ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರನ್ನು ಬೆದರಿಸುವ 193 ಜನರ ಗುರುತು

ಎರಡು ದಿನಗಳಲ್ಲಿ ಹೊಸ ಮತದಾರರ ಕೈಗೆ ಗುರುತಿನ ಚೀಟಿ: ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ
Last Updated 28 ಮಾರ್ಚ್ 2018, 11:05 IST
ಅಕ್ಷರ ಗಾತ್ರ

ಬೀದರ್: ‘ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಬೆದರಿಕೆ ಒಡ್ಡಬಹುದಾದ 193 ಜನರನ್ನು ಗುರುತಿಸಲಾಗಿದ್ದು, ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಹೇಳಿದರು.

ಸೆಕ್ಟರ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಈಗಾಗಲೇ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. 68 ಪ್ರದೇಶಗಳನ್ನು ಧಾರ್ಮಿಕ ಪ್ರದೇಶಗಳು ಎಂದು ಗುರುತಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿ 48 ಹೆಚ್ಚುವರಿ ಮತಗಟ್ಟೆ ಕೇಂದ್ರಗಳು ಒಳಗೊಂಡಂತೆ ಜಿಲ್ಲೆಯಲ್ಲಿ 1,497 ಮತಗಟ್ಟೆ ಕೇಂದ್ರಗಳು ಇರಲಿವೆ. ಇವುಗಳಲ್ಲಿ 288 ಅತಿಸೂಕ್ಷ್ಮ, 416 ಸೂಕ್ಷ್ಮ ಹಾಗೂ 793 ಸಾಮಾನ್ಯ ಮತಗಟ್ಟೆ ಕೇಂದ್ರಗಳು ಸೇರಿವೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 259, ಹುಮನಾಬಾದ್ 260, ಬೀದರ್ ದಕ್ಷಿಣ 228, ಬೀದರ್ 233, ಭಾಲ್ಕಿ 264 ಹಾಗೂ ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ 253 ಮತಗಟ್ಟೆಗಳ ಕೇಂದ್ರಗಳು ಇರಲಿವೆ’ ಎಂದರು.

‘ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ 83 ಸಾವಿರ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಹೊಸ ಮತದಾರರ ಗುರುತಿನ ಚೀಟಿಗಳು ಈಗಾಗಲೇ ಮುದ್ರಣಗೊಂಡಿವೆ. ಎರಡು ದಿನಗಳಲ್ಲಿ ಮತದಾರರ ಕೈಸೇರಲಿವೆ’ ಎಂದು ಹೇಳಿದರು.

‘ಆರೂ ವಿಧಾನಸಭಾ ಕ್ಷೇತ್ರಗಳು ಸೇರಿ ಜಿಲ್ಲೆಯಲ್ಲಿ 13,02,566 ಮತದಾರರು ಇದ್ದಾರೆ. ಇವರಲ್ಲಿ 6,79,117 ಪುರುಷ ಹಾಗೂ 6,23,385 ಮಹಿಳಾ ಮತದಾರರು ಸೇರಿದ್ದಾರೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 2,21,247 (1,16.945 ಪುರುಷರು, 1,04,287 ಮಹಿಳೆಯರು), ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ 2,33,707 (1,21,974 ಪುರುಷರು, 1,11,721 ಮಹಿಳೆಯರು), ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1,96,725 (1,01,990 ಪುರುಷರು, 94,732 ಮಹಿಳೆಯರು), ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ 2,14,797 (1,09,997 ಪುರುಷರು, 1,04,794 ಮಹಿಳೆಯರು), ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2,22,672 (1,17,041 ಪುರುಷರು, 1,05,623 ಮಹಿಳೆಯರು) ಹಾಗೂ ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ 2,13,418 (1,11,190 ಪುರುಷರು, 1,02,228 ಮಹಿಳೆಯರು) ಮತದಾರರು ಇದ್ದಾರೆ’ ಎಂದು ಮಾಹಿತಿ ನೀಡಿದರು.

‘ಮತಗಟ್ಟೆ ಕೇಂದ್ರಗಳಲ್ಲಿ ಮತದಾರರಿಗೆ ಕುಡಿಯುವ ನೀರು, ನೆರಳು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು. ಅಂಗವಿಕಲರಿಗಾಗಿ ರ‍್ಯಾಂಪ್ ನಿರ್ಮಾಣ ಮಾಡಲಾಗುವುದು. ಶೇ 40ಕ್ಕೂ ಹೆಚ್ಚು ಅಂಗವೈಕಲ್ಯ ಹೊಂದಿದವರು ಗಾಲಿ ಕುರ್ಚಿ ಹಾಗೂ ಸಹಾಯಕರ ನೆರವನ್ನು ಪಡೆಯಬಹುದು’ ಎಂದು ತಿಳಿಸಿದರು.‘ಸೆಕ್ಟರ್ ಅಧಿಕಾರಿಗಳು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಜಾಗೃತಿ ಮೂಡಿಸಲಿದ್ದಾರೆ. ವಿವಿ ಪ್ಯಾಟ್ ಪ್ರಾತ್ಯಕ್ಷಿಕೆಯನ್ನೂ ನಡೆಸಿಕೊಡಲಿದ್ದಾರೆ’ ಎಂದು ಹೇಳಿದರು.‘ಚುನಾವಣೆ ಕಾರಣ ಸರ್ಕಾರಿ ನೌಕರರು ಎರಡು ತಿಂಗಳು ರಜೆ ಪಡೆಯುವಂತಿಲ್ಲ. ಈಗಾಗಲೇ ಚುನಾವಣಾ ಕಾರ್ಯಕ್ಕೆ ಬೇಕಾಗುವ 12 ಸಾವಿರ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಅವರಿಗೆ ಬುಧವಾರ ನೇಮಕಾತಿ ಆದೇಶ ಕೊಡಲಾಗುವುದು’ ಎಂದು ತಿಳಿಸಿದರು.

17ಕ್ಕೆ ಅಧಿಸೂಚನೆ: ವಿಧಾನಸಭಾ ಚುನಾವಣೆಗೆ ಏಪ್ರಿಲ್ 17 ರಂದು ಅಧಿಸೂಚನೆ ಹೊರಬೀಳಲಿದೆ. ಏಪ್ರಿಲ್ 24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 27 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ. ಮೇ 12 ರಂದು ಮತದಾನ ನಡೆಯಲಿದೆ. ಮೇ 15 ರಂದು ಮತ ಎಣಿಕೆ ನಡೆಯಲಿದೆ. ಮೇ 18 ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿ ಇದ್ದರು.

ದೂರು ನೀಡಲು ವ್ಯಾಟ್ಸ್ಆ್ಯಪ್ ಸಂಖ್ಯೆ:
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಜಿಲ್ಲಾಡಳಿತದ ವ್ಯಾಟ್ಸ್ಆ್ಯಪ್ ಸಂಖ್ಯೆ 7892686501ಗೆ ದೂರು ಕೊಡಬಹುದು.ನೀತಿ, ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬಂದರೆ ಈ ಸಂಖ್ಯೆಗೆ ಮಾಹಿತಿ ಕೊಡಬಹುದು. ಆಯಾ ತಾಲ್ಲೂಕು ಕೇಂದ್ರಗಳಲ್ಲೂ ದೂರು ದಾಖಲಿಸಲು ಬುಧವಾರ ವ್ಯಾಟ್ಸ್ಆ್ಯಪ್ ಸಂಖ್ಯೆ ನೀಡಲಾಗುವುದು.

ಕ್ಯಾಂಟೀನ್ ಇರುತ್ತೆ, ಇಂದಿರಾ ಹೆಸರು ಇರಲ್ಲ: ಚುನಾವಣೆ ಘೋಷಣೆಯಾದ ಕಾರಣ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಆದರೆ, ಅವುಗಳಿಗೆ ಇಂದಿರಾ ಅವರ ಹೆಸರು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.ಇಂದಿರಾ ಅವರು ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದರಿಂದ ಕ್ಯಾಂಟೀನ್ ಮೇಲಿನ ಅವರ ಹೆಸರನ್ನು ಚುನಾವಣೆ ಮುಗಿಯುವವರೆಗೂ ಮುಚ್ಚಲಾಗುವುದು ಎಂದು ತಿಳಿಸಿದರು.

ಬ್ಯಾಂಕ್ ವಹಿವಾಟಿನ ಮೇಲೆ ನಿಗಾ: ಚುನಾವಣೆ ನಿಮಿತ್ತ ಬ್ಯಾಂಕ್‌ಗಳ ವಹಿವಾಟಿನ ಮೇಲೆ ನಿಗಾ ಇಡಲಾಗುವುದು. ದೊಡ್ಡ ಮೊತ್ತದ ಹಣ ಡ್ರಾ ಆದಲ್ಲಿ ಆ ಬಗೆಗೆ ಜಿಲ್ಲಾಡಳಿತಕ್ಕೆ ಮಾಹಿತಿ ಕೊಡಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ.ಆರ್‌ಟಿಜಿಎಸ್‌ ಹಾಗೂ ಎನ್‌ಇಎಫ್‌ಟಿ ಮೂಲಕ ಮತದಾರರ ಖಾತೆಗೆ ಹಣ ಜಮಾ ಮಾಡುವ ಸಾಧ್ಯತೆ ಇರುವ ಕಾರಣ ಜನಧನ ಖಾತೆ ಹಾಗೂ ಈವರೆಗೆ ಶೂನ್ಯ ಮೊತ್ತ ಹೊಂದಿದ್ದ ಖಾತೆಗಳಿಗೆ ಸಾವಿರ, ಎರಡು ಸಾವಿರ ಹಣ ಜಮೆಯಾದರೂ ಬ್ಯಾಂಕ್ ಅಧಿಕಾರಿಗಳು ಮಾಹಿತಿ ಕೊಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಾಹನ, ಅತಿಥಿಗೃಹಗಳು ವಶಕ್ಕೆ

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಪ್ರಯುಕ್ತ ನಗರದಲ್ಲಿರುವ ಸರ್ಕಾರಿ ಅತಿಥಿಗೃಹಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಯಾ ತಾಲ್ಲೂಕುಗಳಲ್ಲಿರುವ ಅತಿಥಿಗೃಹಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸರ್ಕಾರಿ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು. ವಾಹನಗಳ ಸಂಖ್ಯೆಯೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಈ ಕುರಿತು ಈಗಾಗಲೇ ಸೂಚನೆ ಕೊಡಲಾಗಿದೆ. ನಗರದಲ್ಲಿನ 56 ಸರ್ಕಾರಿ ಫಲಕಗಳಲ್ಲಿನ ಜಾಹೀರಾತು ಪೋಸ್ಟರ್‌, ಬ್ಯಾನರ್‌ಗಳನ್ನು ತೆರವುಗೊಳಿಸಿ, ಅವುಗಳ ಮೇಲೆ ಮತದಾನ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಸಭೆ, ಸಮಾರಂಭಕ್ಕೆ ಅನುಮತಿ ಕಡ್ಡಾಯ

ವಿಧಾನಸಭೆ ಚುನಾವಣೆ ಘೋಷಣೆಯಾದ ಕಾರಣ ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ಸಭೆ, ಸಮಾರಂಭ ನಡೆಸಬೇಕಿದ್ದರೂ ಜಿಲ್ಲಾಡಳಿತದ ಅನುಮತಿ ಪಡೆಯಬೇಕಾದದ್ದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಜಕೀಯ ವ್ಯಕ್ತಿಗಳು ಕಾರ್ಯಕ್ರಮ ನಡೆಸುವುದಿದ್ದರೆ ಮುಂಚಿತವಾಗಿ ಅನುಮತಿ ಪಡೆಯಬೇಕು. ಖಾಸಗಿ ಸಭೆ, ಸಮಾರಂಭಗಳಿದ್ದರೂ ಮಾಹಿತಿ ಕೊಡಬೇಕು. ಜನ್ಮದಿನ ಹಾಗೂ ಖಾಸಗಿ ಕಾರ್ಯಕ್ರಮಗಳ ಮೇಲೂ ನಿಗಾ ಇಡಲಾಗುವುದು ಎಂದು ಹೇಳಿದರು.

ಜಿಲೆಯಲ್ಲಿ 28 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ವಿಡಿಯೊದೊಂದಿಗೆ ಮೂರು ಪಾಳಿಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ವಾಹನಗಳ ಮೇಲೆ ನಿಗಾ ಇಡಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT