ಮಂಗಳವಾರ, ಮೇ 18, 2021
24 °C
ಸಂತರು, ಬೆಂಬಲಿಗರ ‘ಧರ್ಮ ಸಂಸತ್’

ಅಯೋಧ್ಯೆಯಲ್ಲಿ ಬಿಗುವಿನ ವಾತಾವರಣ; ಇದು ‘ಶಿಸ್ತಿನ’ ಸಭೆ ಎಂದ ವಿಎಚ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಕುರಿತಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ವಾರಾಂತ್ಯದಲ್ಲಿ(ಶನಿವಾರ ಮತ್ತು ಭಾನುವಾರ) ಎರಡು ಪ್ರಮುಖ ಘಟನೆಗಳು ನಡೆಯಲಿವೆ. ಇದರ ಮೊದಲ ಭಾಗವಾಗಿ ಶಿವಸೇನೆ ಇದ್ದು, ಸೇನೆಯ ಮುಖ್ಯಸ್ಥ ಉದ್ದವ್‌ ಠಾಕ್ರೆ ಅವರು ಎರಡು ದಿನಗಳ ಭೇಟಿಗೆ ಇಂದು ಅಯೋಧ್ಯೆಯಲ್ಲಿದ್ದಾರೆ.

ರಾಮ ಮಂದಿರ–ಬಾಬರಿ ಮಸೀದಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮಂದಿರ ನಿರ್ಮಾಣ ಕುರಿತಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಭಾನುವಾರ ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಸಮಾವೇಶ ಆಯೋಜಿಸಿದೆ. ಇದರಿಂದಾಗಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ ತಮ್ಮ ಭದ್ರತೆ ಬಗ್ಗೆ ಸ್ಥಳೀಯ ಮುಸ್ಲಿಮರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ನೆರೆಹೊರೆಯಲ್ಲಿ ಮುಸ್ಲಿಮರು ಇರುವ ಅಯೋಧ್ಯೆಯಲ್ಲಿ ಶುಕ್ರವಾರದ ಚರ್ಚಾ ವಿಷಯಗಳು ಎಂದರೆ, ಧಾರ್ಮಿಕ ಸಭೆ ಮತ್ತು ಪವಿತ್ರ ನಗರಕ್ಕೆ ಅದರಿಂದಾಗುವ ಪರಿಣಾಮಗಳ ಕುರಿತು.

ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಅವರು ರಾಮ ಜನ್ಮಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸರಯೂ ನದಿ ತೀರದಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ಅಲ್ಲಿ ಸಂತರು ಹಾಗೂ ಜನರೊಟ್ಟಿಗೆ ಮಾತನಾಡಲಿದ್ದಾರೆ. ಪುಣೆಯ ಶಿವನೇರಿ ಕೋಟೆಯಿಂದ ಮಣ್ಣನ್ನು ತೆಗೆದುಕೊಂಡು ಹೊರಟಿದ್ದಾರೆ. ಅದನ್ನು ರಾಮಜನ್ಮ ಭೂಮಿಯ ಮಹಂತರು ಅಥವಾ ಮುಖ್ಯಸ್ಥರಿಗೆ ಒಪ್ಪಿಸಲಿದ್ದಾರೆ.

ಇನ್ನು ಅಯೋಧ್ಯೆಯಲ್ಲಿ ವಿಎಚ್‌ಪಿ ಭಾನುವಾರ ಬೃಹತ್‌ ‘ಧರ್ಮ ಸಂಸತ್‌’ ಅನ್ನು ಸಂಘಟಿಸಿದೆ. 1992ಲ್ಲಿ ಬಾಬರಿ ಮಸೀದಿ ಧ್ವಂಸವಾದ ಬಳಿಕ ಇಲ್ಲಿ ನಡೆಯುತ್ತಿರುವ ಸಂತ ಮತ್ತು ಬೆಂಬಲಿಗರ ಅತಿ ದೊಡ್ಡ ಸಮಾವೇಶ ಇದು ಎಂದು ವಿಎಚ್‌ಪಿ ಹೇಳಿಕೊಂಡಿದೆ. ರಾಮ ಮಂದಿರ ನಿರ್ಮಾಣ ಕುರಿತಾಗಿ ಮುಂದಿನ ನಡೆಯ ಬಗ್ಗೆ ಚರ್ಚಿಸುವುದು ಇದರ ಕಾರ್ಯಸೂಚಿ ಎಂದು ಹೇಳಲಾಗಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಈ ಸಂಬಂಧ ಸಂಘಟನೆ ಮಾಡಲು ಕೆಲ ದಿನಗಳಿಂದ ಉತ್ತರಪ್ರದೇಶದಲ್ಲಿ ಬೈಕ್‌ ರ‍್ಯಾಲಿಗಳು ಮತ್ತು ಮೆರವಣಿಗೆ ಮೂಲಕ ದೊಡ್ಡಮಟ್ಟದಲ್ಲಿ ಸಂಘಟನೆ ಮಾಡಲು ವಿಎಚ್‌ಪಿ ಸಜ್ಜುಗೊಳಿಸಿದೆ.

ಮುಸ್ಲಿಂ ಸಮಾಜದ ಆತಂಕ
ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಯೋಧ್ಯೆ ನಗರದಲ್ಲಿ ಭಾನುವಾರ ನಡೆಯಲಿರುವ ಸಭೆಗೆ ಎರಡು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಹೇಳಿದ ಬಳಿಕ ಇಲ್ಲಿನ ಮುಸ್ಲಿಮರು ತಮ್ಮ ಸುರಕ್ಷತೆ ಮತ್ತು ಭದ್ರತೆಯ ಕುರಿತು ಆರಂಕವನ್ನೂ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ನಮಗೆ ಭದ್ರತೆಯನ್ನು ಖಾತ್ರಿಪಡಿಸಿದೆ. ಸ್ಥಳೀಯ ಪೊಲೀಸರ ಜತೆಗೆ ಹೆಚ್ಚಿನ ಅರೆ ಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ನಮ್ಮ ಸುರಕ್ಷತೆಯ ಬಗ್ಗೆ ನಾವು ಇನ್ನೂ ಚಿಂತೆ ಮಾಡುತ್ತಿದ್ದೇವೆ’ ಎಂದು ಸ್ಥಳೀಯ ಅಲಮ್‌ ಗಂಜ್‌ ಕತ್ರಾದ ಮುಸ್ಲಿಂ ಪ್ರದೇಶದ ಅರ್ಶದ್ ಅಲಮ್ ಹೇಳಿದ್ದಾರೆ. ಈ ಕಾರ್ಯಕ್ರಮ ಶಾಂತಿಯುತವಾಗಲಿದೆ ಎಂದು ಅವರು ಭಾವಿಸಿದ್ದಾರೆ.

ರಾಮ ಮಂದಿರ ನಿರ್ಮಾಣದ ಅಭಿಯಾನ ಮುಂಚೂಣಿಗೆ ಬಂದಾಗ 1992ರಲ್ಲಿ 16ನೇ ಶತಮಾನದ ಬಾಬರಿ ಮಸೀದಿಯನ್ನು ನಿರ್ನಾಮ ಮಾಡಲಾಯಿತು. ಈ ಸ್ಥಳ ಹಿಂದೂ ದೇವರು ಜನ್ಮಸ್ಥಾನ ಎಂದು ಸಂಘಟನೆ ಹೇಳುತ್ತದೆ.

ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅರ್ಜಿದಾರರಲ್ಲಿ ಒಬ್ಬರಾದ ಇಕ್ಬಾಲ್‌ ಅನ್ಸಾರಿ ಅವರ ಕುಟುಂಬದ ಸದಸ್ಯರ ಭದ್ರತೆ ಮತ್ತು ಅಯೋಧ್ಯೆಯಲ್ಲಿ ಉಳಿದ ಮುಸ್ಲಿಂ ಸಮಾಜದವರ ಬಗ್ಗೆ ಇತ್ತೀಚೆಗೆ ಕಳವಳಗಳು ವ್ಯಕ್ತವಾಗಿವೆ.

‘ಅಯೋಧ್ಯೆಯಲ್ಲಿರುವ ಮುಸ್ಲಿಂ ಸಮುದಾಯವು ಅದರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಚಿಂತಿಸುತ್ತಿದೆ. ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ನಾವು ಭಾವಿಸುತ್ತೇವೆ’ ಎಂದು ಅನ್ಸಾರಿ ಹೇಳಿದ್ದರು.

ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತ ನಮಗೆ ಸಂಪೂರ್ಣ ಭದ್ರತೆಯನ್ನು ನೀಡಿದೆ. ಎಲ್ಲವೂ ಶಾಂತಿಯುತವಾಗಿ ನಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದರು.

‘ಭಾನುವಾರ ಪರಿಸ್ಥಿತಿ ನಿಯಂತ್ರಣದಲ್ಲಿರಲಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಮುಘಲ್‌ಪುರ ಕಾಲೊನಿಯ ಅಬ್ದುಲ್‌ ಖಲೀದ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶನಿವಾರ ನಡೆಯುವ ಶಿವಸೇನೆಯ ‘ಆಶೀರ್ವಾದ ಸಮ್ಮೇಳನ’ದಲ್ಲಿ ಪಕ್ಷದ ಮುಖ್ಯಸ್ಥ ಉದ್ದವ್‌ ಠಾಕ್ರೆ ಪಾಲ್ಗೊಳ್ಳುತ್ತಿದ್ದು, ಇದು ಮುಸ್ಲಿಮರಲ್ಲಿ ಆತಂಕಕ್ಕೂ ಕಾರಣವಾಗಿದೆ. ಮುಂದಿನ ಎರಡು ದಿನ ಮುಸ್ಲಿಮರು ಮನೆಯ ಒಳಗೇ ಉಳಿಯಲು ತಯಾರಿ ನಡೆಸುತ್ತಿದ್ದಾರೆ ಎಂದು ಹಿಂದುಸ್ಥಾನ್‌ ಟೈಮ್ಸ್ ವರದಿ ಮಾಡಿದೆ.

ಶಿಸ್ತುಬದ್ಧ ಭಕ್ತರು: ವಿಎಚ್‌ಪಿ
‘ರಾಮನ ಭಕ್ತರು ಯಾವಾಗಲೂ ಸಂಯಮದಿಂದಿರುತ್ತಾರೆ’ ಎಂದು ಹೇಳಿರುವ ವಿಎಚ್‌ಪಿ, ‘ಭಕ್ತರು ಶಿಸ್ತುಬದ್ಧರು. ಯಾವಾಗಲು ಸಂಯಮದಿಂದಿರುತ್ತಾರೆ. ಅದು ಅವರಿಂದ ವ್ಯಕ್ತವಾಗುತ್ತದೆ, ಅವರಿಗೆ ಕೇವಲ ನಿರ್ದೇಶನದ ಅಗತ್ಯವಿದೆ. ಇದು ಧಾರ್ಮಿಕ ಕಾರ್ಯಕ್ರಮ’ ಎಂದು ವಿಎಚ್‌ಪಿ ವಕ್ತಾರ ಶರದ್‌ ಶರ್ಮಾ ಹೇಳಿದ್ದಾರೆ.

‘ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯವಿದ್ದಲ್ಲಿ ಸೇನೆಯನ್ನು ನಿಯೋಜಿಸಬೇಕು’ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು ಸುಪ್ರೀಂ ಕೋರ್ಟ್‌ಗೆ ಮನವಿಯನ್ನೂ ಮಾಡಿದ್ದಾರೆ.

ಹೆಚ್ಚಿನ ಭದ್ರತೆ, ಕಟ್ಟೆಚ್ಚರ
ಸಮಾವೇಶದ ಅಂಗವಾಗಿ ಉನ್ನತಮಟ್ಟದ ಪೊಲೀಸ್‌ ಅಧಿಕಾರಿಗಳು, 160 ಇನ್‌ಸ್ಪೆಕ್ಟರ್‌ಗಳು, 700 ಕಾನ್‌ಸ್ಟೇಬಲ್‌ಗಳು, 42 ಪ್ರಾಂತೀಯ ಶಸ್ತ್ರಸಜ್ಜಿತ ಪಡೆ, ರ‍್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌(ಆರ್‌ಎಎಫ್‌), ಭಯೋತ್ಪಾದನೆ ನಿಗ್ರಹ ಪಡೆ(ಎಟಿಎಸ್‌) ನಿಯೋಜಿಸಲಾಗಿದೆ. ಕಮಾಂಡೊಗಳು ಮತ್ತು ಡ್ರೋಣ್‌ ಕ್ಯಾಮೆರಾಗಳನ್ನು ಕಣ್ಗಾವಲಿಗೆ ಇರಿಸಲಾಗಿದೆ. ವಿವಾದಿನ ಸ್ಥಳದ ಸುತ್ತ ಸಿಆರ್‌ಪಿಎಫ್‌ ಸುತ್ತುವರಿದಿದ್ದು, ಸರ್ಕಾರ ಭದ್ರತೆಯ ಭರವಸೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು