ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು | ಪುರಾವೆ ಇಲ್ಲದ್ದಕ್ಕೆ ಸೋಲು

Last Updated 9 ನವೆಂಬರ್ 2019, 19:11 IST
ಅಕ್ಷರ ಗಾತ್ರ

ನವದೆಹಲಿ: ಚರಿತ್ರೆಯಲ್ಲಿ ಮುಸ್ಲಿಮರ ವಿರುದ್ಧ ಎಸಗಲಾದ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಮಸೀದಿ ನಿರ್ಮಿಸಲು ಅವರಿಗೆ ಪರ್ಯಾಯ ನಿವೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ಈ ಪ್ರಕರಣದಲ್ಲಿ ಮುಸ್ಲಿಮರನ್ನು ಪ್ರತಿನಿಧಿಸಿದ್ದ ಸುನ್ನಿ ಕೇಂದ್ರೀಯ ವಕ್ಫ್‌ ಮಂಡಳಿಯು ಕಾನೂನು ಹೋರಾಟದಲ್ಲಿ ಸೋಲುಂಡಿದೆ.

‘1934ರ ಘರ್ಷಣೆ, 1949ರಲ್ಲಿ ಅತಿಕ್ರಮಣ ಮತ್ತು 1992ರಲ್ಲಿ ಮಸೀದಿಯನ್ನು ಧ್ವಂಸ ಮಾಡುವ ಮೂಲಕವಿವಾದಿತ ನಿವೇಶನದಿಂದ ಮುಸ್ಲಿಮರನ್ನು ಹೊರಗಟ್ಟಲಾಗಿದೆ. 450 ವರ್ಷಗಳ ಹಿಂದೆ ನಿರ್ಮಿಸಲಾದ ಮಸೀದಿಯಿಂದ ಅವರನ್ನು ಹೊರಗಟ್ಟಿದ್ದು ತಪ್ಪು’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಎಲ್ಲಾ ಅಂಶಗಳನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿದ್ದರೂ, ತೀರ್ಪು ಸುನ್ನಿ ಮಂಡಳಿಯ ವಿರುದ್ಧ ಬಂದಿದೆ. ‘ವಿವಾದಿತ ಜಾಗದ ಒಡೆತನ ತಮ್ಮದು ಎಂಬುದಕ್ಕೆ ಅಗತ್ಯ ಸಾಕ್ಷ್ಯಗಳನ್ನು ಒದಗಿಸಲು ಮಂಡಳಿ ವಿಫಲವಾಗಿದೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

‘ಆದರೆ, ಯಾವುದೇ ಪರಿಸ್ಥಿತಿಯಲ್ಲೂ ರಾಮ ಜನ್ಮಭೂಮಿಯ ಆರಾಧನೆಯನ್ನು ಬಿಟ್ಟಿರಲಿಲ್ಲ ಎಂಬುದನ್ನು ಹಿಂದೂಗಳು ಸಾಬೀತುಮಾಡಿದ್ದಾರೆ’ ಎಂದು ತೀರ್ಪು ಹೇಳುತ್ತದೆ.

‘ಮಸೀದಿಯ ನಡುಗುಮ್ಮಟ ಇದ್ದ ಸ್ಥಳವೇ ರಾಮ ಜನ್ಮಸ್ಥಳ ಎಂದು ಹಿಂದೂಗಳು ಹಲವು ಶತಮಾನಗಳಿಂದ ನಂಬಿದ್ದಾರೆ ಮತ್ತು ಈ ಸ್ಥಳದ ದರ್ಶನ ಪಡೆಯುತ್ತಲೇ ಇದ್ದಾರೆ.ಮುಸ್ಲಿಮರು ಮತ್ತು ಹಿಂದೂಗಳ ಆರಾಧನೆಯ ಸ್ಥಳವನ್ನು ಕಬ್ಬಿಣದ ಬೇಲಿ ಮೂಲಕ ಪ್ರತ್ಯೇಕಿಸಿದ್ದರೂ, ಹಿಂದೂಗಳು ನಡುಗುಮ್ಮಟದ ಸ್ಥಳದ ದರ್ಶನ ಪಡೆಯುವುದನ್ನು ನಿಲ್ಲಿಸಿಲ್ಲ.ರಾಮ ಛಬೂತರಾವನ್ನು ನಿರ್ಮಿಸಿ ರಾಮನ ವಿಗ್ರಹವನ್ನು ಅಲ್ಲಿ ಸ್ಥಾಪಿಸಿದರೂ, ಹಿಂದೂಗಳು ಗುಮ್ಮಟದ ಕೆಳಗಿನ ಸ್ಥಳದ ದರ್ಶನ ಪಡೆಯುವುದನ್ನು ನಿಲ್ಲಿಸಿಲ್ಲ. ಅಲ್ಲದೆ ಪ್ರತೀ ವರ್ಷ ಹಲವು ಹಬ್ಬಗಳಂದು, ಮಸೀದಿಯ ಗುಮ್ಮಟದ ಕೆಳಗೆ ವಿಶೇಷ ಆರಾಧನೆ ನಡೆಸಿದ್ದಾರೆ. ಮುಸ್ಲಿಮರ ಇರುವು, ರಾಮ ಜನ್ಮಭೂಮಿಯ ಮೇಲಿನ ಹಿಂದೂಗಳ ನಂಬಿಕೆಯನ್ನು ಹೋಗಲಾಡಿಸಿಲ್ಲ’ ಎಂದು ಸುಪ್ರೀಂ ಕೋರ್ಟ್‌ ವಿವರಿಸಿದೆ.

‘ಮಸೀದಿ ಮತ್ತು ಅದರ ಪ್ರಾಂಗಣದ ಆಚೆಗೆ, ರಾಮ ಛಬೂತರಾ, ಸೀತಾ ರಸೋಯಿ ದೇವಾಲಯಗಳ ನಿರ್ಮಾಣ ಮತ್ತು ಭಂಡಾರ ಗೃಹಗಳನ್ನು ನಿರ್ಮಿಸಲಾಗಿದೆ. ಹಿಂದೂಗಳು ಈ ಸ್ಥಳದ ಒಡೆತನ ಹೊಂದಿದ್ದರು ಎಂಬುದನ್ನು ಇದು ಸಾಬೀತು ಮಾಡುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಯೋಧ್ಯೆಯ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದನ್ನು ತೀರ್ಮಾನಿಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಎದುರಿದ್ದ ಪ್ರಶ್ನೆಗಳು ಇವು:

* ಹಿಂದೂಗಳು ನಂಬಿರುವಂತೆ, ವಿವಾದಿತ ಸ್ಥಳವು ಶ್ರೀರಾಮನ ಜನ್ಮಸ್ಥಾನವೇ?

* ಅಲ್ಲಿ ಮೂರ್ತಿಗಳು ಇರುವ ದೇವಸ್ಥಾನ ಇತ್ತೇ?

* ವಿವಾದಿತ ಜಾಗದಲ್ಲಿ ಇದ್ದ ಕಟ್ಟಡವು ಬಾಬರ್‌ ನಿರ್ಮಿಸಿದ್ದು ಎನ್ನಲಾದ ಬಾಬರಿ ಮಸೀದಿಯೇ?

* ಅದನ್ನು ನಿರ್ಮಾಣ ಮಾಡಿದ್ದು ಯಾವಾಗ? ಯಾರು ನಿರ್ಮಾಣ ಮಾಡಿದ್ದು? ಬಾಬರ್‌ ನಿರ್ಮಿಸಿದ್ದೋ ಮೀರ್‌ ಬಕಿ ನಿರ್ಮಿಸಿದ್ದೋ?

* ಆ ಕಟ್ಟಡವನ್ನು ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸಿ, ಅದೇ ಜಾಗದಲ್ಲಿ ನಿರ್ಮಾಣ ಮಾಡಲಾಯಿತೇ?

* ಆ ಜಾಗವನ್ನು ಹಿಂದೂಗಳು ರಾಮನ ಜನ್ಮಭೂಮಿ ಎಂಬ ಭಾವನೆಯಿಂದ ಪೂಜಿಸುತ್ತ ಇದ್ದಾರೆಯೇ? ಪುರಾತನ ಕಾಲದಿಂದಲೂ ಆ ಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಹೋಗುತ್ತಿದ್ದಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT