ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಸಲು ಬಂದರು ಸಿದ್ದರಾಮಯ್ಯ–ಶ್ರೀರಾಮುಲು

ಬಾದಾಮಿ ಬಿಸಿಲಲ್ಲಿ ರಂಗೇರಿದ ಚುನಾವಣಾ ಕಣ
Last Updated 24 ಏಪ್ರಿಲ್ 2018, 7:57 IST
ಅಕ್ಷರ ಗಾತ್ರ

ಬಾದಾಮಿ (ಬಾಗಲಕೋಟ): ಬಾದಾಮಿಯಲ್ಲಿ ಮಂಗಳವಾರ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಸಂಸದ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸಲಿದ್ದಾರೆ. ಉರಿವ ಬಿಸಿಲಿನಲ್ಲಿ ಉಮೇದುವಾರರ ಜೊತೆಗೆ ಕಾರ್ಯಕರ್ತರೂ ಬೆವರು ಹರಿಸುತ್ತಿದ್ದಾರೆ. ಉಷ್ಣಾಂಶ 40 ಡಿಗ್ರಿ ಸೆಂಟಿಗ್ರೇಡ್ ಮುಟ್ಟಿದೆ. ಬಿಸಿಲಿನ ಪ್ರಕೋಪವು ಕಾರ್ಯಕರ್ತರ ಉತ್ಸಾಹಕ್ಕೆ ತುಸು ಕಡಿವಾಣ ಹಾಕಿದೆ.

ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಈಗಾಗಲೇ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್ ತಲುಪಿಸಿದ್ದಾರೆ. ಸಿದ್ದರಾಮಯ್ಯ ಅವರ ನಿರೀಕ್ಷೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಎರಡೂ ಪಕ್ಷಗಳ ನಾಯಕರು ಬನಶಂಕರಿ ದೇಗುಲದ ಸುತ್ತಮುತ್ತ ಅಡ್ಡಾಡುತ್ತಾ ರಾಜಕೀಯ ಚರ್ಚೆ ನಡೆಸುತ್ತಾ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ಇದು ಮಹಾಭಾರತ

‘ಮಹಾಭಾರತದ ಪಾಂಡವರು, ಕೌರವರ ಯುದ್ಧದ ರೀತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯುದ್ಧ ನಡೆಯುತ್ತಿದೆ. ಯಡಿಯೂರಪ್ಪ ಮತ್ತು ಅಮಿತ್ ಶಾ ರೂಪದಲ್ಲಿ ಧರ್ಮ ಮತ್ತು ಸತ್ಯ ಇದೆ’ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.

ಸಮೀಪದ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ‘ವರಿಷ್ಠರ ತೀರ್ಮಾನದಂತೆ ಬಾದಾಮಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸಿದ್ದಾರೆ ಎಂಬುದು ಮುಖ್ಯವಲ್ಲ. ಇಲ್ಲಿ ಬಿಜೆಪಿ ಗೆಲುವು ನಿಶ್ಚಿತ’ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಪಣತೊಟ್ಟಿದ್ದೇನೆ. ಬನಶಂಕರಿ ದೇವಿ ಆಶೀರ್ವಾದದಿಂದ ಬಿಜೆಪಿಗೆ ಗೆಲುವು ನಿಶ್ಚಿತ. ಯಡಿಯೂರಪ್ಪ ಅವರು ಅಧಿಕಾರ ಇಲ್ಲದ ದಿನಗಳಲ್ಲಿಯೂ ಜನರ ಸೇವೆ ಮಾಡಿದ್ದಾರೆ’ ಎಂದು ತಿಳಿಸಿದರು.

ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ಗೆ ಬಂದಿರುವ ಶ್ರೀರಾಮುಲು ಬನಶಂಕರಿ ದೇವಿಯ ದರ್ಶನ ಪಡೆದು, ಬಾದಾಮಿ ಪಟ್ಟಣದ ಹನುಮಾನ್ ಮಂದಿರಕ್ಕೆ ತೆರಳಲಿದ್ದಾರೆ. ಬಸವೇಶ್ವರ ಕ್ರಾಸ್‌ನಿಂದ ತಹಶಿಲ್ದಾರ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಭಕ್ತರಿಗೆ ಸಂಕಷ್ಟ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀರಾಮುಲು ಭೇಟಿ ಹಿನ್ನೆಲೆಯಲ್ಲಿ ಬನಶಂಕರಿ ದೇವಿಯ ದರ್ಶನ ಪಡೆಯುವುದೇ ಸಾರ್ವಜನಿಕರಿಗೆ ದುಸ್ತರವಾಗಿದೆ. ರಾಜ್ಯದ ವಿವಿಧೆಡೆಯಿಂದ ಬಂದಿರುವ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT