ಆಯುಷ್ಮಾನ್ ಭಾರತ ಯೋಜನೆ: ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ (ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ) ಯೋಜನೆಯ ಫಲಾನುಭವಿಗಳ ಸಂಖ್ಯೆ ಕೋಟಿ ದಾಟಿದೆ.
2018ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಜಗತ್ತಿನಲ್ಲಿಯೇ ಬೃಹತ್ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆಗೂ ಆಯುಷ್ಮಾನ್ ಭಾರತ ಪಾತ್ರವಾಗಿದೆ.
‘ಕೇವಲ ಎರಡು ವರ್ಷಗಳ ಅವಧಿಯಲ್ಲಿ ಈ ಯೋಜನೆಯಡಿ ಒಂದು ಕೋಟಿ ಜನರು ನೋಂದಣಿ ಮಾಡಿಸಿಕೊಂಡಿರುವುದು ಹೆಮ್ಮೆ ತರುವ ವಿಷಯ. ಇದು ದೇಶದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗೂ ಕಾರಣವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಟ್ವೀಟ್ ಮಾಡಿದ್ದಾರೆ.
‘ವೈದ್ಯರು, ನರ್ಸ್ ಹಾಗೂ ಆರೋಗ್ಯ ಸೇವೆ ಒದಗಿಸುವವರ ಪರಿಶ್ರಮದಿಂದಾಗಿ ಈ ಯೋಜನೆ ಜಗತ್ತಿನಲ್ಲಿಯೇ ದೊಡ್ಡ ಆರೋಗ್ಯ ಸೇವಾ ಕಾರ್ಯಕ್ರಮ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ದೇಶದ ಜನರ, ಅದರಲ್ಲೂ ಬಡವರ ಹಾಗೂ ತುಳಿತಕ್ಕೆ ಒಳಗಾದವರ ವಿಶ್ವಾಸಕ್ಕೂ ಈ ಯೋಜನೆ ಪಾತ್ರವಾಗಿದೆ’ ಎಂದೂ ಹೇಳಿದ್ದಾರೆ.
ಯೋಜನೆಯಡಿ ಇತ್ತೀಚೆಗಷ್ಟೆ ನೋಂದಣಿ ಮಾಡಿಸಿ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೇಘಾಲಯದ ಮಹಿಳೆಯೊಬ್ಬರ ಜೊತೆಗೂ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಯೋಧನ ಪತ್ನಿಯಾಗಿರುವ ಮಹಿಳೆ, ಆಯುಷ್ಮಾನ್ ಭಾರತ ಯೋಜನೆಯಡಿ ಶಿಲ್ಲಾಂಗ್ನ ಆಸ್ಪತ್ರೆಯೊಂದರಲ್ಲಿ ಯಾವುದೇ ಶುಲ್ಕ ನೀಡದೇ ಶಸ್ತ್ರಚಕಿತ್ಸೆ ಒಳಗಾಗಿದ್ದನ್ನು ವಿವರಿಸಿದ್ದಾರೆ. ಮಹಿಳೆಯೊಂದಿಗೆ ನಡೆಸಿದ ಸಂಭಾಷಣೆಯನ್ನು ಪ್ರಧಾನಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.