ಶನಿವಾರ, ಜನವರಿ 25, 2020
22 °C
ಸೇನಾನಿಯ ಸ್ವಗತ

ಒಟ್ಟಿಗೇ ಉಂಡವರ ಸಾವು ಕಣ್ಣ ಮುಂದೆ

ಬ್ರಿಗೇಡಿಯರ್‌ ಐ. ಎನ್‌. ರೈ Updated:

ಅಕ್ಷರ ಗಾತ್ರ : | |

ಯುದ್ಧ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿತ್ತು. ಈ ಹಂತದಲ್ಲಿ ನಮ್ಮ ಆರಂಭದ ಸ್ಥಳವಾದ ವೇರಾವನ್ನೂ ಕಾಯ್ದುಕೊಳ್ಳುವುದು ಮತ್ತೊಂದು ಸವಾಲು. ಎಲ್ಲರಿಗೂ ಎಲ್ಲಾ ವಿಷಯಗಳನ್ನೂ ವಿವರಿಸಲಾಯ್ತು. ಜವಾಬ್ದಾರಿ ಹಂಚಲಾಯ್ತು. ಶಸ್ತ್ರಾಸ್ತ್ರಗಳನ್ನೂ ಪರೀಕ್ಷಿಸಲಾಯಿತು. ಗ್ರೆನೇಡ್ಸ್ ಗಳನ್ನು ಅಣಿಗೊಳಿಸಲಾಯ್ತು. ಪ್ರತಿಯೊಬ್ಬರ ವಾಚ್‌ಗಳನ್ನೂ ಒಂದೇ ಸಮಯಕ್ಕೆ ಬರುವಂತೆ ಸೆಟ್ ಮಾಡಲಾಯ್ತು.

ಅದು ಡಿಸೆಂಬರ್‌ನ ಮೈ ಕೊರೆಯುವ ಚಳಿ. ಎಲ್ಲೆಲ್ಲೂ ಕತ್ತಲೋ ಕತ್ತಲು. ಒಬ್ಬರನ್ನೊಬ್ಬರು ಅಂಟಿಕೊಂಡೇ ಸಾಗಬೇಕು. ಹಳ್ಳಿಯಲ್ಲಿನ ನಾಯಿಗಳಿಗೂ ಸೂಚನೆ ಸಿಕ್ಕದಂತೆ, ಅವುಗಳು ಬೊಗಳದಂತೆ ಸಾಗಬೇಕಿತ್ತು. ಆಗಾಗ ಗಡಿಯಲ್ಲಿ ಬೆಂಕಿಯುಗುಳುವ ಗನ್ನುಗಳ ಸದ್ದು. ಅಂತೂ ಯಾವುದೇ ಅಡ್ಡಿ ಇಲ್ಲದಂತೆ ದುಸ್ಸೀ ಬಂದ್‌ನನ್ನು ಬಿಟ್ಟು ವೇರಾ ನದಿಯ ಸಮೀಪ ಬಂದೆವು. ಒಂದು ದೀರ್ಘ ಉಸಿರು ನಮ್ಮಿಂದ ಹೊಮ್ಮಿತು. ಅವರವರ ತಂಡದ ಎಲ್ಲರ ಇರುವಿಕೆಯನ್ನು ದೃಢ ಪಡಿಸಿಕೊಂಡೆವು. ಇನ್ನು ನಮ್ಮ ಮುಂದಿನ ಗುರಿ ಯುದ್ಧಾರಂಭದ ತಾಣ... ಮುಂದುವರಿಯಿತು ನಮ್ಮ ಪಯಣ!

ಆಗ ಸಮಯ 10.45ರ ರಾತ್ರಿ ಆಲ್ಫಾ ಮತ್ತು ಚಾರ್ಲಿ ಕಂಪೆನಿಗಳು ತಾಣವನ್ನು ಸೇರಿದ್ದುವು. ಶತ್ರು ಸೈನ್ಯ ಬೀಡು ಬಿಟ್ಟಿರುವ ಎಂಟು ನೂರು ಮೀಟರ್ ಹಿಂದೆ ಅವರು ತಮ್ಮ ಪಯಣಾರಂಭಕ್ಕೆ ಸನ್ನದ್ಧರಾಗಿದ್ದರು. ಇಷ್ಟರ ತನಕವೂ ಶತ್ರು ಸೈನ್ಯಕ್ಕೆ ನಮ್ಮ ಹೆಜ್ಜೆಯ ಜಾಡು ಸಿಗದಂತೆ ಸಾಗುವಲ್ಲಿ ನಾವು ಸಫಲರಾಗಿದ್ದೆವು. ಇನ್ನೇನು, ನಮ್ಮೆಲ್ಲರ ವಾಚ್‌ಗಳು ಹನ್ನೊಂದು ಗಂಟೆ ತೋರಬೇಕು ಎಂಬಾಗ ಶತ್ರು ನೆಲೆಯ ಮೇಲೆ ಭೀಕರವಾದ ಶೆಲ್ ದಾಳಿ ಮಾಡುವುದರ ಮೂಲಕ, ಅವರಿಗೆ ಎಚ್ಚೆತ್ತುಕೊಳ್ಳಲೂ ಅವಕಾಶ ಕೊಡದಂತೆ ಮಣಿಸುವುದು ನಮ್ಮ ಉದ್ದೇಶ-10.50ಕ್ಕೆ ಶತ್ರುವಿಗೆ ಅನಿರೀಕ್ಷಿತವಾಗಿ ಶೆಲ್ ದಾಳಿ ಆರಂಭಿಸಿದೆವು.ಇಡೀ ಭೂಮಿ ನಡುಗಿದಂತೆ ಭಾಸವಾಯ್ತು. ಗಂಟೆ 11ಬಾರಿಸುತ್ತಲೇ ಎರಡು ರೈಫಲ್ ಕಂಪೆನಿಗಳು ತಮ್ಮ ಗುರಿಯತ್ತ ಪಯಣ ಆರಂಭಿಸಿದುವು!!.

ನಾನು ಚಾರ್ಲಿ ಕಂಪೆನಿಯ ಹಿಂದೆ, ನನ್ನ ಕಮಾಂಡಿಂಗ್ ಆಫೀಸರ್ ಜೊತೆ ಇದ್ದೆ. ನಮ್ಮೊಂದಿಗೆ ಇಬ್ಬರು ರೇಡಿಯೋ ಸೆಟ್ ಆಪರೇಟರುಗಳು, ಇಬ್ಬರು ಇಂಟೆಲಿಜೆನ್ಸ್ ಸೈನಿಕರು, ಶಸ್ತ್ರಾಸ್ತ್ರ ವಿಭಾಗ ಕಮಾಂಡರ್ ಗಳು ಇದ್ದರು. ನನಗೆ ಅವಶ್ಯಕ ಯುದ್ಧ ಸಾಮಾಗ್ರಿಗಳ ಜೊತೆಗೆ ನಕ್ಷೆಯನ್ನೂ ಕೊಂಡೊಯ್ಯುವ ಜವಾಬ್ದಾರಿ ಇತ್ತು. ನಮ್ಮ ತಾಣವನ್ನು ಸೇರಿ, ಜೋರಾಗಿ ನಮ್ಮ ಯುದ್ಧ ಘೋಷ ಮಾಡುತ್ತಾ, ನಮ್ಮ ಕಡೆಯಿಂದ ದಾಳಿ ಆರಂಭಿಸುವುದಕ್ಕೂ, ಶತ್ರು ಸೈನ್ಯವೂ ತಮ್ಮ ದಾಳಿ ಆರಂಭಿಸುವುದಕ್ಕೂ ಸರಿ ಹೋಯ್ತು-ಸಮರಾಂಗಣದಲ್ಲಿ ಎಲ್ಲೆಲ್ಲೂ ಯುದ್ಧೋನ್ಮಾದ. 

ಮದ್ದು ಗುಂಡುಗಳ ಸಪ್ಪಳ, ಭೂಮಿಯೇ ನಡುಗುವಂತೆ ಶಬ್ದ, ಎಲ್ಲೆಲ್ಲೂ ಮಿಂಚಿನಂತೆ ಬೆಳಕು, ಈ ಎಲ್ಲದರ ನಡುವೆ ನಮಗೆ ನೆರಳಿನಂತೆ ನಮ್ಮ ಮತ್ತು ಶತ್ರು ಸೈನಿಕರ ಮುಖಾಮುಖಿ ನೆರಳಿನಂತೆ ಕಾಣುತ್ತಿತ್ತು. ಇದರೊಂದಿಗೆ ಸೈನಿಕರ ಚೀತ್ಕಾರ, ಶತ್ರು ದಾಳಿಗೆ ಸಿಕ್ಕು ನೋವಿನ ಉದ್ಗಾ, ದೂಳು, ರಕ್ತ, ಗುಂಡಿನ ಏಟಿಗೆ ಬೊಬ್ಬೆ, ಗ್ರೆನೇಟ್ ಸಿಡಿತದ ಶಬ್ದ....ಎಲ್ಲೆಲ್ಲೂ ಯುದ್ಧ..ಯುದ್ಧ...ಯುದ್ಧ....ಕತ್ತಲೆಯನ್ನು ಸೀಳುವ ಬೆಳಕಿನಲ್ಲಿ ಇವೆಲ್ಲವೂ ನೆರಳಿನಂತೇ ಕಾಣುತ್ತಿತ್ತು.

ಸುಮಾರು ಆರು ತಿಂಗಳಿಗೂ ಹೆಚ್ಚಿನ ಕಾಲ ನಾನು ನನ್ನ ರೈಫಲ್ ಕಂಪೆನಿಯ ಜೊತೆಗಿದ್ದ ಕಾರಣ, ಪ್ರತಿ ಸೈನಿಕನನ್ನು ಕೇವಲ ಅವನ ಸ್ವರದ ಮೇಲೆ ಗುರುತಿಸುವ ಪರಿಣತಿ ಹೊಂದಿದ್ದೆ. ಇದು ಒಬ್ಬರನ್ನೊಬ್ಬರು ಆ ಕತ್ತಲಲ್ಲೂ ಗುರುತಿಸಲು ನನಗೆ ಸಹಾಯವಾಗುತ್ತಿತ್ತು. ಅಲ್ಲಿ ಎಲ್ಲಾ ಸೈನಿಕರಿಗೂ, ಮುಂದುವರಿಯಲು ತಮ್ಮ ನಾಯಕನ ಆಜ್ಞೆ, ಅಣತಿ ಬಹಳ ಮುಖ್ಯವಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ನಮ್ಮ ಆ ಕ್ಷಣದ ನಿರ್ಧಾರ ಬಹಳ ಮುಖ್ಯವಾಗುತ್ತಿತ್ತು. ಈ ಹಂತದಲ್ಲಿ ನಾನು ನನ್ನ ಸೈನಿಕರಿಗೆ ಮುಂದುವರಿಯುವ ಆದೇಶ ನೀಡಿದೆ.  

ಈ ಸಂದರ್ಭದಲ್ಲಿ ಚಾರ್ಲೀ ಕಂಪೆನಿ ಬಹಳ ದೊಡ್ಡ ಪ್ರಮಾಣದಲ್ಲಿ ತನ್ನ ಸೈನಿಕರನ್ನು ಕಳೆದುಕೊಂಡಿತು. ಅವರಿಗೆ ತಮ್ಮ ಗುರಿಯತ್ತ ಮುಂದುವರಿಯುವುದೇ ದೊಡ್ಡ ಸಾಹಸವಾಯ್ತು ಮತ್ತು ಒಂದು ಹಂತದಲ್ಲಿ ಸೈನ್ಯ ಹಿನ್ನಡೆ ಅನುಭವಿಸಿ, ಒಂದೆಡೆ ನಿಂತೇ ಬಿಟ್ಟಿತು. ಕಂಪೆನಿಯ ಕಮಾಂಡರ್ ತನ್ನ ಪಡೆಯ ನಿಯಂತ್ರಣವನ್ನೂ ಕಳೆದುಕೊಂಡು ಸೋಲಿನ ಕಹಿ ಅನುಭವಿಸುವ ಮಟ್ಟಕ್ಕೆ ಆತ್ಮವಿಶ್ವಾಸ ಕುಸಿದು ಹೋಯ್ತು.

ನಾನು ಈ ಪಡೆಯ ಹಿಂದೆ ಮುಂದುವರಿಯುತ್ತಿದ್ದೆ. ಈ ಹಂತದಲ್ಲಿ ನಾನು ಪ್ರತಿಯೊಬ್ಬರನ್ನೂ ಕೂಗಿ ಕೂಗಿ ಕರೆದು ಹುರಿದುಂಬಿಸಲಾರಂಭಿಸಿದೆ-ಅವರೂ ಪ್ರತಿಕ್ರಿಯಿಸಿದರು. ನನ್ನ ಸ್ವರ ಕೇಳುತ್ತಲೇ ಅವರೆಲ್ಲರಿಗೂ ಹೋದ ಜೀವ ಮರಳಿ ಬಂದ ಅನುಭವ. ತಮ್ಮ ನಾಯಕ ನಮ್ಮೊಂದಿಗಿದ್ದಾನೆ ಎಂಬುದೇ ಆ ಕ್ಷಣದ ಬಹು ದೊಡ್ಡ ಆತ್ಮಸ್ಥೈರ್ಯ. ಆಗಲೇ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಸೈನಿಕರು ಉತ್ತೇಜಿತರಾದರು. ಮತ್ತೆ ಅವರನ್ನು ತಡೆಯುವವರಿರಲಿಲ್ಲ. ಕಮಾಂಡರ್ ಸೇರಿದಂತೆ ಎಲ್ಲರೂ ಮತ್ತೆ ಯುದ್ಧೋನ್ಮಾದದ ಸ್ಥಿತಿ ತಲುಪಿದರು. ಮತ್ತೆ ಯುದ್ಧದ ಉದ್ಘೋಷ ಎಲ್ಲೆಡೆ ತುಂಬಿತು. ಯುದ್ಧ ಮುಂದುವರಿಯಿತು.

ನಮ್ಮ ಸ್ವಾಭಿಮಾನ ಮತ್ತು ಅಹಂಗಳನ್ನು ಬಡಿದೆಬ್ಬಿಸಿ, ಸೋಲನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದೆನ್ನುವ ನನ್ನ ಈ ಉನ್ಮಾದಕ್ಕೆ ಎಲ್ಲರಲ್ಲೂ ನವೋಲ್ಲಾಸ ತುಂಬಿತು. ಆದರೆ ಅದು ಅತ್ಯಂತ ಅಪಾಯಕಾರಿ ತೀರ್ಮಾನವೂ ಆಗಿತ್ತು. ಅದಕ್ಕೆ ತಕ್ಕ ಬೆಲೆ ನಾವು ತೆರಲು ಸಿದ್ಧರಾಗಿದ್ದೆವು-ತೆತ್ತೆವು ಕೂಡಾ.

ನನ್ನ ಈ ಕೂಗು, ಅವರನ್ನು ಹುರಿದುಂಬಿಸುವಿಕೆ ಅವರು ಕೇವಲ ಯುದ್ಧದಲ್ಲಿ ಮುನ್ನುಗ್ಗಲು ಮಾತ್ರ ಉತ್ತೇಜನ ನೀಡದೇ, ನಾಯಕನಾದ ನನ್ನನ್ನು ರಕ್ಷಿಸಲೂ ಅವರೆಲ್ಲರೂ ನನ್ನ ಹಿಂದೆ -ಮುಂದೆ, ಸುತ್ತ ರಕ್ಷಣೆಗಾಗಿ ನಿಂತು ಯುದ್ಧ ಮುಂದುವರಿಸಿದರು. ಮತ್ತೆ ಸ್ಪೋಟಕಗಳ ಸದ್ಧು, ರಕ್ತದ ವಾಸನೆ, ದೂಳು ನಮ್ಮನ್ನು ಆವರಿಸಿಕೊಂಡಿತು.

ಹೀಗೆ ಪಾಕ್ ಫತೇಪುರ್‌ ಕೊನೆಗೂ ತಲುಪಿದ ನಾವು ಅಲ್ಲಿಂದ ಎಡಕ್ಕೆ ತಿರುಗಿದೆವು. ಇದೀಗ ನಮ್ಮ ಮುಂದಿನ ಗುರಿ ಬಿಪಿ 85. ಅಲ್ಲಿಗೆ ನಾವು ತಲುಪಿದೆವು ಎಂದಾದರೆ ಫತೇಪುರ್ ನಮ್ಮ ಕೈವಶವಾದಂತೆ.

ಅದೇ ಸಂದರ್ಭದಲ್ಲಿ ಇನ್ನೊಂದೆಡೆ ಬ್ರೇವೋ ಕಂಪೆನಿಯೂ ತನ್ನ ಧಾಳಿ ಮುಂದುವರಿಸುತ್ತಾ, ಪಾಕ್ ಫತೇಪುರ್ ತಲುಪಿತ್ತು. ಈ ಸಂದರ್ಭದಲ್ಲಿ ಹೇಳಲೇ ಬೇಕಾದ ಒಂದು ವಿಷಯ ನೆನಪಾಗುತ್ತದೆ. ಓರ್ವ ನಾಯಕನಾಗಿ ನೀವು ನಿಮ್ಮ ಸೈನಿಕರಿಗೆ ಸದಾ ಧೈರ್ಯ ತುಂಬುತ್ತಿದ್ದರೆ, ಅವರು ಎಂತಹ ಅಪಾಯಕಾರಿ ಸನ್ನಿವೇಶವನ್ನೂ ಎದುರಿಸಿ, ಸಾವಿನ ಹೆಬ್ಬಾಗಿಲನ್ನೂ ಹೊಕ್ಕಲು ಸಿದ್ಧರಾಗಿರುತ್ತಾರೆ!. ಇದು ಈ ಯುದ್ಧದ ವಿಷಯದಲ್ಲಿ ಸತ್ಯವೆಂದೂ ಸಾಬೀತಾಯ್ತು.

ರಾತ್ರಿ 11.00 ಗಂಟೆಯಿಂದ 2.30ರ ತನಕ ಚಾರ್ಲಿ ಕಂಪೆನಿ ಬಂಕರ್‌ಗಳ ಮೂಲಕ ಶತ್ರು ಸೈನ್ಯವನ್ನು ಎದುರಿಸುತ್ತಾ, ಇಂಚಿಂಚಾಗಿ ಮುಂದುವರಿಯುವಲ್ಲಿ ಸಫಲರಾದರು. ಅದು ಸಾವಿನ ನೆರಳಿನಾಟ ಆಗಿತ್ತು. ಪರಿಚಿತ-ಅಪರಿಚಿತ ಸೈನಿಕರೂ ಚೀರುತ್ತಾ, ಕಾದಾಡುತ್ತಾ ತಮ್ಮ ಪ್ರಾಣತ್ಯಾಗ ಮಾಡುತ್ತಿರುವ ದೃಶ್ಯ ನೆರಳಿನಂತೆ ಕಣ್ಣೆದುರಿಗೇ ಕಾಣುತ್ತಿತ್ತು. ಎಷ್ಟು ಜನ ತಮ್ಮವರಿಂದಲೇ ಗುರುತು ಸಿಗದ ಕಾರಣದಿಂದ ಸಾಯಿಸಲ್ಪಟ್ಟರೋ, ಒಟ್ಟೂ ಎಷ್ಟು ಜನ ಹೇಗೆ ಸಾಯುತ್ತಿದ್ದಾರೋ ಒಂದೂ ತಿಳಿಯದ ಗೊಂದಲದ ಸ್ಥಿತಿ. ಆ ಕ್ಷಣದಲ್ಲಿ ಎದುರು ಬಂದವನನ್ನು ಶತ್ರುವೆಂದೇ ಭಾವಿಸಿ ಕೊಲ್ಲುವುದೊಂದೇ ನಮ್ಮ ಉದ್ದೇಶ-ಅದೇ ಆಗುತ್ತಿತ್ತು.

ಬೆಳಗಿನ ಜಾವ 2.30ರ ಹೊತ್ತಿನಲ್ಲಿ ಬ್ರೇವೋ ಮತ್ತು ಚಾರ್ಲಿ ಕಂಪೆನಿಗಳು ಕೊನೆಗೂ ತಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾದವು. ಮುಂದಿನ ನಡೆ ಆಲ್ಫಾ ಮತ್ತು ಡೆಲ್ಟಾ ಕಂಪೆನಿಯದ್ದಾಗಿತ್ತು. ಅವರೂ ತಮ್ಮ ಸ್ಥಳದಿಂದ ತಮ್ಮ ಅಭಿಯಾನವನ್ನು ಆರಂಭಿಸಿದರು. ಇವರ ಮೂಲಕ ಈ ನಮ್ಮ ಕಾರ್ಯಾಚರಣೆಗೆ ಅಂತ್ಯ ಹಾಡಿ ಫತೇಪುರ್ ಅನ್ನು ಸಂಪೂರ್ಣ ಮರಳಿ ವಶಪಡಿಸಿಕೊಳ್ಳಬೇಕಿತ್ತು.

ಈ ಹಂತದಲ್ಲಿ ಆಲ್ಫಾ ಕಂಪೆನಿಯ ಕಂಪೆನಿ ಕಮಾಂಡರ್ ಮೇಜರ್ ತಿರಾತ್ ಸಿಂಘ್ ಅವರ ಶೌರ್ಯವನ್ನು ನಾನಿಲ್ಲಿ ಸ್ಮರಿಸಲೇಬೇಕು.

ಈ ಯುದ್ಧದಲ್ಲಿ ತಿರಾತ್ ಸಿಂಘ್ ತನ್ನ ಸೆಕೆಂಡ್ ಇನ್ ಕಮಾಂಡ್, ಫ್ಲಟೂನ್ ಕಮಾಂಡಗಳು ಮತ್ತು ಅನೇಕ ಸೈನಿಕರನ್ನು ಕಳೆದುಕೊಂಡಿದ್ದರು. ಅವರು ಬೆಳಿಗ್ಗೆಯ ನಾಲ್ಕು ಗಂಟೆಗೆ ಕೊನೆಗೂ ತಮ್ಮ ಗುರಿ ತಲುಪಿ ಇನ್ನೇನು ಮುಗಿಯಿತು ಎಂದು ಕೊಳ್ಳುವಾಗ ಇದ್ದ ಬಿದ್ದ ಪಾಕ್ ಸೈನಿಕರು ಮತ್ತೆ ಒಟ್ಟಾಗಿ ದಾಳಿ ಆರಂಭಿಸಿಯೇ ಬಿಟ್ಟರು. ತನ್ನ ಸೈನ್ಯದ ಮುಂಚೂಣಿಯಲ್ಲಿದ್ದ ಮೇಜರ್ ತಿರಾತ್ ಸಿಂಗ್‍ಗೆ ಇದು ಅನಿರೀಕ್ಷಿತವಾಗಿತ್ತಾದರೂ ಸ್ವಲ್ಪವೂ ಎದೆಗುಂದದೇ ಆತ ಅವರನ್ನು ಎದುರಿಸಿದರು. ಈ ಮೇಜರ್ ಶೌರ್ಯದ ಪರಾಕಾಷ್ಠೆ ಎಷ್ಟಿತ್ತೆಂದರೆ ಒಬ್ಬಂಟಿಯಾಗಿಯೇ ಎದುರಾಳಿಯ ಗುಂಡಿಗೆ ಎದೆಯೊಡ್ಡುತ್ತಲೂ ಹೋರಾಡಿದರು ಮತ್ತು ಅವರನ್ನು ಹಿಮ್ಮೆಟ್ಟಿಸುವಲ್ಲಿ ಹೋರಾಟ ಮುಂದುವರಿಸಿದರು. ಯಶಸ್ವಿಯೂ ಆದರು. ಆದರೆ....

ಮತ್ತೆ 45 ನಿಮಿಷಗಳಲ್ಲಿ ಮತ್ತೆ ಶತ್ರು ಸೈನ್ಯ ಮರುದಾಳಿಗಿಳಿಯಿತು! ಈ ಹಂತದಲ್ಲಿ ಮೇಜರ್ ತಿರಾತ್ ಸಿಂಗ್ ಜೊತೆ ಕೇವಲ ಬೆರಳೆಣಿಕೆಯ ಸೈನಿಕರಿದ್ದರು. ಇನ್ನು ವಶಪಡಿಸಿಕೊಂಡಿದ್ದ ನಮ್ಮ ಪ್ರದೇಶ ಕೈ ತಪ್ಪುತ್ತದೆ ಎಂಬುದು ತಿರಾತ್ ಸಿಂಘ್ ಗೆ ಮನವರಿಕೆಯಾಯಿತು. ಆಗಲೇ ಅವರ ಕೂಗು ಇಡೀ ಪ್ರದೇಶ ಆವರಿಸಿಕೊಂಡಿತು- ಅದುವೇ ರೆಡ್-ರೆಡ್-ರೆಡ್!

ರೆಡ್ ರೆಡ್ ರೆಡ್ ಎಂಬ ಘೋಷದ ಮಹತ್ವ ಹೇಳಲೇ ಬೇಕು. ಯುದ್ಧ ಕಾಲದಲ್ಲಿ ತಮ್ಮ ಸೋಲನ್ನು ಒಪ್ಪಿಕೊಳ್ಳಲಾಗದ ಸೈನಿಕ ಅಥವಾ ನಾಯಕ, ತಾವು ನಿಂತೆಡೆಗೇ ತಮ್ಮ ಪಡೆಗೆ ದಾಳಿ ಮಾಡಲು ಹೇಳುವುದು. ಈ ದಾಳಿಯಲ್ಲಿ ಹೀಗೆ ಆಜ್ಞೆ ನೀಡಿದ ಯೋಧ ಬದುಕುಳಿಯುವ ಸಾಧ್ಯತೆಯೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಆ ಕ್ಷಣದಲ್ಲಿ ದೇಶ ರಕ್ಷಣೆ ಯೋಧನಿಗೆ ಮುಖ್ಯವಾಗಿರುತ್ತದೆ. ಹೀಗೆ ತಿರಾತ್ ಸಿಂಘ್ ರೆಡ್ ರೆಡ್ ರೆಡ್ ಎಂದಾಗ ನಮ್ಮ ಸೈನಿಕರು, ಶತ್ರು ಸೈನ್ಯದ ಮೇಲೆ ಬಾರೀ ಪ್ರಮಾಣದ ದಾಳಿ ಆರಂಭಿಸಿದರು-ಆರಂಭಿಸಲೇಬೇಕಾಗಿತ್ತು.

ಈ ದಾಳಿ ಒಂದು ರೀತಿಯಲ್ಲಿ ಶೌರ್ಯ ಮೆರೆಯುವ ಆತ್ಮಹತ್ಯಾ ಪ್ರಯತ್ನವಾದರೂ ದೇಶ ಮೊದಲೆಂದು ಬಗೆವ ಸೈನಿಕ ಸೋಲೊಪ್ಪದ ಸ್ಥಿತಿಯಲ್ಲಿ ಮೆರೆಯುವ ಶೌರ್ಯವೂ ಹೌದು. ಹಾಗೇ ಆಯ್ತು. ಕೊನೆಗೂ ನಮ್ಮ ಸೈನ್ಯ ಪಾಕ್ ಸೈನ್ಯ ವಶ ಪಡಿಸಿಕೊಂಡಿದ್ದ ಪ್ರದೇಶವನ್ನು ಮರಳಿ ಪಡೆಯಿತು. ಆದರೆ ಮೇಜರ್ ತಿರಾತ್ ಸಿಂಘ್ ಈ ಕದನದಲ್ಲಿ ಹುತಾತ್ಮರಾದರು.

ಎಷ್ಟೋ ಜನರಿಗೆ ಅದು ಕೊನೆಯ ಊಟವೂ ಹೌದು

ಸೇನಾ ಪಡೆಗಳು ಒಂದು ಸ್ಥಳ ಬಿಡುವ ಮೊದಲು ಎಲ್ಲರಿಗೂ ಸರಳ ಊಟ ನೀಡಲಾಗುತ್ತದೆ. ಇದು ಕೆಲವರಿಗೆ ಕೊನೆಯ ಊಟವೂ ಆಗಿರುತ್ತದೆ. ಅಂದಿನ ನಮ್ಮ ಊಟ ಹೆಸರು ಬೇಳೆಯ ದಾಲ್ ಮತ್ತು ಚಪಾತಿ! ಅಲ್ಲಿ ನಾವು ಮೂವರು ಅತ್ಯಂತ ಆಪ್ತ ಸ್ನೇಹಿತರಿದ್ದೆವು. ಒಬ್ಬ ನನಗಿಂತ ಆರು ತಿಂಗಳೂ ಚಿಕ್ಕವನಾಗಿದ್ದರೆ ಮತ್ತೊಬ್ಬ ಆರು ತಿಂಗಳು ದೊಡ್ಡವ. ಲೆಫ್ಟಿನೆಂಟ್‌ ಕರಮ್ ಸಿಂಗ್, ಹಿಮಾಚಲ ಪ್ರದೇಶದವರು ನನಗಿಂತ ಆರು ತಿಂಗಳು ದೊಡ್ಡವರು. ಇನ್ನೊಬ್ಬರು ಪಂಜಾಬ್‍ನ ಲೆಫ್ಟಿನೆಂಟ್‌ ಎಚ್ ಪಿ ನಯ್ಯರ್, ನನಗಿಂತ ಆರು ತಿಂಗಳು ಚಿಕ್ಕವರು- ಹೋಶಿಯಾರ್ ಪುರದವರು. ನಾವು ಮೂವರೂ ಜಲಂಧರ್‌ನಲ್ಲಿ ಒಂದೇ ರೂಂನಲ್ಲಿದ್ದೆವು. ಮೂವರೂ ಕತ್ತಲಲ್ಲಿ ಒಂದು ಮರದಡಿ ಕುಳಿತೆವು. ಒಂದೇ ತಟ್ಟೆಯಲ್ಲಿ ದಾಲ್, ಚಪಾತಿ ಹಾಕಿಕೊಂಡೆವು. ಮುಂಬರುವ ಯುದ್ಧದ ಬಗ್ಗೆ ಯೋಚಿಸದೇ, ಮನಸಾರೆ ತಮಾಷೆ ಮಾಡಿಕೊಂಡೆವು, ಜೋಕ್ ಹೇಳಿಕೊಂಡೆವು. ಗಹಗಹಿಸಿ ನಕ್ಕೆವು. ಕಣ್ಣೀರು ಬರುವಷ್ಟೂ ನಗು-ನಗು-ನಗು. ಮೇಲೆ ಆಕಾಶ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು