ಶುಕ್ರವಾರ, ಡಿಸೆಂಬರ್ 13, 2019
26 °C
ರಾಮ ಜನ್ಮ ಭೂಮಿ ನ್ಯಾಸ ಸಿದ್ಧಪಡಿಸಿದ್ದ ಮಾದರಿಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗಲಿ

ಅಯೋಧ್ಯೆ ಟ್ರಸ್ಟ್‌ನಲ್ಲಿ ಶಾ, ಯೋಗಿ ಇರಲಿ: ವಿಎಚ್‌ಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ಸುಪ್ರೀಂ ಕೋರ್ಟ್‌ ಆದೇಶದಂತೆ, ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರೂಪಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.

ಈ ಟ್ರಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇರಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಒತ್ತಾಯಿಸಿದೆ. 

ರಾಮಜನ್ಮಭೂಮಿ ನ್ಯಾಸ ಸಿದ್ಧಪಡಿಸಿರುವ ವಿನ್ಯಾಸದಂತೆಯೇ ಭವ್ಯ ಮಂದಿರವನ್ನು ಟ್ರಸ್ಟ್‌ ನಿರ್ಮಿಸಬೇಕು ಎಂದು ವಿಎಚ್‌ಪಿ ವಕ್ತಾರ ಶರದ್‌ ಶರ್ಮಾ ಹೇಳಿದ್ದಾರೆ.

ಅಯೋಧ್ಯೆಯ ಕರಸೇವಕಪುರದಲ್ಲಿ 1990ರಿಂದಲೇ ನ್ಯಾಸವು ಮಂದಿರಕ್ಕೆ ಬೇಕಾದ ಕಲ್ಲು ಕೆತ್ತನೆ ಕೆಲಸ ಗಳನ್ನು ನಡೆಸುತ್ತಿದೆ. ರಾಮಲಲ್ಲಾ ಮಂದಿರಕ್ಕೆ ಬಳಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ನೂರಾರು ಸ್ತಂಭಗಳ ಕೆತ್ತನೆಯನ್ನು ಹತ್ತಾರು ಶಿಲ್ಪಿಗಳು ಪೂರ್ಣಗೊಳಿಸಿದ್ದಾರೆ. ನ್ಯಾಸಕ್ಕೆ ವಿಎಚ್‌ಪಿಯ ಬೆಂಬಲ ಇದೆ. ನ್ಯಾಸದ ಕಾರ್ಯಶಾಲೆಯಲ್ಲಿ ವಿಎಚ್‌‍ಪಿಯ ಹಲವು ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ.

‘ಮಂದಿರದ ವಿನ್ಯಾಸವನ್ನು ವಿವಿಧ ಸಂವಹನ ಮಾಧ್ಯಮಗಳ ಮೂಲಕ ಜನರ ಮನೆಮನ ತಲುಪುವಂತೆ ಕಾರ್ಯಶಾಲೆ ಆರಂಭವಾದ ಸುಮಾರು 30 ವರ್ಷಗಳಲ್ಲಿ ಮಾಡಲಾಗಿದೆ. ಭಕ್ತರು ಕೂಡ ಈ ವಿನ್ಯಾಸದ ಫೋಟೊ ಮತ್ತು ವಿಡಿಯೊ ತೆಗೆದು ಕೊಂಡಿದ್ದಾರೆ. ಈ ವಿನ್ಯಾಸವು ಜನರಿಗೆ ತಲುಪುವಂತೆ ಮಾಡಿ ದ್ದಾರೆ. ರಾಮಮಂದಿರವೆಂದರೆ ಇದುವೇ ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ’ ಎಂದು ಶರ್ಮಾ ಹೇಳಿದ್ದಾರೆ. 

ಮಂದಿರ ನಿರ್ಮಾಣಕ್ಕಾಗಿ ರೂಪಿ ಸುವ ಟ್ರಸ್ಟ್‌ನಲ್ಲಿ ನ್ಯಾಸಕ್ಕೆ ಪ್ರಾತಿನಿಧ್ಯ ಇರಬೇಕು ಮತ್ತು ನ್ಯಾಸ ಸಿದ್ಧಪಡಿಸಿರುವ ವಿನ್ಯಾಸದಂತೆಯೇ ಮಂದಿರ ನಿರ್ಮಾಣ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಮಿತ್‌ ಶಾ ಮತ್ತು ಯೋಗಿ ಅವರನ್ನು ಟ್ರಸ್ಟ್‌ಗೆ ಸೇರಿಸಿಕೊಳ್ಳುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿರುವ ಅವರು, ಶ್ರೀಸೋಮನಾಥ ಟ್ರಸ್ಟ್‌ ಸ್ಥಾಪನೆಯ ನಿದರ್ಶನವನ್ನು ಮುಂದಿಟ್ಟಿದ್ದಾರೆ.

ಸೋಮನಾಥ ಟ್ರಸ್ಟ್‌ನಲ್ಲಿದ್ದ ಕೆ.ಎಂ. ಮುನ್ಶಿ ಅವರು ಆಗ ಕೇಂದ್ರದಲ್ಲಿ ಸಚಿವರಾಗಿದ್ದರು. ಅದೇ ಮಾದರಿಯಲ್ಲಿ ರಾಮ ಮಂದಿರ ಟ್ರಸ್ಟ್‌ ಕೂಡ ಇರಬೇಕು ಎಂದು ಅವರು ಹೇಳಿದ್ದಾರೆ.

‘ಹೊಸ ಟ್ರಸ್ಟ್‌ ಅನಗತ್ಯ’
ರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರವು ಹೊಸ ಟ್ರಸ್ಟ್‌ ರಚಿಸುವ ಅಗತ್ಯ ಇಲ್ಲ, ರಾಮ ಜನ್ಮಭೂಮಿ  ನ್ಯಾಸ ಈಗಾಗಲೇ ಅಸ್ತಿತ್ವದಲ್ಲಿ ಇದೆ ಎಂದು ನ್ಯಾಸದ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ ಹೇಳಿದ್ದಾರೆ.ಆದರೆ, ಟ್ರಸ್ಟ್‌ ರೂಪಿಸುವುದರ ಬಗ್ಗೆ ಇತರ ಸಂತರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಟ್ರಸ್ಟ್‌ ರಚಿಸುವುದು ಕೇಂದ್ರ ಸರ್ಕಾರ ಹೊಣೆಯೇ ಹೊರತು ನ್ಯಾಸದ್ದಲ್ಲ. ಹೊಸ ಟ್ರಸ್ಟ್‌ನಲ್ಲಿ ನ್ಯಾಸಕ್ಕೆ ಪ್ರಾತಿನಿಧ್ಯ ನೀಡಬೇಕು’ ಎಂದು ದಿಗಂಬರ ಅಖಾಡದ ಮುಖ್ಯಸ್ಥ ಮಹಾಂತ ಸುರೇಶ ದಾಸ ಹೇಳಿದ್ದಾರೆ. 

ಸುಪ್ರೀಂ ಕೋರ್ಟ್‌ ಆದೇಶಕ್ಕೆ ಅನುಸಾರವಾಗಿ ಟ್ರಸ್ಟ್‌ ರಚನೆ ಆಗಬೇಕು ಎಂದು ನಿರ್ಮೋಹಿ ಅಖಾಡದ ಮುಖ್ಯಸ್ಥ ಮಹಾಂತ ದಿನೇಂದ್ರ ದಾಸ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಟ್ರಸ್ಟ್‌ ರಚಿಸಬೇಕು ಮತ್ತು ಅದರಲ್ಲಿ ಸರ್ಕಾರದ ಪ್ರತಿನಿಧಿಗಳೂ ಇರಬೇಕು ಎಂದು ಅಯೋಧ್ಯೆ ಪ್ರಕರಣದಲ್ಲಿ ರಾಮಲಲ್ಲಾ ಪ್ರತಿನಿಧಿಯಾಗಿದ್ದ ವಿಎಚ್‌ಪಿಯ ತ್ರಿಲೋಕನಾಥ ಪಾಂಡೆ ಹೇಳಿದ್ದಾರೆ. ನೃತ್ಯ ಗೋಪಾಲ ದಾಸ್‌ ಅವರನ್ನು ಟ್ರಸ್ಟ್‌ನ ಅಧ್ಯಕ್ಷರನ್ನಾಗಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. 

*
ಟ್ರಸ್ಟ್‌ (ರಾಮಜನ್ಮಭೂಮಿ ನ್ಯಾಸ) ಈಗಾಗಲೇ ಇದೆ. ಇದಕ್ಕೆ ಹೊಸ ರೂಪ ಕೊಡಬಹುದು. ಅಗತ್ಯಕ್ಕೆ ಅನುಗುಣವಾಗಿ ಹೊಸ ಸದಸ್ಯರನ್ನು ಅದಕ್ಕೆ ಸೇರಿಸಬಹುದು. 
-ಮಹಾಂತ ನೃತ್ಯ ಗೋಪಾಲ ದಾಸ, ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ

*
ಟ್ರಸ್ಟ್‌ ರಚಿಸಿದ ಬಳಿಕ, ದೇವಾಲಯ ನಿರ್ಮಾಣಕ್ಕಾಗಿ ಹಿಂದೂ ಸಮುದಾಯದಿಂದ ದೇಣಿಗೆ ಸಂಗ್ರಹಿಸಬೇಕು. ಮಂದಿರಕ್ಕೆ ಸರ್ಕಾರ ಹಣ ಬಳಸಲೇಬಾರದು
-ತ್ರಿಲೋಕನಾಥ ಪಾಂಡೆ, ವಿಎಚ್‌ಪಿ ಮುಖಂಡ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು