ಸುಧೀರ್‌ ಶ್ರೀರಾಮ್‌ಗೆ ಜಾಮೀನು

7
ಕೇಂದ್ರ ಬೊಕ್ಕಸಕ್ಕೆ ₹ 1,200 ಕೋಟಿ ವಂಚನೆ ಆರೋಪ

ಸುಧೀರ್‌ ಶ್ರೀರಾಮ್‌ಗೆ ಜಾಮೀನು

Published:
Updated:

ಬೆಂಗಳೂರು: ಅಂತರರಾಷ್ಟ್ರೀಯ ಲೋಹ ರಫ್ತು ವಹಿವಾಟಿನಲ್ಲಿ ಕೇಂದ್ರದ ಬೊಕ್ಕಸಕ್ಕೆ ₹ 1,200 ಕೋಟಿ ವಂಚಿಸಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಸುಧೀರ್ ಶ್ರೀರಾಮ್‌ಗೆ ನಗರದ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.

ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಸುಧೀರ್‌ ಶ್ರೀರಾಮ್‌ 2018ರ ಫೆಬ್ರುವರಿ 23ರಂದು ಸಿಬಿಐ ಪೊಲೀಸರಿಗೆ ಶರಣಾಗಿದ್ದರು.

ದುಬೈನಿಂದ 23ರಂದು ಸಂಜೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಸುಧೀರ್ ಅವರನ್ನು ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದು ನಂತರ ಸಿಬಿಐ ಪೊಲೀಸರಿಗೆ ಒಪ್ಪಿಸಿದ್ದರು.

ಅಲ್ಲಿಂದ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶ ಸುಲ್ತಾನ್‌ ಪುರಿ ಸುಧೀರ್‌ ಮಾರ್ಚ್‌ 1ರವರೆಗೆ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದ್ದರು.

ಬಳಿಕ ಸುಧೀರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಸಿಬಿಐ ಪೊಲೀಸರು ದೆಹಲಿಗೆ ಕರೆದೊಯ್ದಿದ್ದರು. ವಿಚಾರಣೆ ವೇಳೆ ಸುಧೀರ್ ಪರ ವಕೀಲ ಕಿರಣ್‌ ಜವಳಿ, ‘ಸುಧೀರ್ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ (ಕಾಫಿ ಪೋಸಾ) ಕಾಯ್ದೆ–1974ರ ಅನ್ವಯ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ’ ಎಂದು ಹೇಳಿದ್ದರು.

ಲೋಹದ ಸರಕುಗಳ ಸಾಗರೋತ್ತರ ರಫ್ತು ಉದ್ಯಮಕ್ಕೆ ಸಂಬಂಧಿಸಿದಂತೆ ಸುಧೀರ್ ಶ್ರೀರಾಮ್‌, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾರೆ.

ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು:
ಸುಧೀರ್ ಶ್ರೀರಾಮ್‌, ಮೆಸರ್ಸ್‌ ಫ್ಯೂಚರ್ ಮೆಟಲ್ಸ್‌ ಪ್ರೈವೇಟ್ ಲಿಮಿಟೆಡ್‌ (ಎಫ್‌ಎಂಪಿಎಲ್‌) ಹಾಗೂ ಫ್ಯೂಚರ್ ಎಕ್ಸಿಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಫ್‌ಇಐಪಿಎಲ್‌) ಕಂಪನಿಗಳು 2008ರಲ್ಲಿ ನಿಕ್ಕಲ್ ಮತ್ತು ತಾಮ್ರವನ್ನು ಸರ್ಕಾರಿ ಸ್ವಾಮ್ಯದ ಸ್ಪೈಸಸ್‌ ಟ್ರೇಡಿಂಗ್‌ ಕಾರ್ಪೊರೇಷನ್‌ ಲಿಮಿಟೆಡ್‌ ಕಂಪೆನಿಗೆ (ಎಸ್‌ಟಿಸಿಎಲ್‌) ಮಾರಾಟ ಮಾಡಿದ್ದವು.

‘ಈ ವ್ಯವಹಾರದಲ್ಲಿ ಸುಧೀರ್, ಎಫ್‌ಎಂಪಿಎಲ್‌ ಮತ್ತು ಎಫ್‌ಇಐಪಿಎಲ್‌ ಕಂಪನಿಗಳು ಎಸ್‌ಟಿಪಿಎಲ್‌ಗೆ ತಾಮ್ರದ ಬದಲು ಕಳಪೆ ಲೋಹ ನೀಡಿ ಮೋಸ ಮಾಡಿವೆ. ಇದರಿಂದ ಕೇಂದ್ರದ ಬೊಕ್ಕಸಕ್ಕೆ ₹ 1,200 ಕೋಟಿ ನಷ್ಟವಾಗಿದೆ’ ಎಂಬ ಆರೋಪದಡಿ ಎಸ್‌ಟಿಸಿಎಲ್‌, ಹೈಗ್ರೌಂಡ್ಸ್‌ ಠಾಣೆಯಲ್ಲಿ 2009ರ ಅಕ್ಟೋಬರ್ 19ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿತು.

ಪ್ರಕರಣದ ದೊಡ್ಡ ಮೊತ್ತದ್ದಾಗಿದೆ ಎಂಬ ಕಾರಣಕ್ಕೆ ಇದನ್ನು ಸಿಬಿಐಗೆ ವರ್ಗಾಯಿಸಲಾಯಿತು.

2013ರ ಏಪ್ರಿಲ್‌ 16ರಂದು ನಗರದ ಸಿಬಿಐ ನ್ಯಾಯಾಲಯ ಸುಧೀರ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್‌ ಹೊರಡಿಸಿತು. ತದನಂತರ 2013ರ ಮೇ 23ರಂದು ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಆದೇಶಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !