ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಬರ್‌ ಆಗ ಮಾಡಿದ್ದನ್ನು ಈಗ ಬದಲಿಸುವುದು ಹೇಗೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ

ಸಂಧಾನಕಾರರ ಹೆಸರು ಸೂಚಿಸಲು ಆದೇಶ
Last Updated 6 ಮಾರ್ಚ್ 2019, 18:53 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಸಾಮಾನ್ಯ ನಿವೇಶನ ವ್ಯಾಜ್ಯವಲ್ಲ. ಅದು ಜನರ ಭಾವನೆ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ವಿಷಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

‘ಮೊಘಲ್‌ ದೊರೆ ಬಾಬರ್‌ ಏನು ಮಾಡಿದ ಎಂಬುವುದು ನಮಗೆ ಸಂಬಂಧಿಸದ ವಿಷಯ. ಬಾಬರ್‌ ಮಾಡಿರುವುದನ್ನು ನಾವು ಈಗ ಬದಲಾಯಿಸಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಗೆ ಪರಿಹಾರ ಕಂಡು ಹಿಡಿಯಲು ಮಾತ್ರ ಸಾಧ್ಯ’ ಎಂದು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ಹೇಳಿದೆ.

‘ರಾಮ ಜನ್ಮಭೂಮಿ ನಮಗೆ ಸಾಮಾನ್ಯ ಭೂ ವಿವಾದವಲ್ಲ. ಭಾವನಾತ್ಮಕ ವಿಷಯ. ಇದು ದೇವರ ಆಸ್ತಿ. ಮಧ್ಯಸ್ಥಿಕೆ ವಹಿಸುವ ಹಕ್ಕು ಮತ್ತು ಅಧಿಕಾರ ಯಾರಿಗೂ ಇಲ್ಲ’ ಎಂದು ಹಿಂದೂ ಮಹಾಸಭಾ ವಕೀಲರು ಹೇಳಿದರು. ಮುಸ್ಲಿಂ ಆಕ್ರಮಣಕಾರರ ಇತಿಹಾಸದ ಬಗ್ಗೆ ಹಿಂದೂ ಮಹಾಸಭಾ ವಕೀಲರು ಪ್ರಸ್ತಾಪಿಸಿದರು.

‘ಇದೊಂದು ತುಂಡು ಭೂಮಿಗಾಗಿ ನಡೆಯುತ್ತಿರುವ ಸಾಮಾನ್ಯ ಭೂ ವ್ಯಾಜ್ಯವಲ್ಲ. ಪ್ರಕರಣದ ಗಂಭೀರತೆ ಅರಿವು ಇದೆ. ಜನರ ಧಾರ್ಮಿಕ ನಂಬುಗೆ, ಭಾವನೆಗಳಿಗೆ ಸಂಬಂಧಿಸಿದ ವಿಷಯ. ಅಯೋಧ್ಯೆ ಪ್ರಕರಣ ಈ ದೇಶದ ರಾಜಕಾರಣದ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಅರಿವು ನಮಗಿದೆ’ ಎಂದು ನ್ಯಾಯ‍ಪೀಠ ಹೇಳಿದೆ.

‘ಇತಿಹಾಸವನ್ನು ಕೆದಕುವುದು ಬೇಡ. ಬಾಬರ್‌ ಆಕ್ರಮಣ ನಮಗೆ ಸಂಬಂಧಿಸದ ವಿಷಯ. ರಾಜಕೀಯವಾಗಿ ಸೂಕ್ಷ್ಮವಾಗಿರುವ ರಾಮಜನ್ಮಭೂಮಿ –ಬಾಬರಿ ಮಸೀದಿ ಭೂ ಒಡೆತನ ವಿವಾದಕ್ಕೆ ಮಧ್ಯಸ್ಥಿಕೆಯ ಮೂಲಕ ಪರಿಹಾರ ಕಂಡು ಹಿಡಿಯುವ ಬಗ್ಗೆ ಪ್ರಯತ್ನ ಮಾಡಬಹುದು’ ಎಂದು ನ್ಯಾಮೂರ್ತಿ ಎಸ್‌.ಎ. ಬೊಬ್ಡೆ ಹೇಳಿದರು.

‘ಇದು ಇಬ್ಬರ ನಡುವಿನ ವ್ಯಾಜ್ಯವಲ್ಲ. ಎರಡು ಸಮುದಾಯಗಳ ನಡುವಿನ ವಿವಾದ. ಈ ಪ್ರಕರಣವನ್ನು ಸಂಧಾನದ ಮೂಲಕ ಪರಿಹರಿಸಲು ಯತ್ನಿಸಬಹುದೇ?ಸಂಧಾನ ಮಾರ್ಗ ಅನುಸರಿಸಿದರೆ ದೇಶದ ಲಕ್ಷಾಂತರ ಜನರನ್ನು ಬೆಸೆಯಲು ಸಾಧ್ಯವೇ’ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಪ್ರಶ್ನಿಸಿದರು.

ವಿವಾದಕ್ಕೆ ಕಾರಣವಾದ 2.77 ಎಕರೆ

ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿರುವ ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ಒಡೆತನ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ತೀರ್ಪು ನೀಡಿತ್ತು.

2.77 ಎಕರೆ ವಿವಾದಿತ ನಿವೇಶನವನ್ನು ಸುನ್ನಿ ವಕ್ಫ್‌ ಬೋರ್ಡ್‌, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ವಿರಾಜಮಾನ ನಡುವೆ ಸಮನಾಗಿ ಹಂಚಿಕೊಳ್ಳುವಂತೆ ಅಲಹಾಬಾದ್‌ ಹೈಕೋರ್ಟ್ ಆದೇಶ ನೀಡಿತ್ತು.

ಅಲಹಾಬಾದ್‌ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 14 ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ದಶಕಗಳಷ್ಟು ಹಳೆಯದಾದ ಪ್ರಕರಣದ ತೀರ್ಪಿನತ್ತ ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ.

ಪ‍್ರಕರಣದ ವಿಚಾರಣೆ ಮುಂದೂಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಹಿಂದುತ್ವವಾದಿ ಸಂಘಟನೆಗಳು ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂರಕವಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

ಅಭಿಪ್ರಾಯಗಳು...

ರಾಮಮಂದಿರ–ಬಾಬರಿ ಮಸೀದಿ ಭೂ ಒಡೆತನ ವಿವಾದದ ಸ್ವರೂಪವನ್ನು ಪರಿಗಣಿಸಿದರೆ ಸಂಧಾನ ಮಾರ್ಗ ಸೂಕ್ತವಲ್ಲ
– ತುಷಾರ್‌ ಮೆಹ್ತಾ, ಸಾಲಿಸಿಟರ್‌ ಜನರಲ್‌

*
ಸಂಧಾನ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸುವ ಅನೇಕ ಪ್ರಯತ್ನಗಳು ಈ ಹಿಂದೆ ವಿಫಲವಾಗಿವೆ ಎಂಬುವುದನ್ನು ನ್ಯಾಯಾಲಯ ಪರಿಗಣಿಸಬೇಕು
– ಸಿ.ಎಸ್‌. ವೈದ್ಯನಾಥನ್‌, ರಾಮಲಲ್ಲಾ ವಿರಾಜಮಾನ್‌ ಪರ ವಕೀಲ

*
ಸಂಧಾನ ಮಾತುಕತೆ ಮೂಲಕ ವಿವಾದಕ್ಕೆ ಪರಿಹಾರ ಕಂಡು ಹಿಡಿಯುವ ಮಾರ್ಗ ಸ್ವಾಗತಾರ್ಹ. ಒಟ್ಟಾರೆ ಪ್ರಕ್ರಿಯೆ ರಹಸ್ಯವಾಗಿ ನಡೆಯಬೇಕು ಮತ್ತು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವವರೆಗೂ ಯಾವುದೇ ಮಾಹಿತಿ ಬಹಿರಂಗವಾಗಬಾರದು
– ಮುಸ್ಲಿಂ ಅರ್ಜಿದಾರರು
*

ಅಯೋಧ್ಯೆಯ ವಿವಾದಿತ ನಿವೇಶನ ಸರ್ಕಾರಕ್ಕೆ ಸೇರಿದೆ. ವಿವಾದಿತ ಜಾಗದಲ್ಲಿ ಮಂದಿರ ಇದ್ದದ್ದು ಸಾಬೀತಾದರೆ ರಾಮ ಮಂದಿರ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವುದಾಗಿ ಪಿ.ವಿ. ನರಸಿಂಹರಾವ್‌ ಸರ್ಕಾರ 1994ರಲ್ಲಿ ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿತ್ತು
-ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಸಂಸದ
*

1950ರಿಂದ ನಾವು ತೀರ್ಪು ಕಾಯುತ್ತಿದ್ದೇವೆ. ಸಂಧಾನಕ್ಕೆ ನಾವು ಸಿದ್ಧರಿಲ್ಲ. ಪ್ರಕರಣವನ್ನು ಸಂಧಾನಕ್ಕೆ ಶಿಫಾರಸು ಮಾಡುವ ಅಗತ್ಯವಿಲ್ಲ
– ಹಿಂದೂ ಮಹಾಸಭಾ
*

ಇತಿಹಾಸ ಬದಲಿಸುವುದು ನಮ್ಮಿಂದ ಸಾಧ್ಯವಿಲ್ಲ. ವಿವಾದವನ್ನು ಬಗೆ ಹರಿಸಲು ಕನಿಷ್ಠ ಶೇಕಡಾ ಒಂದರಷ್ಟು ಅವಕಾಶವಿದ್ದರೆ ಕಕ್ಷಿದಾರರು ಮಧ್ಯಸ್ಥಿಕೆಗೆ ಮುಂದಾಗಬೇಕು
– ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT