಾವು ಸಮಸ್ಯೆ ಸೃಷ್ಟಿಸಬಾರದು, ಬದಲಿಗೆ ಬೆಂಬಲ ನೀಡಬೇಕು. ಲೋಕಸಭೆ ಚುನಾವಣೆ ಬಳಿಕ ನಮ್ಮ ಸರ್ಕಾರದ ಬೆಂಬಲದಲ್ಲಿ ರಾಮ ಮಂದಿರ ನಿರ್ಮಾಣ ಆಗಲಿದೆ’ ಎಂದು ಭಾಗವತ್‌ ಹೇಳಿದರು.

ಹತ್ತಕ್ಕೂ ಹೆಚ್ಚು ಸಂತರ ಪ್ರತಿಭಟನೆಯಿಂದ ಅಚ್ಚರಿಗೊಂಡ ಭಾಗವತ್‌ ಅವರು, ಈ ಸಂತರನ್ನು ಓಲೈಸಲು ಯತ್ನಿಸಿದರು. ‘ಮಂದಿರ ನಿರ್ಮಾಣಕ್ಕೆ ಇರುವ ತೊಡಕುಗಳನ್ನು  ಸರ್ಕಾರವು ನಾಲ್ಕು ವರ್ಷಗಳಲ್ಲಿ ಯಾಕೆ ನಿವಾರಿಸಿಲ್ಲ’ ಎಂದು ಸಂತರೊಬ್ಬರು ಪ್ರಶ್ನಿಸಿದರು. ಪ್ರತಿಭಟನೆ ನಡೆಸಿದ ಸಂತರನ್ನು ವಿಎಚ್‌ಪಿ ಕಾರ್ಯಕರ್ತರು ಬಲವಂತವಾಗಿ ಹೊರಗೆ ಕರೆದೊಯ್ದರು. 

ವಿಎಚ್‌ಪಿ ಆಯೋಜಿಸಿದ್ದ ಈ ಧರ್ಮ ಸಂಸತ್‌ನಲ್ಲಿ ಮಂದಿರ ನಿರ್ಮಾಣದ ದಿನಾಂಕ ಪ್ರಕಟಿಸಲಾಗುವುದು ಎಂದು ಘೋಷಿಸಲಾಗಿತ್ತು. ಫೆ. 21ರಂದು ಮಂದಿರ ನಿರ್ಮಾಣ ಆರಂಭವಾಗಲಿದೆ ಎಂದು ಪ್ರಯಾಗರಾಜ್‌ನಲ್ಲಿ ನಡೆದಿದ್ದ ಇನ್ನೊಂದು ಧರ್ಮ ಸಂಸತ್‌ ಇತ್ತೀಚೆಗೆ ಘೋಷಿಸಿತ್ತು.

*
ಮಂದಿರ ನಿರ್ಮಿಸುವವರನ್ನು ನಾವು ಬೆಂಬಲಿಸಬೇಕು. ಇದು ಹಿಂದೂಗಳ ದೇಶ. ವಿದೇಶಗಳಲ್ಲಿ ಕಿರುಕುಳಕ್ಕೆ ಒಳಗಾದ ಹಿಂದೂಗಳಿಗೆ ಈ ಸರ್ಕಾರ ಪೌರತ್ವ ಕೊಟ್ಟಿದೆ.
-ಮೋಹನ ಭಾಗವತ್‌, ಆರ್‌ಎಸ್‌ಎಸ್‌ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !