ಹಿರಿಯ ರಂಗಕರ್ಮಿ ಶ್ರೀಪತಿ ಬಲ್ಲಾಳ ಇನ್ನು ನೆನಪು

ಬುಧವಾರ, ಮೇ 22, 2019
29 °C

ಹಿರಿಯ ರಂಗಕರ್ಮಿ ಶ್ರೀಪತಿ ಬಲ್ಲಾಳ ಇನ್ನು ನೆನಪು

Published:
Updated:
Prajavani

ಬೆಂಗಳೂರು: ದಕ್ಷಿಣ ಕನ್ನಡದ‌‌ ಉಡುಪಿಯ ಅಂಬಲಪಾಡಿಯಿಂದ ವಲಸೆ ಹೋಗಿ ಮುಂಬೈನಲ್ಲಿ ಹವ್ಯಾಸಿ ರಂಗಭೂಮಿ ಕಟ್ಟಿ ಬೆಳೆಸಲು ಶ್ರಮಿಸಿದ ಪ್ರಮುಖರಲ್ಲಿ ಒಬ್ಬರಾದ ರಂಗಕರ್ಮಿ ಶ್ರೀಪತಿ ಬಲ್ಲಾಳ (91) ಇನ್ನು ನೆನಪು ಮಾತ್ರ. 

ವಯೋಸಹಜ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದ ಶ್ರೀಪತಿ ಬಲ್ಲಾಳ ಅವರು, ಕೋರಮಂಗಲದ ತಮ್ಮ ಮನೆಯಲ್ಲಿ ಶುಕ್ರವಾರ ಇಹಲೋಕದ ವ್ಯಾಪಾರ ಮುಗಿಸಿದ್ದಾರೆ. ಬಸವನಗುಡಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

ಮೃತರಿಗೆ ಪತ್ನಿ ಖ್ಯಾತ ನಟಿ ಕಿಶೋರಿ ಬಲ್ಲಾಳ ಮತ್ತು ನಟಿ, ಲೇಖಕಿಯಾದ ಸೊಸೆ ಅಹಲ್ಯಾ ಬಲ್ಲಾಳ ಇದ್ದಾರೆ. ಬಲ್ಲಾಳರ ಪುತ್ರ ರಂಗಕರ್ಮಿ ಸಂತೋಷ್‌ ಬಲ್ಲಾಳ ಹತ್ತು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. 

ಧೀಮಂತ ನಟ, ನಿರ್ದೇಶಕ ಮತ್ತು ಚತುರ ಸಂಘಟಕರಾಗಿ ಬಲ್ಲಾಳ ಅವರದು ಮುಂಬಯಿಯ ಹವ್ಯಾಸಿ ರಂಗಭೂಮಿಯಲ್ಲಿ ದೊಡ್ಡ ಹೆಸರು. ಇವರು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳರ ಸಹೋದರರಾದ ಇವರು, ರಾಮದಾಸ್‌ ಬಲ್ಲಾಳ ಮತ್ತು ಕಲ್ಯಾಣಿ ದಂಪತಿಯ ಏಳು ಗಂಡು ಮತ್ತು ಆರು ಹೆಣ್ಣು ಮಕ್ಕಳ ದೊಡ್ಡ ಸಂಸಾರದಲ್ಲಿ ಒಬ್ಬರು. ಕಾಲೇಜು ಶಿಕ್ಷಣ ಪಡೆಯಲು 1947 ಸುಮಾರಿಗೆ ಮುಂಬೈಗೆ ಹೋಗಿದ್ದ ಅವರು, ರಂಗಚಟುವಟಿಕೆಯ ಆಸಕ್ತಿಯಿಂದಾಗಿ ಅಲ್ಲಿಯೇ ನಾಲ್ಕು ದಶಕಗಳ ಕಾಲ ನೆಲೆ ನಿಂತಿದ್ದರು.

ಜೀವನದ ಸಂಧ್ಯಾಕಾಲವನ್ನು ತಾಯ್ನಾಡಿನಲ್ಲೇ ಕಳೆಯಲು ಶ್ರೀಪತಿ ಅವರು ಪತ್ನಿ ಕಿಶೋರಿ ಅವರ ಜೊತೆ 25 ವರ್ಷಗಳ ಹಿಂದೆಯೇ ಮುಂಬೈನಿಂದ ಬೆಂಗಳೂರಿಗೆ ಮರಳಿ ಬಂದಿದ್ದರು. ಅದಕ್ಕೂ ಮೊದಲು 15 ವರ್ಷ ಕಾಲ ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಬೆಂಗಳೂರಿನ ನಟರಂಗ ಸೇರಿ ಅನೇಕ ರಂಗ ತಂಡಗಳು ಮತ್ತು ಮುಂಬೈನಲ್ಲಿ ನಾಟಕೋತ್ಸವ ಜನಪ್ರಿಯವಾಗಲು ಸಾಕಷ್ಟು ಶ್ರಮಿಸಿದ್ದರು.

ತಮ್ಮ 16ನೇ ವಯಸ್ಸಿನಲ್ಲೇ ರಂಗ ಪ್ರವೇಶ ಮಾಡಿದ ಶ್ರೀಪತಿ ಅವರು ಕಿಶೋರಿಯವರ ಜತೆ ಕುವೆಂಪು ಅವರ ‘ಬಿರುಗಾಳಿ’ ನಾಟಕದಲ್ಲಿ ಮೊದಲ ಬಾರಿಗೆ ಅಭಿನಯಿಸಿದರು. ವಸಂತ ಕವಲಿ ನಿರ್ದೇಶಿಸಿದ ‘ಎನ್ನ ಮುದ್ದಿನ ಮುದ್ದಣ’ ನಾಟಕದಲ್ಲಿ ಶ್ರೀಪತಿ–ಕಿಶೋರಿ ಜೋಡಿ ಮುದ್ದಣ ಮನೋರಮೆಯಾಗಿ ರಂಗರಸಿಕರ ಮನಸೆಳೆದಿತ್ತು.

ಲಂಕೇಶರ ‘ಸಂಕ್ರಾಂತಿ’, ವ್ಯಾಸರಾಯ ಬಲ್ಲಾಳರ ‘ಮುಳ್ಳಲ್ಲಿದೆ ಮಂದಾರ’, ‘ಗಿಳಿಯು ಪಂಜರದೊಳಿಲ್ಲ’, ಮರಾಠಿಯ ‘ಪದ್ಮಶ್ರೀ ದುಂಡೀರಾಜ್‌’, ಕಾಮತರ ‘ಮಾತೃದೇವೋಭವ’, ಬಿ.ಎ.ಸನದಿಯವರ ‘ನೀಲಾಂಬಿಕೆ’ ಇವೇ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಶ್ರೀಪತಿಯವರದ್ದಾಗಿದೆ. ‘ತರಂಗ’ ತಂಡ ಕಟ್ಟಿ, ಆ ಮೂಲಕ ಹಲವು ನಾಟಕಗಳನ್ನು ರಾಜ್ಯದಾದ್ಯಂತ ಪ್ರದರ್ಶನ ಮಾಡಿಸಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !