ಗುರುವಾರ , ನವೆಂಬರ್ 14, 2019
19 °C

ಅಯೋಧ್ಯೆ: ಸಾಮರಸ್ಯಕ್ಕೆ ಬಿಜೆಪಿ ಶ್ರಮ

Published:
Updated:
Prajavani

ನವದೆಹಲಿ: ಅಯೋಧ್ಯೆಯ ಬಾಬರಿ ಮಸೀದಿ–ರಾಮಜನ್ಮಭೂಮಿ ನಿವೇಶನ ವಿವಾದದ ತೀರ್ಪು ಕೆಲವೇ ದಿನಗಳಲ್ಲಿ ಪ್ರಕಟವಾಗುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಜತೆಗಿನ ಬಾಂಧವ್ಯ ಉತ್ತಮಪಡಿಸುವ ಕೆಲಸವನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಆರಂಭಿಸಿದೆ. ಅದರ ಭಾಗವಾಗಿ, ಮುಸ್ಲಿಂ ಧರ್ಮ ಗುರುಗಳು, ವಿದ್ವಾಂಸರು ಮತ್ತು ಗಣ್ಯ ವ್ಯಕ್ತಿಗಳ ಜತೆಗೆ ಮಂಗಳವಾರ ಸಭೆ ನಡೆಸಲಾಗಿದೆ. 

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಅವರ ಮನೆಯಲ್ಲಿ ಈ ಸಭೆ ನಡೆದಿದೆ. ಆರ್‌ಎಸ್‌ಎಸ್‌ ಮುಖಂಡರಾದ ಕೃಷ್ಣ ಗೋಪಾಲ್‌ ಮತ್ತು ರಾಂಲಾಲ್‌, ಕೇಂದ್ರದ ಮಾಜಿ ಸಚಿವ ಶಾನವಾಜ್‌ ಹುಸೇನ್‌ ಮತ್ತು ಮುಸ್ಲಿಂ ಸಮುದಾಯದ ಹಲವು ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಜಮೀಯತ್‌ ಉಲೇಮಾ ಎ ಹಿಂದ್‌ ಪ್ರಧಾನ ಕಾರ್ಯದರ್ಶಿ ಮಹಮೂದ್‌ ಮದನಿ, ಸಿನಿಮಾ ನಿರ್ದೇಶಕ ಮುಝಪ್ಪರ್‌ ಅಲಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಕಮಾಲ್‌ ಫರೂಕಿ, ಮಾಜಿ ಸಂಸದ ಶಾಹಿದ್‌ ಸಿದ್ದಿಕಿ, ಶಿಯಾ ಗುರು ಕಲ್ಬೆ ಜವಾದ್‌ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು. 

ಯಾವುದೇ ಸನ್ನಿವೇಶದಲ್ಲಿಯೂ ಸಾಮಾಜಿಕ ಮತ್ತು ಕೋಮು ಸಾಮರಸ್ಯ, ಸಹೋದರತ್ವ ಮತ್ತು ಒಗ್ಗಟ್ಟಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಅಭಿಪ್ರಾಯಪಟ್ಟಿದ್ದಾರೆ.

ಎದೆ ತಟ್ಟಿಕೊಳ್ಳುವುದು ಬೇಡ– ಬಿಜೆಪಿ
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಬಿಜೆಪಿಯ ಕಾರ್ಯತಂತ್ರ ಬದಲಾದಂತೆ ಕಾಣಿಸುತ್ತಿದೆ. ಈ ವಿವಾದಕ್ಕೆ ಸಂಬಂಧಿಸಿ ಎದೆ ತಟ್ಟಿಕೊಳ್ಳುವ ರೀತಿ ಹೇಳಿಕೆ ನೀಡಬೇಡಿ ಎಂದು ಬಿಜೆಪಿ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳ ಮುಖಂಡರಿಗೆ ಸೂಚಿಸಲಾಗಿದೆ. 

‘ಅಯೋಧ್ಯೆ ವಿಚಾರದಲ್ಲಿ ಶೀಘ್ರ ಒಳ್ಳೆಯ ಸುದ್ದಿ ಸಿಗಲಿದೆ’ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ವಿವಾದದ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಸೂಚಿಸಿದ್ದಾರೆ. 

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲಾಗುವುದು ಎಂದು ಇತ್ತೀಚಿನವರೆಗೆ ಹೇಳುತ್ತಿದ್ದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು, ‘ಸುಪ್ರೀಂ ಕೋರ್ಟ್‌ ತೀರ್ಪಿಗೆ ಬದ್ಧರಾಗಿ’ ಎಂದು ತಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದಾರೆ. 

‘ಅಯೋಧ್ಯೆ ವಿವಾದದಲ್ಲಿ ತಮ್ಮ ಪರವಾದ ತೀರ್ಪು ಬಂದರೂ ಸಂಭ್ರಮಾಚರಣೆ ಬೇಡ... ಹಾಗೆಯೇ, ಪ್ರತಿಕೂಲ ತೀರ್ಪು ಬಂದರೆ ಹಿಂಸಾಚಾರವೂ ಬೇಡ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. 

ಅಲ್ಪಸಂಖ್ಯಾತ ಸಮುದಾಯದಲ್ಲಿ ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಉತ್ತರ ಪ್ರದೇಶ ಸರ್ಕಾರ ಸೂಚಿಸಿದೆ. 

ಮುಸ್ಲಿಂ ಧರ್ಮ ಗುರುಗಳ ಜತೆಗೆ ಸರ್ಕಾರ ಸಂಪರ್ಕದಲ್ಲಿದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪಾಲಿಸುವ ವಿಚಾರದಲ್ಲಿ ಯಾವುದೇ ಲೋಪ ಉಂಟಾಗದು ಎಂದು ಅವರಿಗೆ ಭರವಸೆ ಕೊಟ್ಟಿದೆ.

ಕಾರ್ತಿಕ ಹುಣ್ಣಿಮೆ ಸವಾಲು

ಕಾರ್ತಿಕ ಪೂರ್ಣಿಮೆಯ ಪ್ರಯುಕ್ತ ಇದೇ 11 ಮತ್ತು 12ರಂದು ಸರಯೂ ನದಿಯಲ್ಲಿ ಪುಣ್ಯಸ್ನಾನ ಮಾಡಲು ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ ಸೇರಲಿದ್ದಾರೆ. ಅಯೋಧ್ಯೆ ನಿವೇಶನ ವಿವಾದದ ಸುಪ್ರೀಂ ಕೋರ್ಟ್‌ ತೀರ್ಪು ಸರಿ ಸುಮಾರು ಇದೇ ಸಮಯದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಹಾಗಾಗಿ, ಭದ್ರತೆ ಒದಗಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.  ಮಂಗಳವಾರ ಆರಂಭವಾ ಗಿರುವ ಕಾರ್ತಿಕ ಮೇಳವು ಇದೇ 12ರಂದು ಮುಕ್ತಾಯವಾಗಲಿದೆ.  ಯಾವುದೇ ಗದ್ದಲ ಆಗದಂತೆ ಮೇಳವನ್ನು ನಡೆಸುವುದು ಪ್ರತಿ ವರ್ಷವೂ ದೊಡ್ಡ ಸವಾಲು.

ಶಾಂತಿಗಾಗಿ ಸರ್ಪಗಾವಲು
* ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಬಹುದಾದ ಆಕ್ಷೇಪಾರ್ಹ ವಿಚಾರಗಳ ಮೇಲೆ ನಿಗಾ ಇರಿಸಲು 16 ಸಾವಿರ ಸ್ವಯಂಸೇವಕರ ನಿಯೋಜನೆ
* ಫೈಜಾಬಾದ್‌ ಜಿಲ್ಲೆಯ 1,600 ಪ್ರದೇಶಗಳಲ್ಲಿ 16 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರ ನಿಯೋಜನೆ. ಅಯೋಧ್ಯೆ ವಿವಾದದ ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಶಾಂತಿ ಕಾಪಾಡುವುದು ಇವರ ಕೆಲಸ
* ಜಿಲ್ಲೆಯಾದ್ಯಂತ ಡಿಸೆಂಬರ್‌ 28ರವರೆಗೆ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಅನುಜ್‌ ಕುಮಾರ್‌ ಝಾ ಆದೇಶ
* ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ‘ಅವಮಾನಕಾರಿ’ ವಿಚಾರ ಪ್ರಕಟಣೆಗೆ ನಿಷೇಧ
* ಸ್ವಯಂಸೇವಕರು ಮಾಹಿತಿ ವಿನಿಮಯ ಮಾಡಿಕೊಳ್ಳುವುದಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ಹಲವು ಗುಂಪುಗಳ ರಚನೆ
* ಕೆಂಪು, ಹಳದಿ, ಹಸಿರು, ನೀಲಿ– ಜಿಲ್ಲೆಯಲ್ಲಿ ನಾಲ್ಕು  ಹಂತಗಳ ಭದ್ರತಾ ವ್ಯವಸ್ಥೆ
* ಕೆಂಪು ಮತ್ತು ಹಳದಿ ವಲಯಗಳಲ್ಲಿ ಕೇಂದ್ರ ಅರೆಸೇನಾ ಪಡೆಯ ಭದ್ರತೆ, ಹಸಿರು ಮತ್ತು ಹಳದಿ ವಲಯಗಳಲ್ಲಿ ರಾಜ್ಯ ಪೊಲೀಸರಿಂದ ಭದ್ರತೆ
* ವಿವಾದಾತ್ಮಕ ಸ್ಥಳ ಕೆಂಪು ವಲಯ ಎಂದು ಘೋಷಣೆ. ಅಯೋಧ್ಯೆಯ ಸುತ್ತಲಿನ ಸುಮಾರು ಏಳು ಕಿಲೋಮೀಟರ್‌ ಪ್ರದೇಶ ಹಳದಿ ವಲಯ
* ಅಯೋಧ್ಯೆಯ ಸುತ್ತಲಿನ ಸುಮಾರು 20 ಕಿ.ಮೀ ಪ್ರದೇಶ ಹಸಿರು ವಲಯ. ಅಯೋಧ್ಯೆಯ ಸುತ್ತಲಿನ ವಲಯ ನೀಲಿ ವಲಯ
* 700 ಸರ್ಕಾರಿ ಶಾಲೆಗಳು, 50 ಉತ್ತರ ಪ್ರದೇಶ ಮಂಡಳಿ ಅನುದಾನಿತ ಶಾಲೆಗಳು, 25 ಸಿಬಿಎಸ್‌ಇ ಶಾಲೆಗಳಲ್ಲಿ ಭದ್ರತಾ ಸಿಬ್ಬಂದಿಗೆ ವಾಸ್ತವ್ಯ

ಪ್ರತಿಕ್ರಿಯಿಸಿ (+)