ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಕೋಟ್‌ ಶಿಬಿರಗಳು ಮತ್ತೆ ಸಕ್ರಿಯ: ರಾವತ್‌

Last Updated 23 ಸೆಪ್ಟೆಂಬರ್ 2019, 19:18 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ವಾಯುಪಡೆಯು ಈ ಫೆಬ್ರುವರಿಯಲ್ಲಿ ವಾಯುದಾಳಿ ನಡೆಸಿ ನಾಶ ಮಾಡಿದ್ದ ಬಾಲಾಕೋಟ್‌ನ ಉಗ್ರರ ಶಿಬಿರಗಳನ್ನು ಪಾಕಿಸ್ತಾನವು ಮತ್ತೆ ಸಕ್ರಿಯಗೊಳಿಸಿದೆ. ಸುಮಾರು 500 ಉಗ್ರರು ಭಾರತದೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸೇನೆಯ ಮುಖ್ಯಸ್ಥ ಬಿಪಿನ್‌ ರಾವತ್‌ ಹೇಳಿದ್ದಾರೆ.

ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಉಗ್ರರು ದೇಶದೊಳಕ್ಕೆ ನುಸುಳದಂತೆ ತಡೆಯಲಾಗಿದೆ. ಉಗ್ರರ ಶಿಬಿರಗಳನ್ನು ಪಾಕಿಸ್ತಾನವು ಪುನಶ್ಚೇತನಗೊಳಿಸಿದೆ ಎಂಬುದು ನಮ್ಮ ವಾಯುಪಡೆಯು ನಡೆಸಿದ ದಾಳಿಯು ಯಶಸ್ವಿಯಾಗಿತ್ತು ಎಂಬುದಕ್ಕೆ ಪುರಾವೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಾಲಾಕೋಟ್‌ ಶಿಬಿರ ನಾಶವಾದ ಬಳಿಕ ಜನರು ಅಲ್ಲಿಂದ ದೂರ ಹೋಗಿದ್ದರು. ತೀರಾ ಇತ್ತೀಚೆಗೆ ಈ ಶಿಬಿರಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ‘ಯುವ ನಾಯಕರ ತರಬೇತಿ ಘಟಕ’ವನ್ನು ಉದ್ಘಾಟಿಸಿದ ಬಳಿಕ ರಾವತ್‌ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು.

ಉಗ್ರರ ಶಿಬಿರಗಳು ಮತ್ತೆ ತಲೆ ಎತ್ತಿರುವುದರಿಂದ ಬಾಲಾಕೋಟ್‌ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಸಲಾಗುವುದೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.

‘ಅದನ್ನೇ ಯಾಕೆ ಪುನರಾವರ್ತಿಸಬೇಕು? ಮೊದಲು ನಾವು ಬೇರೇನೋ ಮಾಡಿದ್ದೆವು. ಬಳಿಕ ಬಾಲಾಕೋಟ್‌ ದಾಳಿ ಆಯಿತು. ನಾವು ಏನು ಮಾಡಬಹುದು ಎಂಬುದನ್ನು ಆ ಕಡೆಯವರು ಯೋಚಿಸುತ್ತಲೇ ಇರಲಿ. ನಾವು ಏನು ಮಾಡಲಿದ್ದೇವೆ ಎಂಬುದನ್ನು ಈಗ ಹೇಳುವುದು ಯಾಕೆ? ಈವರೆಗೆ ಮಾಡಿದ್ದಕ್ಕಿಂತ ಆಚಿನದನ್ನು ಯಾಕೆ ಮಾಡಬಾರದು’ ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಪರಿಸ್ಥಿತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಕಾಶ್ಮೀರದಲ್ಲಿ ಎಲ್ಲವೂ ಸ್ಥಗಿತವಾಗಿದೆ ಎಂದು ಬಿಂಬಿಸಲು ಉಗ್ರರು ಯತ್ನಿಸುತ್ತಿದ್ದಾರೆ. ಆದರೆ, ಅಲ್ಲಿ ದೈನಂದಿನ ಚಟುವಟಿಕೆಗಳಿಗೆ ಯಾವುದೇ
ತೊಂದರೆ ಆಗಿಲ್ಲ ಎಂದು ಅವರು ಹೇಳಿದರು.

ಗಡಿಯಲ್ಲಿ ಭದ್ರತೆ ಹೆಚ್ಚಳ

ಜಮ್ಮು–ಕಾಶ್ಮೀರಕ್ಕೆ ಉಗ್ರರು ನುಸುಳುವುದನ್ನು ತಡೆಯಲು ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಗಡಿಯಾಚೆಗಿನ ಉಗ್ರರ ಶಿಬಿರಗಳಲ್ಲಿ 450–500 ಉಗ್ರರು ಕಾಯುತ್ತಿದ್ದಾರೆ. ದೇಶದೊಳಕ್ಕೆ ನುಸುಳಿ ಕಾಶ್ಮೀರದಲ್ಲಿ ಅಶಾಂತಿ ಉಂಟು ಮಾಡುವುದು ಮತ್ತು ಇತರ ದೊಡ್ಡ ನಗರಗಳ ಪ್ರಮುಖ ಸಂಸ್ಥೆಗಳ ಮೇಲೆ ದಾಳಿ ನಡೆಸುವುದು ಇವರ ಉದ್ದೇಶ ಎಂದು ಗುಪ್ತಚರ ಮಾಹಿತಿ ಉಲ್ಲೇಖಿಸಿ ಸೇನೆಯ ಮೂಲಗಳು ತಿಳಿಸಿವೆ.

ಈ ಎಲ್ಲ ಉಗ್ರರು ಕಠಿಣ ತರಬೇತಿ ಪಡೆದವರು. ಜೈಷ್‌–ಎ–ಮೊಹಮ್ಮದ್‌ ಸಂಘಟನೆಯು ಇವರಿಗೆ ತರಬೇತಿ ಕೊಟ್ಟಿದೆ ಎನ್ನಲಾಗಿದೆ.ಉಗ್ರರ ನುಸುಳುವಿಕೆ ತಡೆಯಲು ಗಡಿಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT