ರಾಹುಲ್‌ ಪಾಲ್ಗೊಂಡಿದ್ದ ರ‍್ಯಾಲಿ: ಬಲೂನ್‌ ಸ್ಫೋಟ ಸೃಷ್ಟಿಸಿದ ಆತಂಕ

7

ರಾಹುಲ್‌ ಪಾಲ್ಗೊಂಡಿದ್ದ ರ‍್ಯಾಲಿ: ಬಲೂನ್‌ ಸ್ಫೋಟ ಸೃಷ್ಟಿಸಿದ ಆತಂಕ

Published:
Updated:

ಜಬಲ್ಪುರ: ಪಕ್ಷದ ಕಾರ್ಯಕರ್ತರು ತಂದಿದ್ದ ‘ಆರತಿ’ಯ ಬೆಂಕಿ ತಾಗಿದ್ದರಿಂದ ಬಲೂಲ್‌ಗಳು ಸ್ಫೋಟಗೊಂಡ ಪರಿಣಾಮ ಇಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ರ‍್ಯಾಲಿಯಲ್ಲಿ ಕೆಲಕಾಲ ಗೊಂದಲ, ಆತಂಕ ಮನೆ ಮಾಡಿತ್ತು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿಗೆ ಬೆಳಗುವ ಸಲುವಾಗಿ ಕಾರ್ಯಕರ್ತರು ಆರತಿ ತಂದಿದ್ದರು.  ಕಾರ್ಯಕರ್ತರೊಬ್ಬರು ಹಿಡಿದುಕೊಂಡಿದ್ದ ಬಲೂನ್‌ಗಳ ಗೊಂಚಲಿಗೆ ಈ ಆರತಿಯ ಬೆಂಕಿ ತಾಗಿ, ಬಲೂನ್‌ಗಳು ಸ್ಫೋಟಗೊಂಡವು.

ಸ್ಫೋಟದಿಂದಾಗಿ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದರು. ಸ್ಫೋಟದ ಸ್ಥಳದಿಂದ ಕೆಲವೇ ಮೀಟರ್‌ ದೂರದಲ್ಲಿ ತೆರೆದ ಜೀಪ್‌ನಲ್ಲಿದ್ದ ರಾಹುಲ್‌ ಗಾಂಧಿ ಈ ಘಟನೆಯಿಂದ ಬೆಚ್ಚಿ ಬಿದ್ದರು. ನಂತರ, ವಿಷಯ ತಿಳಿದು ನಿರಾಳರಾದರು.

ಮುಖಂಡರಾದ ಕಮಲನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ ಸಹ ಅದೇ ಜೀಪ್‌ನಲ್ಲಿದ್ದರು. ಯಾರಿಗೂ ಈ ಅವಘಡದಿಂದಾಗಿ ತೊಂದರೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದೊಂದು ಭದ್ರತಾ ಲೋಪ ಎಂಬ ಆರೋಪಗಳು ಕೇಳಿ ಬಂದವು. ಆದರೆ, ಈ ಆರೋಪಗಳನ್ನು ತಳ್ಳಿ ಹಾಕಿರುವ ಎಸ್ಪಿ ಅಮಿತ್‌ ಸಿಂಗ್‌, ‘ಕಾಂಗ್ರೆಸ್‌ ಕಾರ್ಯಕರ್ತರೇ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ನಿಯಮದಂತೆ ರ‍್ಯಾಲಿಗೆ ಭದ್ರತೆ ಒದಗಿಸಲಾಗಿತ್ತು’ ಎಂದಿದ್ದಾರೆ.

‘ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರು ಬಲೂನ್‌ಗಳನ್ನು ಹಿಡಿದುಕೊಳ್ಳಬಾರದು, ತಮ್ಮ ನಾಯಕರಿಗೆ ಆರತಿ ಬೆಳಗಬಾರದು ಎಂಬ ನಿಬಂಧನೆಗಳೇನೂ ಇಲ್ಲ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !