ಶುಕ್ರವಾರ, ನವೆಂಬರ್ 22, 2019
19 °C

ಮಸೀದಿ ಧ್ವಂಸ ಪ್ರಕರಣ | ಪ್ರಮುಖರು ಆರೋಪಿಗಳು, ಶೀಘ್ರದಲ್ಲೇ ತೀರ್ಪು?

Published:
Updated:
Prajavani

ಲಖನೌ: ಅಯೋಧ್ಯೆ ನಿವೇಶನ ವಿವಾದವು ಶನಿವಾರ ಇತ್ಯರ್ಥವಾಗಿದೆ. ಆದರೆ, ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬರಲು ಬಾಕಿ ಇದೆ. ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿ, ಉಮಾಭಾರತಿ, ಮುರಳಿಮನೋಹರ ಜೋಷಿ, ಕಲ್ಯಾಣ್‌ ಸಿಂಗ್‌ ಮುಂತಾದವರು ಆರೋಪಿಗಳಾಗಿದ್ದಾರೆ.

1992ರ ಡಿಸೆಂಬರ್‌ 6ರಂದು ಸಾವಿರಾರು ಕರಸೇವಕರು ಅಯೋಧ್ಯೆಯಲ್ಲಿ ಸೇರಿ, ವಿವಾದಿತ ಕಟ್ಟಡವನ್ನು ಧ್ವಂಸಗೊಳಿಸಿದ್ದರು. ಈ ಘಟನೆಯ ಸತತ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಧೀಶರು ನಡೆಸುತ್ತಿದ್ದಾರೆ. ‘ಹೆಚ್ಚಿನ ಸಾಕ್ಷಿದಾರರ ವಿಚಾರಣೆ ಮುಗಿದಿದೆ. ಕೆಲವೇ ತಿಂಗಳಲ್ಲಿ ಈ ವಿಚಾರಣೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಆರೋಪಿಗಳ ಪರ ವಾದಿಸುತ್ತಿರುವ ಕೆಲವು ವಕೀಲರು ತಿಳಿಸಿದ್ದಾರೆ.

ಕಟ್ಟಡ ಧ್ವಂಸ ಘಟನೆ ನಡೆದಾಗ ಕಲ್ಯಾಣ್‌ ಸಿಂಗ್‌ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅವರು ಪ್ರಕರಣದ ಆರೋಪಿಯಾಗಿದ್ದರೂ ಅವರ ವಿರುದ್ಧ ಎಲ್ಲರಿಗಿಂತ ಕೊನೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರು ರಾಜಸ್ಥಾನದ ರಾಜ್ಯಪಾಲರಾಗಿದ್ದುದರಿಂದ ಪ್ರಕರಣ ದಾಖಲಿಸುವುದರಿಂದ ಅವರಿಗೆ ಸಾಂವಿಧಾನಿಕ ರಕ್ಷಣೆ ಲಭಿಸಿತ್ತು. ಅವರ ಅವಧಿ ಮುಕ್ತಾಯಗೊಂಡ ಬಳಿಕ ಪ್ರಕರಣ ದಾಖಲಿಸಲಾಗಿದೆ.

ಕರಸೇವಕರು ವಿವಾದಿತ ಕಟ್ಟಡವನ್ನು ಕೆಡವಿದ ಕೆಲವೇ ದಿನಗಳಲ್ಲಿ ರಾಮ ಜನ್ಮಭೂಮಿ ಪೊಲೀಸ್‌ ಠಾಣೆಯಲ್ಲಿ ಎರಡು ಎಫ್‌ಐಆರ್‌ಗಳು, ಅದಾಗಿ ಕೆಲವು ದಿನಗಳ ಬಳಿಕ ಇನ್ನೂ 47 ಎಫ್‌ಐಆರ್‌ಗಳು ದಾಖಲಾಗಿದ್ದವು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ಬಳಿಕ, ಆ ಸಂಸ್ಥೆಯು ಎಲ್ಲಾ 40 ಆರೋಪಿಗಳ ವಿರುದ್ಧ ಒಂದೇ ಆರೋಪಪಟ್ಟಿಯನ್ನು ಸಲ್ಲಿಸಿತ್ತು. ಆದರೆ ತಮ್ಮ ವಿರುದ್ದದ ಎಫ್‌ಐಆರ್‌ನ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸ ಅಧಿಸೂಚನೆ ಹೊರಡಿಸದೇ ಇದ್ದುದರಿಂದ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಬೇಕು ಎಂದು ಬಿಜೆಪಿ ನಾಯಕರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅದನ್ನು ಕೋರ್ಟ್‌ ಮಾನ್ಯ ಮಾಡಿತ್ತು.

ರಾಯ್‌ಬರೇಲಿ ಹಾಗೂ ಲಖನೌ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ಈ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದುದರಿಂದ ವಿಚಾರಣೆಯಲ್ಲಿ ವಿಳಂಬವಾಗಿತ್ತು. ಆ ನಂತರ ಸುಪ್ರೀಂ ಕೋರ್ಟ್‌ ಎಲ್ಲಾ ಪ್ರಕರಣಗಳನ್ನೂ ಲಖನೌ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸೂಚಿಸಿತ್ತು. ಜೊತೆಗೆ ಬಿಜೆಪಿ ಮುಖಂಡರ ವಿರುದ್ಧದ ಆರೋಪಗಳನ್ನು ಕೈಬಿಡುವ ಹೈಕೋರ್ಟ್‌ನ ಆದೇಶವನ್ನು ಸಹ ರದ್ದುಗೊಳಿಸಿತ್ತು.

‘ಪ್ರಸಕ್ತ, ನಿತ್ಯ ವಿಚಾರಣೆ ನಡೆಯುತ್ತಿರುವುದರಿಂದ, ಶೀಘ್ರದಲ್ಲೇ ತೀರ್ಪು ಬರುವ ನಿರೀಕ್ಷೆ ಇದೆ’ ಎಂದು ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)